ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆಗೆ ಡಿಸಿಗಳಿಗೆ ಸುತ್ತೋಲೆ
ಬೆಂಗಳೂರು:ಇನ್ನು ಹದಿನೈದು ದಿನದಲ್ಲಿ 100 ತಾಲ್ಲೂಕುಗಳಲ್ಲಿ ಬಗರ್ ಹುಕುಂ ಮಂಜೂರಾತಿ ಸಮಿತಿಗಳನ್ನು ರಚಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಇಲಾಖಾ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 15ರೊಳಗೆ ಉಳಿದ ತಾಲ್ಲೂಕುಗಳಲ್ಲೂ ಈ ಸಮಿತಿಗಳನ್ನು ರಚಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ರೈತರು ಸಲ್ಲಿಸಿರುವ ಅರ್ಜಿಗಳ ವಿಲೇವಾರಿಗೆ 8ತಿಂಗಳ ಸಮಯ ನೀಡಲಾಗಿದೆ. ಅರ್ಹರಲ್ಲದವರಿಗೆ ಜಮೀನು ಮಂಜೂರಾಗುವುದನ್ನು ತಪ್ಪಿಸಲು 15 ವರ್ಷಗಳ ಭೌಗೋಳಿಕ ಮ್ಯಾಪಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.
ಅರ್ಹರಾದವರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಿ, ಕ್ರಯಪತ್ರ ನೋಂದಣಿ ಮಾಡಿಕೊಡುವುದಲ್ಲದೆ, ಪೋಡಿ ಮಾಡಿ ಸ್ಕೆಚ್ ನೀಡಲಾಗುವುದು. ಜೊತೆಗೆ ಜಮೀನಿಗೆ ಹೋಗಲು ರಸ್ತೆಗೆ ಜಾಗವನ್ನು ಬಿಡುತ್ತೇವೆ ಎಂದು ಹೇಳಿದರು.
ಬಗರ್ ಹುಕುಂನಡಿ 9.90 ಲಕ್ಷ ಅರ್ಜಿಗಳು ಸಲ್ಲಿಕೆ
ಒಬ್ಬರ ಹೆಸರಿನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿರುವುದು, ಸಾಗುವಳಿ ಮಾಡದವರೂ ಅರ್ಜಿ ಹಾಕಿರುವುದೂ ಕಂಡು ಬಂದಿದೆ, 9.90 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಹತ್ತಾರು ವರ್ಷದಿಂದಲೂ ಬಗರ್ ಹುಕುಂ ಅರ್ಜಿಗಳು ವಿಲೇವಾರಿಯಾಗದೆ, ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಮೇಲಿನಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರೈತರು ತಮ್ಮ ಎಲ್ಲಾ ಸರ್ವೆ ನಂಬರ್‌ಗಳ ಜಮೀನಿನ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನವೆಂಬರ್ ಅಂತ್ಯದೊಳಗೆ ದಾಖಲಿಸಬೇಕು. ಒಂದೆರಡು ಸರ್ವೆ ನಂಬರ್‌ಗಳ ಮಾಹಿತಿಯನ್ನು ದಾಖಲಿಸಿದರೆ ಅಷ್ಟೆ ಮಾತ್ರ ಬೆಳೆ ಪರಿಹಾರ ಸಿಗುತ್ತದೆ.
ಬರ ಪರಿಹಾರ ನೀಡುವಂತೆ ಸಲ್ಲಿಸಿರುವ ಮನವಿ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡ ನಂತರ ರಾಜ್ಯ ಸರ್ಕಾರ ಬೆಳೆ ಪರಿಹಾರ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದರು.
24 ಗಂಟೆಯೊಳಗೆ ಟ್ಯಾಂಕರ್ ಮೂಲಕ ನೀರು
ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಖಾಸಗಿ ಬೋರ್ ವೆಲ್‌ಗಳನ್ನು ಬಾಡಿಗೆ ಪಡೆಯಲು ಸೂಚಿಸಿದ್ದು, ಸಮಸ್ಯೆ ಉಂಟಾದ 24 ಗಂಟೆಯೊಳಗೆ ಟ್ಯಾಂಕರ್ ಮೂಲಕ ನೀರು ಒದಗಿಸಲು ನಿದೇರ್ಶನ ನೀಡಲಾಗಿದೆ.
ಡಿಸೆಂಬರ್‌ನಿಂದ ಜಾನುವಾರುಗಳ ಮೇವಿಗೆ ಅಭಾವ ಉಂಟಾಗುವ ಸಂಭವವಿದ್ದು, ಮೇವು ಖರೀದಿಸಿ ಗೋಶಾಲೆ ಮೂಲಕ ವಿತರಿಸಲು ಸೂಚಿಸಲಾಗಿದೆ.
ಈಗಾಗಲೇ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲು ಜಿಲ್ಲಧಿಕಾರಿಗಳಿಗೆ ನಿದೇರ್ಶನ ನೀಡಿದ್ದು, ನರೇಗ ಯೋಜನೆಯಡಿ ಹೆಚ್ಚು ಉದ್ಯೋಗ ನೀಡುವಂತೆಯೂ ತಿಳಿಸಲಾಗಿದೆ.
ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ತಹಶೀಲ್ದಾರ್ ನ್ಯಾಯಾಲಯದಲ್ಲಿ ಬಾಕಿ ಇದ್ದ 2215 ಪ್ರಕರಣಗಳನ್ನು 750ಕ್ಕೆ ಇಳಿಸಲಾಗಿದೆ. ಜನವರಿ ವೇಳೆಗೆ 90 ದಿನಕ್ಕೂ ಹೆಚ್ಚು ಅವಧಿಯ ಪ್ರರಣಗಳು ಇರಬಾರದು, ಈಗ ಬಾಕಿ ಇರುವ ಪ್ರಕರಣಗಳನ್ನು ಡಿಸೆಂಬರ್ ಅಂತ್ಯದೊಳಗೆ ವಿಲೇವಾರಿ ಮಾಡಲು ಕಟ್ಟಾದೇಶ ಮಾಡಲಾಗಿದೆ. ಪ್ರಕರಣಗಳ ಸರಾಸರಿ ವಿಲೇವಾರಿ ಅವಧಿಯನ್ನು 212 ದಿನಗಳಿಂದ 130 ದಿನಕ್ಕೆ ಇಳಿಸಲಾಗಿದೆ.
ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಒಂದು ವರ್ಷ ಮೇಲ್ಪಟ್ಟ 59336 ಪ್ರಕರಣಗಳು ಬಾಕಿ ಇದ್ದವು ಈಗ ಅವು 30000ಕ್ಕೆ ಇಳಿಕೆಯಾಗಿವೆ. ಮಾರ್ಚ್ ವೇಳೆಗೆ 6ತಿಂಗಳಿಗಿಂತ ಹೆಚ್ಚು ಅವಧಿಯ ಪ್ರಕರಣ ಇರದಂತೆ ಇತ್ಯರ್ಥಪಡಿಸಬೇಕು, ಇದಕ್ಕಾಗಿ ಎಸಿಗೆ ತತ್ಸಮನಾದ ಅಧಿಕಾರಿಯನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಡಿಸೆಂಬರ್ 1ರಿಂದ ಹೊಸ ಇ-ಕಡತ ಆರಂಭಿಸಲು ನಿರ್ದೇಶನ
ತಾಂಡ ಸೇರಿದಂತೆ 1800 ಜನ ವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಮಾರ್ಪಾಡು ಮಾಡಿಲ್ಲ, ಜನವರಿ ಅಂತ್ಯಕ್ಕೆ 1500 ಜನ ವಸತಿಗಳನ್ನು ಕಂದಾಯ ಗ್ರಾಮ ಇಲ್ಲವೇ ಉಪಗ್ರಾಮವಾಗಿ ಘೋಷಿಸಲು ಸೂಚಿಸಲಾಗಿದೆ.
ಇ-ಕಚೇರಿ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಪ್ರಾಂಭವಾಗಿದ್ದು ಡಿಸೆಂಬರ್ 1ರಿಂದ ಹೊಸ ಇ-ಕಡತ ಆರಂಭಿಸಲು ನಿರ್ದೇಶನ ನೀಡಲಾಗಿದೆ.