ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ
ಬೆಂಗಳೂರು:ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ರೂವಾರಿಗಳೇ ಬೆಂಗಳೂರು ನಗರದ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಸ್ಫೋಟ ನಡೆಸಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.
ವಿಶ್ವಮಟ್ಟದಲ್ಲಿ ಐಟಿ ಕಾರಿಡಾರ್ ಎಂದು ಗುರುತಿಸಲ್ಪಟ್ಟಿರುವ ನಗರದ ವೈಟ್‌ಫೀಲ್ಡ್‌ನ ಜನದಟ್ಟಣೆ ಪ್ರದೇಶವೇ ಸುಕ್ಷಿತವಾಗಿಲ್ಲ ಎಂಬುದನ್ನು ಜಾಗತಿಕ ಮಟ್ಟದಲ್ಲಿ ತೋರ್ಪಡಿಸಲು ಇಂತಹ ಯತ್ನ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಪುಡಿ ಸಂಘಟನೆಗಳ ಕೃತ್ಯ
ಭಯೋತ್ಪಾದನಾ ಸಂಘಟನೆಗಳಿಂದ ಪ್ರಚೋದಿತಗೊಂಡ ಕೆಲವು ಪುಡಿ ಸಂಘಟನೆಗಳು ಈ ಕೃತ್ಯದಲ್ಲಿ ಭಾಗಿಯಾಗಿವೆ.
ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದನ್ನು ಸಹಿಸಲಾಗದೆ, ಅಲ್ಲದೆ, ಆಡಳಿತ ಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ, ಸಾರ್ವಜನಿಕರು ಅತ್ತ ಗಮನ ಹರಿಸಿರುವ ಸಂದರ್ಭದಲ್ಲಿ ವಿಶ್ವಮಟ್ಟದ ಗಮನ ಸೆಳೆಯುವ ಕೃತ್ಯ ಇದಾಗಿದೆ ಎಂದು ಶಂಕಿಸಲಾಗಿದೆ.
ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಬಳಸಿದ ಸಾಧನಗಳನ್ನೇ ಇಲ್ಲೂ ಬಳಸಲಾಗಿದೆ, ಹೀಗಾಗಿ ಈ ವ್ಯಕ್ತಿ ಕರಾವಳಿಯವನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಹೋಟೆಲ್‌ನಲ್ಲಿ ಸ್ಫೋಟಕ ತುಂಬಿದ ಬ್ಯಾಗ್ ಅನ್ನು ನೇರವಾಗಿ ಇಡದೆ ಅಡ್ಡಾದಿಡ್ಡಿಯಾಗಿ ಇಟ್ಟಿದ್ದರೆ 20 ರಿಂದ 30 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು.
ದೊಡ್ಡ ಅಪಾಯ ತಪ್ಪಿದೆ
ನೇರವಾಗಿ ಇಟ್ಟಿದ್ದರಿಂದ ಅದು ಮೇಲಕ್ಕೆ ಚಿಮ್ಮಿ ಹೋಟೆಲ್‌ನ ಮಾಲ್ಛಾವಣೆ ಕಿತ್ತುಹೋಗಿದ್ದು, ಕೆಲವರಿಗೆ ಗಾಯಗಳಾಗಿ, ದೊಡ್ಡ ಅಪಾಯ ತಪ್ಪಿದೆ.
ನಗರ ಸಾರಿಗೆ ಬಸ್‌ನಲ್ಲಿ ಐಟಿ ಕಾರಿಡಾರ್ ಪ್ರದೇಶಕ್ಕೆ ಧಾವಿಸಿದ ಯುವಕ, ಮಧ್ಯಾಹ್ನ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ಊಟಕ್ಕೆ ಸೇರುವ ಮತ್ತು ಜನನಿಬಿಡ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ಈ ಸ್ಫೋಟಕ ಇಟ್ಟಿದ್ದಾನೆ.
ಇಡ್ಲಿಗಾಗಿ ಟೋಕನ್ ಪಡೆದು ಒಂದು ತಾಸು ಅಲ್ಲಿಯೇ ಕಳೆದು, ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ ನಂತರ ತಿಂಡಿ ತಿಂದು, ತಾನು ತಂದಿದ್ದ ಸ್ಫೋಟಕ ವಸ್ತುವನ್ನು ಕಟ್ಟೆ ಮೇಲಿಟ್ಟು ತೆರಳಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸ್ಥಳ ಪರಿಶೀಲನೆ ಮತ್ತು ಗಾಯಾಳುಗಳ ಕ್ಷೇಮ ವಿಚಾರಿಸಿದ ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಲ್ಲದೆ, ಮುಂದಿನ ದಿನಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೋಚಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಹಾಳು ಮಾಡುವ ಯತ್ನ
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಿಡಿಗೇಡಿಗಳು ಕಾನೂನು ಸುವ್ಯವಸ್ಥೆ ಹಾಳು ಮಾಡಲು ಪ್ರಯತ್ನಿಸುತ್ತಾರೆ ಎಚ್ಚರವಿರಲಿ.
ಜನನಿಬಿಡ ಪ್ರದೇಶ, ಪ್ರವಾಸಿ ಕೇಂದ್ರ, ಅಣೆಕಟ್ಟುಗಳ ಸುರಕ್ಷತೆ, ಆಸ್ಪತ್ರೆ, ಸರ್ಕಾರಿ ಕಚೇರಿ, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದಿದ್ದಾರೆ.
ಬಾಂಬ್ ಸ್ಫೋಟ ಮಾಡಿದ ವ್ಯಕ್ತಿ ಮತ್ತು ಗುಂಪನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸವನ್ನು ಪೊಲೀಸರು ಮುಖ್ಯಮಂತ್ರಿ ಅವರಿಗೆ ನೀಡಿದ್ದು, ಎನ್‌ಐಎಗೆ ವಹಿಸುವುದು ಬೇಡ ಎಂದಿದ್ದಾರೆ.
ರಾಜ್ಯಸಭಾ ಚುನಾವಣಾ ಫಲಿತಾಂಶದ ನಂತರ ಸಂಭ್ರಮಾಚರಣೆ ಸಂದರ್ಭದಲ್ಲಿ ನಡೆದ ಘಟನೆಯ ತನಿಖಾ ವಿವರವನ್ನೂ ಪೊಲೀಸರು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ.
ವಿಧಾನಸೌಧ ಮತ್ತು ಅದರ ಸುತ್ತಮುತ್ತಲ ಸುರಕ್ಷತಾ ಹೊಣೆ ಹೊತ್ತಿರುವ ಪೊಲೀಸ್ ಅಧಿಕಾರಿಯನ್ನು ಮುಖ್ಯಮಂತ್ರಿ ಅವರು ಸಭೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅವರು, ಬಾಂಬ್ ಸ್ಫೋಟಗೊಂಡ ರಾಮೇಶ್ವರ ಕೆಫೆಗೆ ತೆರಳಿ ಪರಿಶೀಲನೆ ನಡೆಸಿದ್ದೇನೆ, ಸ್ಫೋಟಕ ಇಟ್ಟು ಹೋಗಿದ್ದ ಆರೋಪಿಯ ಪತ್ತೆ ಹಚ್ಚುವ ಕಾರ್ಯ ಚುರುಕಾಗಿ ನಡೆದಿದೆ ಎಂದರು.
ವ್ಯಕ್ತಿ ಪತ್ತೆಹಚ್ಚಿ ಬಂಧನ ವಿಶ್ವಾಸ
ಆರೋಪಿ ಮಾಸ್ಕ್ ಮತ್ತು ಟೋಪಿ ಧರಿಸಿ ಬಸ್ಸಿನಲ್ಲಿ ಬಂದು ತಿಂಡಿ ತಿಂದು ನಂತರ ಸ್ಫೋಟಕವುಳ್ಳ ಬ್ಯಾಗ್ ಇಟ್ಟು ತೆರಳಿದ್ದಾನೆ, ಆದಷ್ಟು ಬೇಗ ಕೃತ್ಯ ಎಸಗಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಲಾಗುವುದು.
ಘಟನೆಯಲ್ಲಿ ಗಾಯಗೊಂಡಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಬಿಜೆಪಿ ನಾಯಕರು ಸಾವು – ನೋವಿನಲ್ಲೂ ರಾಜಕಾರಣ ಮಾಡುತ್ತಿದ್ದಾರೆ, ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಸಂಭವಿಸಿದ್ದು ಬಿಜೆಪಿ ಕಾಲದಲ್ಲಿ ಅಲ್ಲವೇ, ಆಗಲೂ ತುಷ್ಟೀಕರಣದಿಂದಾಗಿ ಸ್ಪೋಟ ನಡೆದಿತ್ತೆ ಎಂದು ತಮ್ಮನ್ನು ಪ್ರಶ್ನಿಸಿದ ಮಾಧ್ಯಮಗಳಿಗೆ ಮರು ಪ್ರಶ್ನೆ ಹಾಕಿದರು.