ಬೆಂಗಳೂರು:ಒತ್ತುವರಿ ಸರ್ಕಾರಿ ಭೂಮಿ ತೆರವಿಗೆ ಏಪ್ರಿಲ್‌ನಿಂದ ಮುಲಾಜಿಲ್ಲದೆ ಭಾರೀ ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಎಚ್ಚರಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಉತ್ತುವರಿಯನ್ನು ಯಾವುದೇ ಕಾರಣಕ್ಕೂ ಮಣಿಯದೆ ತೆರವುಗೊಳಿಸಲು ಮುಂದಾಗಿ ಎಂದು ಉಪವಿಭಾಗಾಧಿಕಾರಿಗಳಿಗೆ ಇಂದಿಲ್ಲಿ ಆದೇಶಿಸಿದರು.
ಸಚಿವರ ಆದೇಶ
ಉಪವಿಭಾಗಾಧಿಕಾರಿಗಳ ಜೊತೆ ವಿಡಿಯೊ ಕಾನ್ಫರೆನ್ಸಿಂಗ್‌ನಲ್ಲಿ ಸಚಿವರು ಈ ಆದೇಶ ಮಾಡಿದ್ದಲ್ಲದೆ, ಈಗಾಗಲೇ ಗ್ರಾಮ ಲೆಕ್ಕಿಗರು, ಎಲ್ಲೆಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆಗಿದೆ ಎಂಬುದನ್ನು ಗುರುತಿಸಿದ್ದರು, ಆದರೂ ತೆರವು ಕಾರ್ಯ ಕೈಗೊಂಡಿರಲಿಲ್ಲ.
ಈ ವರ್ಷ ಏಪ್ರಿಲ್ ನಂತರ ಬೀಟ್ ಆಪ್‌ನಲ್ಲಿನ ಮಾಹಿತಿ ಆಧರಿಸಿ ಕ್ರಮಬದ್ಧವಾಗಿ ತೆರವು ಕಾರ್ಯಾಚರಣೆ ನಡೆಯಬೇಕು.
ತಹಸೀಲ್ದಾರ್ ಕಡೆಯಿಂದ ಭೂ ಒತ್ತುವರಿ ತೆರವು ಕಾರ್ಯವನ್ನು ಎಸಿಗಳು ಮಾಡಬೇಕು, ನಗರ ಪ್ರದೇಶಗಳಿಂದಲೇ ಈ ಕೆಲಸ ಆರಂಭವಾಗಲಿ ಎಂದರು.
ಮತ್ತೆ ಆಗದಂತೆ ಎಚ್ಚರ
ಉತ್ತುವರಿ ತೆರವು ನಂತರವೂ ಗ್ರಾಮ ಲೆಕ್ಕಿಗರು ಪ್ರತಿ ಆರು ತಿಂಗಳಿಗೊಮ್ಮೆ ಪ್ರದೇಶಕ್ಕೆ ಭೇಟಿ ನೀಡಿ ಮತ್ತೆ ಒತ್ತುವರಿ ಆಗದಂತೆ ಎಚ್ಚರ ವಹಿಸಬೇಕು.
ಕಂದಾಯ ಅಲ್ಲದೆ, ಬೇರೆ ಇಲಾಖೆಗಳೂ ತಮ್ಮ ಜಮೀನು ಒತ್ತುವರಿ ತೆರವಿಗೆ ಬೀಟ್ ಆಪ್ ತಂತ್ರಾಂಶ ಬಳಸಿಕೊಳ್ಳಬೇಕು.
ಈ ತಂತ್ರಾಂಶ ಸರ್ಕಾರದ ಆಸ್ತಿ ಖಣಜವಾಗಿದ್ದು, ಸಮರ್ಪಕ ಬಳಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಂದಾಯ ಗ್ರಾಮ
ಕೇಂದ್ರ ಸರ್ಕಾರದ ಜನಗಣತಿ ಕಾರಣದಿಂದಾಗಿ ಡಿಸೆಂಬರ್ 31ರ ನಂತರ ಹೊಸ ಕಂದಾಯ ಗ್ರಾಮಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.
ನಾವು ಅಧಿಕಾರಕ್ಕೆ ಬಂದ ನಂತರ 2.3 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದೇವೆ, ಇದರಲ್ಲಿ ನಿಮ್ಮೆಲ್ಲರ ಶ್ರಮ ಇದೆ, ನಿಮ್ಮ ವ್ಯಾಪ್ತಿಗೆ ಬರುವ ಬಾಕಿ ಮೊಕದ್ದಮೆಗಳ ವಿಲೇವಾರಿಗೆ ಆದ್ಯತೆ ಕೊಡಿ ಎಂದರು.


