ಬೆಳಗಾವಿ-ಬೆಂಗಳೂರು-ದೆಹಲಿ
ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನ ಮುಗಿಸಿಕೊಂಡು ಬಂದ ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಅನೇಕ ಸದಸ್ಯರು ದೆಹಲಿಯತ್ತ ಹೊರಟಿದ್ದಾರೆ.
ಸಚಿವ ಆಕಾಂಕ್ಷಿಗಳಾಗಿದ್ದ ಹಿರಿಯ ಸದಸ್ಯರಿಗೆ ನಿಗಮ-ಮಂಡಳಿಗಳಿಗೆ ನೇಮಕಾತಿ ಹಾಗೂ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿ ಕುರಿತು ಚರ್ಚೆ ನಡೆಸಲು ವರಿಷ್ಠರು ರಾಜ್ಯ ನಾಯಕರಿಗೆ ಬುಲಾವ್ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಾಳೆಯಿಂದ ಎರಡು-ಮೂರು ದಿನಗಳ ಕಾಲ ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಬಗ್ಗೆ ಚರ್ಚೆ ನಡೆಯಲಿದೆ.
ವರಿಷ್ಠರ ಆಹ್ವಾನದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ, ಜಮೀರ್ ಅಹಮದ್ ಖಾನ್, ಎಂ.ಬಿ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ಜೆ.ಜಾರ್ಜ್ ಸೇರಿದಂತೆ ಹಿರಿಯ ಸಚಿವರು ದೆಹಲಿಗೆ ತೆರಳುತ್ತಿದ್ದಾರೆ.
ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು
ಪಂಚ ರಾಜ್ಯಗಳ ಚುನಾವಣಾ ವೈಫಲ್ಯದ ನಂತರ ಲೋಕಸಭಾ ಚುನಾವಣೆಯಲ್ಲಿ ಇದು ಪುನರಾವರ್ತನೆ ಆಗದಂತೆ ನೋಡಿಕೊಳ್ಳಲು ಅದರಲ್ಲೂ ಎಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಬೆಂಬಲ ಇದೆಯೋ ಅಂತಹ ಕಡೆ ಮುಂಜಾಗೃತಾ ಕ್ರಮ ಹಾಗೂ ಅಭ್ಯರ್ಥಿಗಳ ಆಯ್ಕೆ ಕಸರತ್ತನ್ನು ಎಐಸಿಸಿ ಆರಂಭಿಸಿದೆ.
ಕರ್ನಾಟಕದಿಂದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳ ಗೆಲುವಿನ ಗುರಿ ಇಟ್ಟಿರುವ ವರಿಷ್ಠರು ಎಲ್ಲ ರೀತಿಯ ತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಅವಕಾಶ ದೊರೆಯದೆ ಅಸಮಾಧಾನಗೊಂಡಿರುವ ಹಿರಿಯ ಸದಸ್ಯರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಕಲ್ಪಿಸುವುದು ಸೇರಿದೆ.
ಯಾರಿಗೆ ನಿಗಮ-ಮಂಡಳಿ
ಈಗಾಗಲೇ ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ರಾಜ್ಯ ನಾಯಕರೊಂದಿಗೆ ಚರ್ಚಿಸಿ, 34 ಶಾಸಕರನ್ನು ಗುರುತಿಸಿ, ಇವರಿಗೆ ಯಾವ ನಿಗಮ-ಮಂಡಳಿ ನೀಡಬೇಕೆಂಬ ಒಂದು ಚಿತ್ರಣ ಸಿದ್ಧಪಡಿಸಿದ್ದಾರೆ.
ಯಾವ ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಗೆಲುವಿನ ಸಮೀಪ ಇದೆಯೋ ಅದನ್ನು ಮತ್ತಷ್ಟು ಭದ್ರ ಮಾಡಿಕೊಳ್ಳಲು ಅಂತಹ ಕ್ಷೇತ್ರಗಳಿಗೆ ನಿಗಮಗಳ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುತ್ತಿದೆ.
ಇದೆಲ್ಲದ್ದಕ್ಕೂ ಮಿಗಿಲಾಗಿ ರಾಜ್ಯದಲ್ಲಿ ಬಲಿಷ್ಠ ಸರ್ಕಾರ ಇದ್ದರೂ ಆಪರೇಷನ್ ಕಮಲದ ಭೂತ ವರಿಷ್ಠರನ್ನು ಕಾಡುತ್ತಿದೆ.
ಎರಡು-ಮೂರು ದಿನಗಳ ಮ್ಯಾರಥಾನ್ ಚರ್ಚೆ
ಮುನ್ನೆಚ್ಚರಿಕೆಯಾಗಿ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಂಡು, ಲೋಕಸಭಾ ಚುನಾವಣೆ ಎದುರಿಸಿ ಹೆಚ್ಚು ಸ್ಥಾನ ಗಳಿಸುವ ಉದ್ದೇಶದಿಂದಲೇ ದೆಹಲಿಯಲ್ಲಿ ಎರಡು-ಮೂರು ದಿನಗಳ ಮ್ಯಾರಥಾನ್ ಚರ್ಚೆ ನಡೆಯಲಿದೆ.
ಇದಕ್ಕಾಗಿಯೇ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ನೇಮಕವಾಗಿದ್ದ ಸಚಿವರುಗಳನ್ನು ದೆಹಲಿಗೆ ಕರೆಸಿಕೊಂಡು ಅವರೊಂದಿಗೆ ಮುಖಾಮುಖಿ ಚರ್ಚೆ ನಡೆಸಲಿದ್ದಾರೆಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯದ ನಾಯಕರೊಂದಿಗೆ ಚರ್ಚೆ ಮಾಡಲಿದ್ದಾರೆ.
2 comments
[…] ರಾಜ್ಯ […]
[…] ರಾಜ್ಯ […]