ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳ ಸ್ಥಾಪನೆ;
ಆರು ಜಿಲ್ಲೆಗಳಲ್ಲಿ ಬಹುಉತ್ಪನ್ನ ಶೀಥಲ ಗೃಹ
ಬೆಂಗಳೂರು:ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಲಾ ಎರಡು ಸೀರೆಗಳನ್ನು ವಿತರಿಸಲು ರಾಜ್ಯ ಸಚಿವ ಸಂಪುಟ ಇಂದಿಲ್ಲಿ ತೀರ್ಮಾನ ಕೈಗೊಂಡಿದೆ.
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 1,37,469 ಕಾರ್ಯಕರ್ತೆಯರಿಗೆ ಈ ಸೀರೆಗಳು ಲಭ್ಯವಾಗಲಿವೆ. ಸೀರೆ ಖರೀದಿಗಾಗಿ 13.75 ಕೋಟಿ ರೂ.ಗಳನ್ನು ನೀಡಲು ಸಂಪುಟ ಸಮ್ಮತಿಸಿದೆ.
ಆನ್ ಲೈನ್ ಮೂಲಕ ಮದುವೆ ನೋಂದಣಿಗೆ ಅವಕಾಶ ಕಲ್ಪಿಸಲು ಹಿಂದೂ ವಿವಾಹ ಕಾಯಿದೆ ತಿದ್ದುಪಡಿಗೆ ಸಮ್ಮತಿಸಿದ್ದು ಇದರಿಂದ ವಿವಾಹ ನೋಂದಣಿ ಸರಳೀಕರಣಕ್ಕೆ ಸಹಕಾರಿಯಾಗಲಿದೆ.
ಈ ಮೊದಲು ಉಪನೋಂದಣಿ ಅಧಿಕಾರಿಗಳ ಕಚೇರಿಗಳಲ್ಲಿ ವಿವಾಹ ನೋಂದಣಿ ಆಗುತ್ತಿದ್ದವು, ಈಗ ಆನ್ ಲೈನ್ ಮೂಲಕ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿ
ಕಾವೇರಿ-2 ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಬಹುದು, ಇದರಿಂದ ಉಪನೋಂದಣಿ ಕಚೇರಿಗಳಿಗೆ ಅಲೆಯುವಂತಿಲ್ಲ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ವತಿಯಿಂದ ಮೈಸೂರು ಹಾಗೂ ಕಲಬುರಗಿಯಲ್ಲಿ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜುಗಳನ್ನು ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲು ಸಂಪುಟ ಒಪ್ಪಿಗೆ ನೀಡಿದೆ.
ಹಿಂದೂ ವಿವಾಹಗಳ ನೋಂದಣಿ ನಿಯಮಾವಳಿಗಳಿಗೆ ಮಾಡಿರುವ ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ.
ನಬಾರ್ಡ್ ನೆರವಿನೊಂದಿಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ಬಹು ಉತ್ಪನ್ನ ಶೀಥಲ ಗೃಹಗಳನ್ನು 65.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣ
ರಾಜ್ಯದ ಆರು ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು 100 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲು ಸಭೆ ಸಮ್ಮತಿಸಿದೆ. ಮೈಸೂರು, ಕಲಬುರಗಿ, ಬೆಂಗಳೂರು, ರಾಯಚೂರು, ಬಳ್ಳಾರಿ ಹಾಗೂ ವಿಜಯಪುರ ತರಬೇತಿ ಸಂಸ್ಥೆಗಳಲ್ಲಿ ಉನ್ನತೀಕರಣ ನಡೆಯಲಿದೆ.
ಹಾಸನ ವೈದ್ಯಕೀಯ ವಿಜ್ಞಾಗಳ ಸಂಸ್ಥೆ ಆವರಣದಲ್ಲಿ ೪೫೦ ಹಾಸಿಗೆ ಸಾಮರ್ಥ್ಯದ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು 142.47 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ದೊಡ್ಡ ಹುಣಸೂರು ಗ್ರಾಮದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಜಮೀನು ಮಂಜೂರು ಮಾಡಲಾಯಿತು.
ರಾಜ್ಯದ 104 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ವಾತಾವರಣ ಅಭಿವೃದ್ಧಿಗೆ ಸಂಪುಟ ಅನುಮತಿ ನೀಡಿದೆ.
ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಲಿರುವ ಭಾಷಣಕ್ಕೆ ಸಂಪುಟ ಅನುಮೋದನೆ ನೀಡಿದೆ.
ಫೆಬ್ರವರಿ 12 ರಿಂದ ವಿಧಾನಮಂಡಲದ ಬಜೆಟ್ ಅಧಿವೇಶನ
ಫೆಬ್ರವರಿ 12 ರಿಂದ ವಿಧಾನಮಂಡಲದ ಬಜೆಟ್ ಅಧಿವೇಶನ ಆರಂಭಗೊಳ್ಳಲಿದ್ದು, ಮೊದಲ ದಿನ ರಾಜ್ಯಪಾಲರು ಜಂಟಿ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಫೆಬ್ರವರಿ 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, 2024-25 ನೇ ಸಾಲಿನ ರಾಜ್ಯ ಮುಂಗಡಪತ್ರ ಮಂಡಿಸಲಿದ್ದಾರೆ.