ಹಿಂದೆ ಯಾವುದೇ ಸರ್ಕಾರ ಕಾಂಗ್ರೆಸ್‌ನಂತೆ ಗ್ಯಾರಂಟಿ ನೀಡಿರಲಿಲ್ಲ
ಬೆಂಗಳೂರು: ಕೇವಲ ಸುಳ್ಳನ್ನು ಹೇಳುವ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗ್ಯಾರಂಟಿ ಎಂಬ ಭರವಸೆಗೆ ಜನರು ಮರುಳಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹೊಸ ವಿನ್ಯಾಸದ 100 ’ಅಶ್ವಮೇಧ ಕ್ಲಾಸಿಕ್’ ಬಸ್ಸುಗಳ ಲೋಕಾರ್ಪಣೆ ನಂತರ ಮಾತನಾಡಿದ ಅವರು, ಎಲ್ಲ ಜಾತಿ ಧರ್ಮಗಳ ಬಡವರಿಗೆ ಪಕ್ಷಾತೀತ, ಜಾತ್ಯತೀತವಾಗಿ, ಎಲ್ಲ ಮಹಿಳೆಯರಿಗೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ, ಹಿಂದೆ ಯಾವುದೇ ಸರ್ಕಾರ ಇಂತಹ ಪ್ರಯತ್ನ ಮಾಡಿರಲಿಲ್ಲ ಎಂದರು.
ಗ್ಯಾರಂಟಿಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಜಾರಿಗೊಳಿಸಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು.
ಯಾವುದೇ ಭರವಸೆಗಳನ್ನು ಈಡೇರಿಸದ ಪ್ರಧಾನಿ
ಬಿಜೆಪಿ 10 ವರ್ಷದಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಇಂತಹ ಗ್ಯಾರಂಟಿಗಳನ್ನು ಜನಗರಿಗೆ ನೀಡಲಿಲ್ಲ, ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದರೆ ಭಾರತದ ಪ್ರತಿ ಕುಟುಂಬಕ್ಕೂ 15 ಲಕ್ಷ ರೂ. ನೀಡುವ, ಪ್ರತಿ ವರ್ಷ ೨ ಕೋಟಿ ಉದ್ಯೋಗ ಸೃಷ್ಟಿಸುವ, ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದ್ದರು.
ಈ ಯಾವುದೇ ಭರವಸೆಗಳನ್ನು ಈಡೇರಿಸದ ಪ್ರಧಾನಿ ಮೋದಿ ಈಗ ಗ್ಯಾರಂಟಿ ಎಂಬ ಸುಳ್ಳು ಹೇಳುತ್ತಿದ್ದಾರೆ. ಅವರ ಸುಳ್ಳುಗಳಿಗೆ ಜನರು ಮರುಳಾಗಬಾರದು ಎಂದರು.
1.17 ಕೋಟಿ ಮಹಿಳಾ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದೆ, ಶಕ್ತಿ ಯೋಜನೆಯಡಿ 4,530 ಕೋಟಿ ರೂ. ವೆಚ್ಚವಾಗಿದೆ, ಅನ್ನಭಾಗ್ಯದಡಿ 5 ಕೆ.ಜಿ. ಅಕ್ಕಿಯ ಜೊತೆ 5 ಕೆ.ಜಿ. ಅಕ್ಕಿಯ ಮೊತ್ತ, ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಜನರಿಗೆ ಆರ್ಥಿಕ ಸಹಾಯ ನೀಡುತ್ತಿದ್ದೇವೆ.
ಪ್ರತಿ ಕುಟುಂಬಕ್ಕೆ ಆರ್ಥಿಕ ಸಹಾಯ
ರಾಜ್ಯದ ಪ್ರತಿ ಕುಟುಂಬಕ್ಕೆ ಮಾಸಿಕ 4 ರಿಂದ 5 ಸಾವಿರ ರೂ. ಆರ್ಥಿಕ ಸಹಾಯ ನೀಡುವ ಮೂಲಕ ಜನರ ಖರೀದಿ ಶಕ್ತಿಯನ್ನು ಹೆಚ್ಚಿಸಲಾಗಿದೆ. ಪಂಚಗ್ಯಾರಂಟಿಗಳು ರಾಜ್ಯದ 4.50 ಕೋಟಿ ಜನರಿಗೆ ತಲುಪುತ್ತಿವೆ.
ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಬಿಟ್ಟಿ ಭಾಗ್ಯ ಎಂದು ಕೀಳುಮಟ್ಟದ ಮಾತುಗಳನ್ನು ಬಿಜೆಪಿಯವರು ಆಡಿದರು. ಬಡವರ ಬಗ್ಗೆ ಕಾಳಜಿ ಇದ್ದು, ರಾಜಕೀಯ ಇಚ್ಛಾಶಕ್ತಿ ಇದ್ದಾಗ ಮಾತ್ರ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ. ಬಡವರಿಗೆ ಆರ್ಥಿಕ ಶಕ್ತಿ ತುಂಬುವುದು ಕಾಂಗ್ರೆಸ್‌ನ ಬದ್ಧತೆ ಎಂದರು.
’ಅಶ್ವಮೇಧ ಕ್ಲಾಸಿಕ್’ ಬಸ್
ಇಂದು ಲೋಕಾರ್ಪಣೆಗೊಂಡ ಹೊಸ ವಿನ್ಯಾಸದ 100 ’ಅಶ್ವಮೇಧ ಕ್ಲಾಸಿಕ್’ ಬಸ್‌ಗಳಲ್ಲಿ ರಾಜ್ಯ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಸ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇನ್ನು 800 ಬಸ್‌ಗಳನ್ನು 2024 ರ ಮೇ ಅಂತ್ಯದೊಳಗೆ ಸಾರ್ವಜನಿಕರ ಸೇವೆಗೆ ಬಿಡಲು ಸಾರಿಗೆ ಇಲಾಖೆ ಉದ್ದೇಶಿಸಿದೆ. ಮೊದಲ ಹಂತದಲ್ಲಿ ರಸ್ತೆಗಿಳಿದಿರುವ 100 ಬಸ್‌ಗಳಿಗೆ ’ಅಶ್ವಮೇಧ ಕ್ಲಾಸಿಕ್’ ಎಂದು ಹೆಸರಿಡಲಾಗಿದೆ.
ಈ ಬಸ್‌ಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತವೆ, ದರಗಳ ಮಾಹಿತಿ ಹಾಗೂ ಸಂಚರಿಸಲಿರುವ ಮಾರ್ಗಗಳ ಮಾಹಿತಿಯನ್ನು ಸಾರಿಗೆ ಸಂಸ್ಥೆಯ ಜಾಲತಾಣದಿಂದ ಪಡೆಯಬಹುದಾಗಿದೆ.
ಅಶ್ವಮೇಧ ಕ್ಲಾಸಿಕ್ ಬಸ್‌ಗಳು 3.42 ಮೀಟರ್ ಎತ್ತರವಿದ್ದು, 12 ಪ್ಯಾನಿಕ್ ಬಟನ್, ಜಿಪಿಎಸ್, 2 ರೇರ್ ಕ್ಯಾಮರಾ ಹಾಗೂ 6 ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಒಳಗೊಂಡಿವೆ. 52 ಬಕೆಟ್ ಸೀಟು, ಬಸ್ ಒಳಗೆ ಮತ್ತು ಹೊರ ಭಾಗದಲ್ಲಿ ಎಲ್‌ಇಡಿ ಮಾರ್ಗಫಲಕ, ಪ್ರಯಾಣಿಕರ ಲಗೇಜ್‌ಗೆ ಹೆಚ್ಚು ಸ್ಥಳಾವಕಾಶ ನೀಡಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಂಗೇರಿ ವರ್ಕ್ ಶಾಪ್‌ಗೆ 100 ಹೊಸ ಬಸ್ ಬಂದಿದ್ದು, ಒಟ್ಟು 1,000 ಹೊಸ ಬಸ್‌ಗಳು ಬರಲಿವೆ.
1 comment
[…] ರಾಜಕೀಯ […]