ಬೆಂಗಳೂರು:ಮೈಸೂರಿನಲ್ಲಿ ಡ್ರಗ್ಸ್ ತಯಾರಿಕೆ ದಂಧೆ ಬಯಲಾದ ನಂತರವೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಲ್ಲಗಳೆದಿರುವುದನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ರಾಷ್ಟ್ರೀಯ ಅಪರಾಧ ತನಿಖಾ ದಳದ ತಂಡ ದೆಹಲಿಯಿಂದ ಆಗಮಿಸಿ ದಂಧೆಕೋರರನ್ನು ಪತ್ತೆ ಹಚ್ಚಿ ಸುಮಾರು 300 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿರುವುದಾಗಿ ಹೇಳಿಕೆ ಕೊಟ್ಟಿದೆ.
ದಿಕ್ಕು ತಪ್ಪಿಸುವ ಕೆಲಸ
ಇಷ್ಟಾದರೂ ಗೃಹ ಸಚಿವರು ಮತ್ತು ಸ್ಥಳೀಯ ಪೋಲಿಸ್ ಆಯುಕ್ತರು ಸುಳ್ಳು ಮಾಹಿತಿ ನೀಡುವ ಮೂಲಕ ಸಾರ್ವಜನಿಕರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದು, ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ಪೋಲಿಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಪಕ್ಷ ಒತ್ತಾಯಿಸಿದೆ.
ಕರ್ನಾಟಕ, ಅದರಲ್ಲೂ ವಿಶೇಷವಾಗಿ ಮೈಸೂರು ಮತ್ತು ಬೆಂಗಳೂರು ಮಾದಕವಸ್ತು ನಗರಗಳಾಗಿ ಪರಿವರ್ತನೆಗೊಂಡಿರುವುದು ದುರದೃಷ್ಟಕರ, ರಾಜ್ಯವನ್ನು ಡ್ರಗ್ಸ್ ಮುಕ್ತ ಮಾಡುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಪಕ್ಷ ಆಗ್ರಹಿಸಿದೆ.
ಕಾನೂನು ಮತ್ತು ಸುವ್ಯವಸ್ಥೆ ತೀವ್ರ ಕುಸಿದಿದೆ, ಪದೇ ಪದೇ ರಾಜ್ಯದ ವಿವಿಧೆಡೆ ಮಾದಕವಸ್ತು ತಯಾರಿಕೆ ಮತ್ತು ಸರಬರಾಜು ಆಗುತ್ತಿರುವುದನ್ನು ರಾಷ್ಟ್ರೀಯ ಅಪರಾಧ ತನಿಖಾ ದಳದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗುಜರಾತ್, ಮಹಾರಾಷ್ಟ್ರ ಪೊಲೀಸ್
ಕಳೆದ ಕೆಲವು ತಿಂಗಳಿನಿಂದ ಗುಜರಾತ್ ಮತ್ತು ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳು ಕರ್ನಾಟಕಕ್ಕೆ ಬಂದು ಮೈಸೂರು ಮತ್ತು ಬೆಂಗಳೂರಿನಲ್ಲಿ ನಿರ್ಮಾಣಗೊಂಡಿದ್ದ ಡ್ರಗ್ಸ್ ತಯಾರಿಕಾ ಘಟಕಗಳನ್ನು ಕಿತ್ತು ಹಾಕಿಸಿದ್ದೂ ತಿಳಿದಿದೆ.
ಗುಜರಾತ್‌ನ ಮಾದಕ ವಸ್ತು ನಿರೋಧಕ ದಳ ತನಿಖೆ ಮುಂದುವರೆಸಿದ ಪರಿಣಾಮ ಮೈಸೂರಿನಲ್ಲಿ ನಿನ್ನೆ ಮತ್ತೊಂದು ಫ್ಯಾಕ್ಟರಿ ಮೇಲೆ ದಾಳಿ ಮಾಡಿ ಮಾದಕವಸ್ತು ಉತ್ಪಾದನೆ ಸ್ಥಗಿತಗೊಳಿಸಿ, ನಾಲ್ವರನ್ನು ಬಂಧಿಸಲಾಗಿದೆ.
ಸೂರತ್‌ನ ನಾರ್ಕೊಟಿಕ್ಸ್ ಕ್ರೈಂ ಬ್ಯುರೊ ದಾಳಿ ಮಾಡಿದ್ದನ್ನು ದೃಢಪಡಿಸಿದ್ದರೂ ರಾಜ್ಯ ಸರ್ಕಾರ ಎಲ್ಲ ಘಟನಾವಳಿ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಪೊಲೀಸ್ ಕಮೀಷನರ್ ಸುಳ್ಳು ಮಾಹಿತಿ
ಡ್ರಗ್ಸ್ ಫ್ಯಾಕ್ಟರಿಯಲ್ಲಿ ವಶಪಡಿಸಿಕೊಂಡ ಸಾಮಗ್ರಿಗಳ ಕುರಿತು ಸ್ವತಃ ಗೃಹ ಸಚಿವರೇ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಸಾಲದೆಂಬಂತೆ ಮೈಸೂರು ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ದಾಳಿ ವೇಳೆ ಯಾವುದೇ ಅಕ್ರಮ ಪದಾರ್ಥ ಸಿಕ್ಕಿಲ್ಲ ಎಂಬ ಸುಳ್ಳು ಮಾಹಿತಿ ನೀಡಿದ್ದಾರೆ.
ಮೈಸೂರು ಗ್ರಾಮಾಂತರ ಪೊಲೀಸರು ಶಂಕಿತ ವ್ಯಕ್ತಿಗಳ ಸಂಬಂಧಿಕರ ಮನೆ ಮೇಲೆ ನಡೆಸಿದ ದಾಳಿಯಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಮಾದಕವಸ್ತು ‘ಓಪಿಯಂ’ ಸಿಕ್ಕಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.
ಉಡ್ತಾ ಕರ್ನಾಟಕ
ರಾಜ್ಯ ಉಡ್ತಾ ಕರ್ನಾಟಕವಾಗಿ ಪರಿವರ್ತನೆಗೆ ಕಾಂಗ್ರೆಸ್ ದುರಾಡಳಿತವೇ ಕಾರಣವಾಗಿದ್ದು, ಡ್ರಗ್ಸ್ ದಂಧೆ ಯುವಜನಾಂಗದ ದಾರಿ ತಪ್ಪಿಸುತ್ತಿದೆ.
ರಾಜ್ಯದಲ್ಲಿ ಒಂದೆಡೆ ಕೊಲೆ ಸುಲಿಗೆ ನಡೆಯುತ್ತಿದ್ದರೆ, ಮತ್ತೊಂದೆಡೆ ಮಹಿಳೆಯರ ಮೇಲೆ ಅತ್ಯಾಚಾರ, ದಬ್ಬಾಳಿಕೆ ಪ್ರಕರಣಗಳಿಂದ ಒಟ್ಟಾರೆ ಕಾನೂನು ಸುವ್ಯವಸ್ಥೆ ಕುಸಿತವಾಗಿದ್ದು, ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.

