ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ವಜಾಕ್ಕೆ ಪ್ರತಿಪಕ್ಷಗಳ ಆಗ್ರಹ
ಬೆಂಗಳೂರು:ರಾಜ್ಯ ಬೊಕ್ಕಸಕ್ಕೆ ಕನ್ನ ಹಾಕಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ್ ವಿರುದ್ಧ ಉನ್ನತಮಟ್ಟದ ತನಿಖೆಗೆ ಆದೇಶಿಸಿ, ತಕ್ಷಣದಿಂದ ಸಂಪುಟದಿಂದ ವಜಾ ಮಾಡುವಂತೆ ಪ್ರತಿಪಕ್ಷಗಳು ವಿಧಾನಸಭೆಯಲ್ಲಿಂದು ಒತ್ತಾಯಿಸಿದವು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಸದಸ್ಯ ಮಂಜುನಾಥ್ ಸೇರಿದಂತೆ ಹಲವು ಸದಸ್ಯರು ನಿಯಮ 69ರಡಿ ವಿಷಯ ಪ್ರಸ್ತಾಪಿಸಿ, ವಾರ್ಷಿಕವಾಗಿ 6,000 ಕೋಟಿ ರೂ. ಲಂಚ ರೂಪದಲ್ಲಿ ಪಡೆದು ಖಜಾನೆಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಿದ್ದಾರೆ.
ಕಾಣದ ಕೈ ಸೇರಿಕೊಂಡಿದೆ
ಇಷ್ಟು ದೊಡ್ಡ ಪ್ರಮಾಣದ ಹಾನಿಯಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಕಾಣದ ಕೈ ಸೇರಿಕೊಂಡಿದೆ ಎಂದು ಆರೋಪಿಸಿದರು.
ಕಲಾಪ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ, ಇತ್ತೀಚಿನ ದಿನಗಳಲ್ಲಿ ಜಿಲ್ಲಾ ಅಬಕಾರಿ ಅಧಿಕಾರಿಗಳು ಸೇರಿದಂತೆ ಕೆಳಹಂತದ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇದರಲ್ಲಿ ಮಧ್ಯವರ್ತಿಗಳು ಪಾಲುದಾರರಾಗಿದ್ದು, ಕೆಲವರು ಲೋಕಾಯುಕ್ತರ ಮುಂದೆ ಸಚಿವರ ವಿರುದ್ಧವೇ ದಾಖಲೆ ಸಮೇತ ಹೇಳಿಕೆ ನೀಡಿದ್ದಾರೆ.
ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ಸ್ ದೂರು
ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರದಲ್ಲಿ ಅಧಿಕಾರಿಗಳು ಮತ್ತು ಸಚಿವರ ವಿರುದ್ಧವೇ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ಸ್ ಕರ್ನಾಟಕ ದೂರು ಸಲ್ಲಿಸಿ ಆರೋಪಿಸಿದೆ.
ಸರ್ಕಾರದ ಬೊಕ್ಕಸಕ್ಕೆ 40,000 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ತಂದು ಕೊಡುವ ಸಂಘದ ಸದಸ್ಯರೇ ಗುರುತರ ಆರೋಪ ಮಾಡಿದ್ದರೂ ಆ ಸಚಿವರನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರಲ್ಲಿ ಅರ್ಥವೇನು ಎಂದು ಪ್ರಶ್ನಿಸಿದರು.
ಹೊಸದಾಗಿ ಪರವಾನಗಿ ಪಡೆಯಲು, ಇಲ್ಲವೇ ನವೀಕರಿಸಲು ಭಾರೀ ಪ್ರಮಾಣದಲ್ಲಿ ಲಂಚ ಪಡೆಯಲಾಗುತ್ತಿದೆ, ಅಲ್ಲದೇ ಜಾತಿ ರಾಜಕೀಯವೂ ನಡೆಯುತ್ತಿದೆ ಎಂಬುದಕ್ಕೆ ಮಂಡ್ಯ ಜಿಲ್ಲಾ ಅಬಕಾರಿ ಅಧಿಕಾರಿಯ ಆಡಿಯೊ ಸಾಕ್ಷಿ ಎಂದು ಸದನದ ಮುಂದಿಟ್ಟರು.
ಜಾತಿ ಆಧರಿಸಿ ಪರವಾನಗಿ
ಪರವಾನಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ, ಈ ಅಧಿಕಾರಿ, ನೀನು ಯಾವ ಪಕ್ಷಕ್ಕೆ ಸೇರಿದವನು, ಯಾವ ಜಾತಿ ಎಂದೆಲ್ಲಾ ಕೇಳುತ್ತಾರೆ.
ನಾನು ಯಾವುದೇ ಪಕ್ಷಕ್ಕೆ ಸೇರಿಲ್ಲ ಎಂದ ನಂತರವೂ, ಹಾಗಿದ್ದರೆ, ನೀನು ಒಕ್ಕಲಿಗನಾಗಿದ್ದರೆ ನಿಮ್ಮ ಸಮುದಾಯದ ಮುಖಂಡರನ್ನು ಕರೆದುಕೊಂಡು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡು, ಕುರುಬನಾದರೆ ಆ ಸಮುದಾಯದ ಮುಖಂಡರನ್ನು ಕರೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರನ್ನು ಭೇಟಿ ಮಾಡು ಎಂಬುದಾಗಿ ಅಧಿಕಾರಿಯೇ ಸೂಚಿಸುತ್ತಾರೆ.
ಈ ಅಧಿಕಾರಿಯ ಸಂಭಾಷಣೆಯಲ್ಲಿ ಇನ್ನೂ ಬಹಳಷ್ಟಿದೆ, ಇಷ್ಟನ್ನು ಸದನದ ಗಮನಕ್ಕೆ ತರುತ್ತಿದ್ದೇನೆ, ಸಚಿವರ ವಿರುದ್ಧ ನಾಲ್ಕು ದಾಖಲೆಗಳನ್ನು ಇಟ್ಟಿದ್ದೇನೆ, ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಿ.
ಕಾಣದ ಕೈಯಿಂದ ಜಿಲ್ಲೆಗಳ ವ್ಯವಹಾರ
ಸಚಿವರ ಆಪ್ತರ ಪ್ರಕಾರ, ಅವರಿಗೆ ಮೂರು ಜಿಲ್ಲೆಗಳ ಉಸ್ತುವಾರಿ ಅಷ್ಟೇ ನೀಡಲಾಗಿದೆ, ಉಳಿದ ಜಿಲ್ಲೆಗಳ ವ್ಯವಹಾರವನ್ನು ಕಾಣದ ಕೈಯೊಂದು ನೋಡಿಕೊಳ್ಳುತ್ತಿದೆ, ಈ ಬಗ್ಗೆ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.
ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸಾಬೀತುಪಡಿಸಲು ದಾಖಲೆಗಳನ್ನು ಇಟ್ಟಿದ್ದೇವೆ, ಇನ್ನೂ ಏಕೆ ಮಂತ್ರಿಯನ್ನಾಗಿ ಮುಂದುವರೆಸಿದ್ದೀರಿ, ತಕ್ಷಣ ವಜಾ ಮಾಡಿ ಎಂದು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕರ ಆರೋಪ ವೇಳೆ, ಆಡಳಿತ ಸದಸ್ಯರು ಮೌನವಾಗಿ ಆಲಿಸುತ್ತಿದ್ದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸದನ ಪ್ರವೇಶಿಸುತ್ತಿದ್ದಂತೆ, ಕೆಲವು ಸಚಿವರು ಮತ್ತು ಶಾಸಕರು ವಿರೋಧಿ ಸದಸ್ಯರ ಮೇಲೆ ಹರಿಹಾಯಲು ಶುರು ಮಾಡಿದರು.
ಈ ಹಂತದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆದು ಸದನ ಗದ್ದಲದಲ್ಲಿ ಮುಳುಗಿತು.

