ಡಿ. 31ರವರೆಗೆ ನಿತ್ಯ 3216 ಕ್ಯೂಸೆಕ್ಸ್ ನೀರು ಹರಿಸಲು ಸೂಚನೆ
ಬೆಂಗಳೂರು: ನೈರುತ್ಯ ಮುಂಗಾರು ಹಾಗೂ ಈಶಾನ್ಯ ಹಿಂಗಾರು ಮಳೆ ಕೈಕೊಟ್ಟು ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಪರಿಸ್ಥಿತಿ ಆವರಿಸಿರುವುದರ ನಡುವೆಯು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಆರ್ ಸಿ)ಯು ತಮಿಳನಾಡಿಗೆ ನೀರು ಬಿಡುವಂತೆ ನಿರ್ದೇಶನ ನೀಡುವ ಮೂಲಕ ಕರ್ನಾಟಕಕ್ಕೆ ಮತ್ತೊಂದು ಶಾಕ್ ನೀಡಿದೆ.
ಈ ವರ್ಷ ನಡೆದ ಪ್ರತಿ ಸಭೆಯಲ್ಲೂ ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ಮಾಡುತ್ತಾ ಬಂದಿರುವ ಸಿಡಬ್ಲ್ಯುಆರ್ ಸಿಯು ಇಂದು ನಡೆದ ಸಭೆಯಲ್ಲೂ ಅದನ್ನೇ ಮಾಡಿದೆ.
ಕಾವೇರಿ ನದಿಯಿಂದ ತಮಿಳುನಾಡಿಗೆ ಡಿಸೆಂಬರ್ ಅಂತ್ಯದವರೆಗೆ ಪ್ರತಿ ದಿನ 3216 ಕ್ಯೂಸೆಕ್ಸ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿದೆ.
ಕರ್ನಾಟಕದ ಜಲಾಶಯಗಳಿಂದ ನೀರು ಬಿಡುಗಡೆ ಸಾಧ್ಯವಿಲ್ಲ
ಇಂದು ನಡೆದ ಸಿಡಬ್ಲ್ಯುಆರ್ ಸಿ ಯ 90ನೇ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಈಗ ಮಳೆಯಾಗುತ್ತಿಲ್ಲ. ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿರುವುದರಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳು ಇಲ್ಲ.
ಕಾವೇರಿ ನದಿಪಾತ್ರದ ನಾಲ್ಕು ಜಲಾಶಯಗಳಿಗೆ ಒಳಹರಿವು ಬಹತೇಕ ಸ್ಥಗಿತವಾಗಿದ್ದು, ಸಂಗ್ರಹವಾಗಿರುವ ನೀರು ಸಹ ಮುಂದಿನ ಮಳೆಗಾಲದವರೆಗೆ ಕುಡಿಯುವ ನೀರು, ಬೆಳೆಗಳಿಗೆ ಸಾಲುವುದಿಲ್ಲ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಸ್ಥಿತಿಯಲ್ಲಿ ನಾವಿಲ್ಲ ಎಂಬ ಕರ್ನಾಟಕದ ವಾದವನ್ನು ಸಿಡಬ್ಲ್ಯುಆರ್ ಸಿ ಪರಿಗಣಿಸಿಲ್ಲ.
ಕರ್ನಾಟಕವು ಸಿಡಬ್ಲ್ಯುಆರ್ ಸಿ ಮುಂದೆ ರಾಜ್ಯದ ವಾಸ್ತವ ಸಂಗತಿಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ಅಂದರೆ, ನವೆಂಬರ್ 22 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇ. 52.24ರಷ್ಟಿದೆ.
38 ದಿನಗಳವರೆಗೆ ಪ್ರತಿ ದಿನ 3216 ಕ್ಯೂಸೆಕ್ಸ್ ನೀರು ಹರಿಸಲು ಸಿಡಬ್ಲ್ಯುಆರ್ ಸಿ ಶಿಫಾರಸು
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಅಕ್ಟೋಬರ್ ಒಂದರಿಂದ ತಮಿಳುನಾಡಿನಲ್ಲಿ ಮಳೆಯು ಸಾಮಾನ್ಯವಾಗಿದೆ. ಆದ್ದರಿಂದ ಈಶಾನ್ಯ ಹಿಂಗಾರು ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತು ಮೆಟ್ಟೂರು ಜಲಾಶಯದ ಕೆಳಗಿನ ಪ್ರದೇಶಗಳಲ್ಲಿ ತೃಪ್ತಿಕರ ಮಳೆಯ ಪರಿಸ್ಥಿತಿ ಲಭ್ಯವಿರುತ್ತದೆ ಎಂಬ ಸೂಚನೆಗಳಿವೆ.
ತಮಿಳುನಾಡಿನ ಕುರುವಾಯಿ ಬೆಳೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಟಾವಿಗೆ ಬಂದಿತ್ತು. ಈ ಬೆಳೆಗೆ ನೀರಿನ ಅವಶ್ಯಕತೆ ಇರುವುದಿಲ್ಲ. ಸಾಂಬಾ ಬೆಳೆ ಕೂಡ ಕೊಯ್ಲು ಹಂತವನ್ನು ತಲುಪಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಿದೆ.
ಕರ್ನಾಟಕದ 4 ಜಲಾಶಯಗಳಿಗೆ ಒಳಹರಿವು ಸ್ಥಗಿತಗೊಂಡಿದೆ. ಅಂದರೆ ನವೆಂಬರ್ 21ರಲ್ಲಿನ ಮಾಹಿತಿ ಪ್ರಕಾರ ಕರ್ನಾಟಕದ 4 ಜಲಾಶಯಗಳಲ್ಲಿ ಪ್ರಸ್ತುತ ನೀರಿನ ಸಂಗ್ರಹವು ನೀರಾವರಿ, ಕುಡಿಯುವ ಮತ್ತು ಇತರ ಅಗತ್ಯಗಳ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುವುದಿಲ್ಲ ಎಂದು ತಿಳಿಸಿದೆ.
ಜಲಾನಯನ ಪ್ರದೇಶದಿಂದ ಸ್ವಾಭಾವಿಕವಾಗಿ ಅನಿಯಮಿತವಾಗಿ ಲಭ್ಯವಾಗುವ ನೀರನ್ನು ಹೊರತುಪಡಿಸಿ ಬಿಳಿಗುಂಡ್ಲು ಜಲ ಮಾಪನ ಕೇಂದ್ರ ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಕರ್ನಾಟಕದ ಜಲಾಶಯದಿಂದ ಯಾವುದೇ ಪ್ರಮಾಣದ ನೀರು ಬಿಡುಗಡೆಗೆ ನಿರ್ದೆಶನವನ್ನು ನೀಡದಂತೆ ಸಮಿತಿಯನ್ನು ಕೋರಿದೆ.
30 ದಿನಗಳ ಕಾಲ ಕರ್ನಾಟಕವು 5000 ಕ್ಯೂಸೆಕ್ ನೀರು ಬಿಡಬೇಕು
ಆದರೆ, ನೆರೆಯ ತಮಿಳುನಾಡು ಮುಂದಿನ 30 ದಿನಗಳ ಕಾಲ ಕರ್ನಾಟಕವು 5000 ಕ್ಯೂಸೆಕ್ ನೀರು ಬಿಡಬೇಕು ಎಂದು ಒತ್ತಾಯಿಸಿದೆ.
ಎರಡು ರಾಜ್ಯಗಳ ಮನವಿಯನ್ನು ಆಲಿಸಿದ ಸಿಡಬ್ಲ್ಯುಆರ್ ಸಿ ಅಂತಿಮವಾಗಿ, ನವೆಂಬರ್ ತಿಂಗಳ ಉಳಿದ ಅವಧಿಗೆ ಹಾಗೂ ಡಿಸೆಂಬರ್ ತಿಂಗಳ ಪೂರ್ಣ ಅವಧಿಗೆ ಕರ್ನಾಟಕವು, ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ ಸಿಡಬ್ಲ್ಯುಡಿಟಿ ಯ ಆದೇಶದ ಪ್ರಕಾರ ನಿಗದಿತ ಪ್ರಮಾಣದ ನೀರಿನ ಹರಿವನ್ನು ಖಚಿತಪಡಿಸಿಕೊಳ್ಳಬೇಕೆಂದು ಹೇಳಿದೆ. ಅಂದರೆ ನವೆಂಬರ್ 24 ರಿಂದ ಡಿಸೆಂಬರ್ 31ರವರೆಗೆ (38 ದಿನಗಳು) ಪ್ರತಿ ದಿನ 3216 ಕ್ಯೂಸೆಕ್ಸ್ ನೀರು ಹರಿಸಲು ಶಿಫಾರಸು ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.