ಕೀಲು ನೋವು ನಿವಾರಣೆಗೆ ಸಹಕಾರಿ
ಯೋಗ ಮುದ್ರೆಗಳು ಜೀವನದ ಚೈತನ್ಯವನ್ನು ಹೆಚ್ಚಿಸುವಂಥವುಗಳಾಗಿವೆ. ಶ್ರೀಕೃಷ್ಣ ಪರಮಾತ್ಮನು ಬೆರಳ ತುದಿಯಲ್ಲೇ ಜಗತ್ತನ್ನೇ ಕುಣಿಸಿದನಂತೆ. ಶ್ರೀಕೃಷ್ಣನಿಗೆ ಗೊತ್ತಿತ್ತು, ಬಲ್ಲವನಿಗೆ ಎಲ್ಲವೂ ಬೆರಳ ತುದಿಯಲ್ಲೇ ಇತ್ತೆಂದು. ದೇಹದ ತುಂಬೆಲ್ಲಾ ಹರಡಿಕೊಂಡಿರುವ ನರಗಳು ಮನುಷ್ಯನ ಶಕ್ತಿ ಸಂಚಲನಕ್ಕೆ ಪ್ರೇರಕವಾದವುಗಳಾಗಿವೆ. ಮೆದುಳಿನಿಂದ ಹೊರಟ ನರಗಳು ಕಾಲಿನ ಹಾಗೂ ಕೈಯ ಬೆರಳ ತುದಿಗಳಲ್ಲಿ ಅಂತ್ಯಗೊಳ್ಳುತ್ತವೆ.
ಬೆರಳ ತುದಿಗಳನ್ನು ಸೂಕ್ಷ್ಮವಾಗಿ ಸ್ಪರ್ಶಿಸುವುದರಿಂದ ಯಾವ ನರ ಯಾವ ಕ್ರಿಯೆ ಮಂದವಾಗಿರುತ್ತದೆಯೋ ಅದನ್ನು ಪುನರ್ ಜೀವನಗೊಳಿಸಬಹುದು. ಹಾಗಾಗಿ ಎಲ್ಲವನ್ನು ಬಲ್ಲವನಿಗೆ ಬೆರಳ ತುದಿಯಲ್ಲಿ ತನ್ನ ಶಕ್ತಿಯನ್ನು ಕೇಂದ್ರೀಕರಿಸಿಕೊಂಡು; ಜಗತ್ತನ್ನು ಬೆರಳ ತುದಿಯಲ್ಲಿ ಆಡಿಸಬಲ್ಲವನಾಗಿರುತ್ತಾನೆ. ಶ್ರೀಕೃಷ್ಣನಂತೆ ಬೆರಳ ತುದಿಯಲ್ಲಿ ಜಗತ್ತನ್ನು ನಾವು ಆಡಿಸಬಲ್ಲವರಾಗಬೇಕಾದರೆ, ಮೊದಲು ನಮ್ಮನ್ನು ನಾವು ಅರಿಯಬೇಕು. ನಮ್ಮ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಸದೃಢವಾಗಿರಿಸಿಕೊಳ್ಳಬೇಕು. ಮನಸ್ಸಿನ ಯಾತನೆಗಳು ಹೆಚ್ಚಾದಂತೆ ದೇಹದಲ್ಲಿ ಗಂಟುಗಳು ಅಧಿಕವಾಗುತ್ತಾ ಹೋಗುತ್ತವೆ. ದೇಹದ ಗಂಟುಗಳಿಂದ ದೂರವಾಗಿ ಮಾನಸಿಕ ಸ್ವಾಸ್ಥ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಯೋಗ ಮುದ್ರೆಗಳನ್ನು ಅಭ್ಯಾಸ ಮಾಡುವುದು ಉತ್ತಮವಾಗಿರುತ್ತದೆ.
ಪೃಥ್ವಿ ಮುದ್ರೆಯು ಹಸ್ತ ಮುದ್ರೆಗಳಲ್ಲಿ ಒಂದಾಗಿದೆ. ಪೃಥ್ವಿ ಮುದ್ರೆಯನ್ನು ಭೂ ಮುದ್ರೆ ಎಂತಲೂ ಕರೆಯಲಾಗುತ್ತದೆ. ಇದು ಭೂಮಿಯ ಅಂಶವನ್ನು ಪ್ರತಿನಿಧಿಸುವುದು. ಮನುಷ್ಯನ ದೇಹದಲ್ಲಿ ಮೂಳೆ, ಉಗುರು, ಕೂದಲು, ಇವುಗಳನ್ನು ಪ್ರತಿನಿಧಿಸುತ್ತದೆ. ಹಾಗೆಯೇ ಇವುಗಳ ಆರೋಗ್ಯವನ್ನು ಸುಧಾರಿಸಲು ಪೃಥ್ವಿ ಮುದ್ರೆಯನ್ನು ಮಾಡಲಾಗುವುದು.
ಪೃಥ್ವಿ ಮುದ್ರೆಯನ್ನು ಮಾಡುವುದು ಹೇಗೆ?
ಮುದ್ರೆಗಳಲ್ಲೇ ಅತ್ಯಂತ ಸೌಮ್ಯಕಾರಿಯಾದ ಮುದ್ರೆಯೆಂದರೆ ಪೃಥ್ವಿ ಮುದ್ರೆ. ದೀರ್ಘಕಾಲದವರೆಗೆ ಉತ್ತಮ ಕೂದಲಿನ ಆರೋಗ್ಯವನ್ನು ಪಡೆಯಲು ಪೃಥ್ವಿ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಈ ಮುದ್ರೆಯನ್ನು ನಿಮ್ಮ ಉಂಗುರದ ಬೆರಳನ್ನು ಹೆಬ್ಬೆಟ್ಟಿನೊಂದಿಗೆ ಒಟ್ಟುಗೂಡಿಸುವ ಮೂಲಕ ಮಾಡಬಹುದಾಗಿದೆ. ಉಂಗುರದ ಬೆರಳು ಭೂಮಿಯ ಸಂಕೇತವಾಗಿದ್ದು, ಹೆಬ್ಬೆರಳು ಬೆಂಕಿಯ ಸಂಕೇತವಾಗಿರುತ್ತದೆ. ಹಾಗಾಗಿ ಹೆಬ್ಬೆರಳ ತುದಿ ಉಂಗುರದ ಬೆರಳ ತುದಿಯನ್ನು ಸೌಮ್ಯವಾಗಿ ಸ್ಪರ್ಶಿಸುವ ಮೂಲಕ ಪೃಥ್ವಿ ಮುದ್ರೆಯನ್ನು ರಚಿಸಬಹುದಾಗಿದೆ.
ಸುಖಾಸನ, ಪದ್ಮಾಸನ, ವಜ್ರಾಸನ, ಇತರ ಯಾವುದೇ ಭಂಗಿಗಳಲ್ಲಿ ಕುಳಿತು ಈ ಮುದ್ರೆಯನ್ನು ಮಾಡಬಹುದು. ತಾಂಡಾಸನದ ಭಂಗಿಯಲ್ಲಿ ನಿಂತಿರುವಾಗಲೂ ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ನಿಮ್ಮ ಎರಡೂ ಕೈಯ ಹಸ್ತಗಳನ್ನು ತೊಡೆಯ ಮೇಲೆ ಇರಿಸಿಕೊಳ್ಳಿ. ಅಂಗೈಗಳು ಆಕಾಶವನ್ನು ನೋಡುವಂತಿರಲಿ. ಮೇಲೆ ಹೇಳಿದ ರೀತಿ ಬೆರಳುಗಳನ್ನು ವೃತ್ತಾಕಾರವಾಗಿ ರಚಿಸಿಕೊಳ್ಳಿ. ಇತರ ಬೆರಳುಗಳು ನೇರವಾಗಿರಲಿ. ನಿಮ್ಮ ಕಣ್ಣುಗಳನ್ನು ಮುಚ್ಚಿ, ಉಸಿರಾಟದ ಮೇಲೆ ಏಕಾಗ್ರತೆ ಇರಲಿ. ಕುತ್ತಿಗೆ ಹಾಗೂ ಬೆನ್ನು ನೇರವಾಗಿರಲಿ. ಆರಂಭದಲ್ಲಿ ಪೃಥ್ವಿ ಮುದ್ರೆಯನ್ನು ನಾಲ್ಕರಿಂದ ಐದು ನಿಮಿಷಗಳ ಕಾಲ ದಿನಕ್ಕೆ ಎರಡರಿಂದ ಮೂರು ಬಾರಿ ಅಭ್ಯಾಸ ಮಾಡಬೇಕು. ಕ್ರಮೇಣ 30 ರಿಂದ 45 ನಿಮಿಷಗಳವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.
ಈ ಮುದ್ರೆಯನ್ನು ಮಾಡುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಉಂಗುರದ ಬೆರಳು ಹಾಗೂ ಹೆಬ್ಬೆಟ್ಟನ್ನು ಬಲವಾಗಿ ಒತ್ತದಿರಿ. ಸ್ವಚ್ಛವಾದ, ಚೆನ್ನಾಗಿ ಗಾಳಿ ಇರುವ ನಿಶ್ಶಬದ್ಧವಾದ ಕೊಠಡಿಯಲ್ಲಿ ಅಭ್ಯಾಸ ಮಾಡಿ. ಇತರ ಮುದ್ರೆಗಳಂತೆ ಅಭ್ಯಾಸ ಮಾಡಲು ಉತ್ತಮ ಸಮಯವೆಂದರೆ. ಮುಂಜಾನೆ ನಾಲ್ಕರಿಂದ ಆರು ಗಂಟೆಯ ಸಮಯವಾಗಿರುತ್ತದೆ.
ಪ್ರಯೋಜನಗಳು
ಕೂದಲು ಉದುರುವಿಕೆಯಿಂದ ಬಳಲುತ್ತಿರುವ ಜನರು ಈ ಮುದ್ರೆಯನ್ನು ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯವಂಥ ದಟ್ಟ ಕೂದಲನ್ನು ಪಡೆಯಲು ಸಾಧ್ಯವಾಗುತ್ತದೆ. ಪೌಷ್ಠಿಕತೆಯ ಕೊರತೆಯಿಂದ ಅಕಾಲಿಕವಾಗಿ ನೆರೆಯುತ್ತಿರುವ ಕೂದಲನ್ನು ಮತ್ತೆ ಕಪ್ಪಾಗಿಸಲು ಪೃಥ್ವಿ ಮುದ್ರೆಯು ಸಹಕಾರಿಯಾಗಿದೆ. ರಾಸಾಯನಿಕ ಆಧಾರಿತ ಚಿಕಿತ್ಸೆ, ಕೂದಲಿನ ಬಣ್ಣಗಳ ಅತಿಯಾದ ಬಳಕೆಯಿಂದಾಗಿ ದುರ್ಬಲ ಹಾಗೂ ಬಣ್ಣ ಬಣ್ಣದ ಕೂದಲನ್ನು ಹೊಂದಿರುವ ಜನರು ಈ ಮುದ್ರೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಆರೋಗ್ಯವಂತ ಕೂದಲನ್ನು ಪಡೆಯಲು ಸಹಾಯಕವಾಗುತ್ತದೆ. ಕೀಲು ನೋವು ಸ್ನಾಯುಗಳ ಬಿಗಿತ, ದೇಹದಲ್ಲಿ ನಿಶ್ಶಕ್ತಿ ಇರುವವರು ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಪ್ರಯೋಜನ ಪಡೆಯಲಿದ್ದಾರೆ.
ಸ್ನಾಯುಗಳ ಸೆಳೆತದಿಂದ ಅಸ್ವಸ್ಥರಾದವರ ನಡಿಗೆಯು ಸಮತೋಲನ ಅಥವಾ ಸ್ಥಿರತೆಯನ್ನು ಪಡೆಯಬಹುದು. ಅಧಿಕ ಒತ್ತಡ ಮತ್ತು ಆತಂಕದಿಂದ ಬಳಲುತ್ತಿರುವವರು ಪೃಥ್ವಿ ಮುದ್ರೆಯನ್ನು ಅಭ್ಯಾಸ ಮಾಡುವುದು ಸಹಕಾರಿಯಾಗಲಿದೆ. ಬಡಕಲು ದೇಹ ಹೊಂದಿರುವಂಥವರು ಪೃಥ್ವಿ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಹಸಿವು ಹೆಚ್ಚಾಗಿ ಉತ್ತಮ ಆಹಾರ ಸೇವನೆ ಮಾಡುವಂತಾಗಿ ಸದೃಢ ಮೈಕಟ್ಟನ್ನು ಪಡೆಯಲಿದ್ದಾರೆ.
ಈ ಮುದ್ರೆಯು ರಕ್ತ ಪರಿಚಲನೆಯನ್ನು ಸುಧಾರಿಸುವುದರಿಂದ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒಣ ಚರ್ಮದಿಂದ ಬಳಲುತಿರುವವರು, ಉಗುರುಗಳ ಸ್ವಾಸ್ಥ್ಯತೆಯನ್ನು ಕಳೆದುಕೊಂಡಿರುವವರು, ಉತ್ತಮ ಕಾಂತಿಯನ್ನು ಮರಳಿ ಪಡೆಯಲು ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಸೋಮಾರಿತನದಿಂದ ಬಳಲುತಿರುವವರು ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಚೈತನ್ಯಶೀಲರಾಗಿ ವ್ಯಾಯಾಮದಲ್ಲಿ ಹೆಚ್ಚು ತೊಡಗಿಸಿಕೊಂಡು ದಡೂತಿ ದೇಹವನ್ನು ಕರಗಿಸಿ ಉತ್ತಮ ಮೈಕಟ್ಟನ್ನು ಹೊಂದಲು ಸಹಾಯಕವಾಗುತ್ತದೆ.
ಅತಿಯಾದ ದೇಹದ ಉಷ್ಣತೆಯಿಂದ ಬಳಲುವವರು, ಹುಣ್ಣು ಹಾಗೂ ಜ್ವರದಿಂದ ನರಳುತ್ತಿರುವವರು ಪೃಥ್ವಿ ಮುದ್ರೆಯಿಂದ ಪ್ರಯೋಜನ ಪಡೆಯಬಹುದು. ಪೃಥ್ವಿಯ ಅಂಶವು, ನೇರವಾಗಿ ಸ್ನಾಯು ಹಾಗೂ ಅಂಗಾಂಶಗಳಿಗೆ ಸಂಬಂಧವನ್ನು ಹೊಂದಿರುವುದರಿಂದ ಕೀಲು ನೋವು ಹಾಗೂ ಉರಿಯೂತದಂತಹ ಸಮಸ್ಯೆಗಳನ್ನು ಈ ಮುದ್ರೆಯು ಸುಧಾರಿಸಲಿದೆ. ಧ್ಯಾನದೊಂದಿಗೆ ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಆತ್ಮವಿಶ್ವಾಸ ಭದ್ರತೆಯ ಭಾವನೆ ಮೂಡಲಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಲು ಈ ಮುದ್ರೆಯನ್ನು ಅಭ್ಯಾಸ ಮಾಡಿಸಬಹುದು. ನಿಮ್ಮಲ್ಲಿನ ವಿಪರೀತ ಕೋಪವನ್ನು ಕಡಿಮೆ ಮಾಡಲಿದೆ.
ಪೃಥ್ವಿ ಮುದ್ರೆಯ ಅಡ್ಡಪರಿಣಾಮಗಳು
ಯಾವುದೇ ವಿದ್ಯೆಯನ್ನು ಗುರುಗಳ ಮೂಲಕವೇ ಕಲಿತರೆ ಸಿದ್ಧಿ ಪಡೆಯಲು ಸಾಧ್ಯವಾಗುತ್ತದೆ. ಅನುಭವಿ ತರಬೇತುದಾರರಿಂದ ಈ ಮುದ್ರೆಯನ್ನು ಅಭ್ಯಾಸ ಮಾಡಿ. ಮುದ್ರೆಯನ್ನು ಮಾಡಲು ಮನಸ್ಸನ್ನು ಒತ್ತಾಯಿಸಿಕೊಳ್ಳಬೇಡಿ. ನಿಧಾನವಾಗಿ ಪ್ರಾರಂಭಿಸಿ ನಂತರ ಅಭ್ಯಾಸ ಮಾಡಿ. ಕೈ, ತೋಳು, ಕುತ್ತಿಗೆ ಭಾಗಗಳಲ್ಲಿ ಗಾಯಗಳಾಗಿದ್ದಾಗ, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾಗ ಈ ಮುದ್ರೆ ಅಭ್ಯಾಸ ಮಾಡಬೇಡಿ. ಶೀತ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವಾಗ ಈ ಮುದ್ರೆಯಿಂದ ದೂರವಿರಿ. ಗರ್ಭಿಣಿಯರು ವೈದ್ಯರ ಸಲಹೆಯ ನಂತರ ಮುದ್ರೆಯನ್ನು ಅಭ್ಯಾಸ ಮಾಡಿ.
ಒಟ್ಟಿನಲ್ಲಿ ಪೃಥ್ವಿ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ದೇಹದಲ್ಲಿ ಕಡಿಮೆಯಾದ ಪೌಷ್ಠಿಕಾಂಶಗಳು ವಿಟಮಿನ್ ಗಳು, ಹೆಚ್ಚಾಗಲಿವೆ. ಆದರೆ, ಮುದ್ರೆಯನ್ನು ಅಭ್ಯಾಸ ಮಾಡುವಂಥವರು ಧೂಮಪಾನ, ಮದ್ಯಪಾನ ಹಾಗೂ ಇತರ ಮಾದಕ ವ್ಯಸನಗಳನ್ನು ತ್ಯಜಿಸುವುದು ಒಳ್ಳೆಯದು. ಪೌಷ್ಠಿಕ ಆಹಾರ ಸೇವನೆಯ ಜೊತೆಗೆ ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳವುದರಿಂದ ಉತ್ತಮ ಪ್ರಯೋಜನ ಪಡೆಯಬಹುದು.
