ಬೆಂಗಳೂರು:ತಾತ ದೇವೇಗೌಡರ ಮೇಲೆ ಗೌರವ ಇದ್ದರೆ ಇನ್ನು 48 ಗಂಟೆಯೊಳಗಾಗಿ ಎಸ್‌ಐಟಿಗೆ ಶರಣಾಗುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣಗೆ ಸಲಹೆ ನೀಡಿದ್ದಾರೆ.
ನಮ್ಮ ಕುಟುಂಬದ ಹೆಸರು ಹಾಳು ಮಾಡಲು ಕೆಲವರು ಷಡ್ಯಂತ್ರ ನಡೆಸಿದ್ದಾರೆ, ಇದರ ಮಧ್ಯೆ ಸರ್ಕಾರ 376 ಸೆಕ್ಷನ್ ಬಳಕೆ ಮಾಡಿಕೊಂಡು ನಮ್ಮವರ ಮೇಲೆ ಪ್ರಕರಣ ದಾಖಲಿಸಲು ಸಂಚು ನಡೆಯುತ್ತಿದೆ ಎಂದಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಶಿವರಾಮೇಗೌಡ ಹಾಗೂ ವಕೀಲ ದೇವರಾಜೇಗೌಡ ಅವರ ನಡುವೆ ನಡೆದಿರುವ ಸಂಭಾಷಣೆ ಬಹಿರಂಗಗೊಂಡ ನಂತರ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಪ್ರಜ್ವಲ್ ಪ್ರಕರಣ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕುಟುಂಬದಲ್ಲಿ ಆತಂಕದ ಛಾಯೆ
ದೊಡ್ಡಗೌಡರ ಕುಟುಂಬದಲ್ಲಿ ಆತಂಕದ ಛಾಯೆ ಆವರಿಸಿದೆ. ಇದರಿಂದ ನೊಂದ ದೇವೇಗೌಡರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು, ನಾನು ಅದನ್ನು ತಡೆದಿದ್ದೇನೆ.
ಉದ್ದೇಶ ಪೂರ್ವಕವಾಗಿ ನಮ್ಮ ಕುಟುಂಬವನ್ನು ಗುರಿ ಮಾಡಲಾಗುತ್ತಿದೆ, ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆದಿದೆ.
ಅಷ್ಟೇ ಅಲ್ಲ, ನಮ್ಮ ಕುಟುಂಬದವರು ಹಾಗೂ ಸ್ನೇಹಿತರ ೪೦ ಮಂದಿಯ ದೂರವಾಣಿಯನ್ನು ಆಲಿಸಲಾಗುತ್ತಿದೆ.
ದೊಡ್ಡಗೌಡರಿಗೆ ನೀನು ಬೆಲೆ ಕೊಡುವುದೇ ಆದರೆ, ಇನ್ನೆರಡು ದಿನದಲ್ಲಿ ಎಸ್‌ಐಟಿ ಮುಂದೆ ಶರಣಾಗು ಎಂದಿದ್ದಾರೆ.
ಸಹೋದರಿಯರ ಕ್ಷಮೆ ಕೇಳುತ್ತೇನೆ
ಪ್ರಜ್ವಲ್‌ನಿಂದ ಮಹಿಳಾ ಸಿಬ್ಬಂದಿ ಮಾನಸಿಕ ಯಾತನೆ ಅನುಭವಿಸುತ್ತಿದ್ದು, ನನ್ನ ಸಹೋದರಿಯರ ಕ್ಷಮೆ ಕೇಳುತ್ತೇನೆ, ಈ ಪರಿಸ್ಥಿತಿ ಯಾರಿಗೂ ಬರಬಾರದಿತ್ತು.
ಇದಕ್ಕೆ ಕಾರಣಕರ್ತರಾದವರು ಒಬ್ಬರು, ಇದನ್ನು ಜಗಜ್ಜಾಹೀರುಗೊಳಿಸಿ ಹೆಣ್ಣು ಮಕ್ಕಳು ನೋವನ್ನು ಅನುಭವಿಸುವಂತೆ ಮಾಡಿದ್ದು ಯಾರೋ.
ಇದನ್ನು ಬಹಿರಂಗಪಡಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಿವರಾಮೇಗೌಡ ಸೇರಿದಂತೆ ಕಾರಣಕರ್ತರ ವಿರುದ್ಧ ಎಸ್‌ಐಟಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಪ್ರಜ್ವಲ್ ಜೊತೆ ಹೆಚ್ಚಿನ ಸಂಪರ್ಕ ಇರಲಿಲ್ಲ
ನಾನು ಗೌಡರ ಕುಟುಂಬದವನೇ ಆದರೂ ನಮ್ಮ ನಾಲ್ಕು ಸಹೋದರರು ಯಾರು ಏನು ಮಾಡುತ್ತಾರೆ ಎಂಬುದು ಇತರರಿಗೆ ಗೊತ್ತಿರುವುದಿಲ್ಲ, ಪ್ರಜ್ವಲ್‌ಗೂ ನಮಗೂ ಹೆಚ್ಚಿನ ಸಂಪರ್ಕವೂ ಇರಲಿಲ್ಲ.
ಆದರೂ ಕುಟುಂಬದವನಾಗಿ ಎಸ್‌ಐಟಿ ಮುಂದೆ ಶರಣಾಗುವಂತೆ ಪ್ರಜ್ವಲ್‌ಗೆ ಕಿವಿಮಾತು ಹೇಳುತ್ತೇನೆ.
ದೇವರಾಜೇಗೌಡ ಪಾಪ, ಪೋಲಿಸ್ ವಾಹನದಲ್ಲಿ ಕುಳಿತು, ಮಾತನಾಡಿದ್ದಾರೆ, ನಮ್ಮ ಕುಟುಂಬದ ಹೆಸರು ಕೆಡಿಸಲು ಒಂದು ತಂಡವನ್ನೇ ರಚಿಸಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ.
ನಿನ್ನೆ ಬಂತಲ್ಲ ಸಿಡಿ ಶಿವು, ನನ್ನನ್ನು ಬ್ರದರ್ ಅಂತಾರಲ್ಲಾ ಅವರದೇ ಎಂದು ಶಿವಕುಮಾರ್ ಹೆಸರೇಳದೆ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ, ಪೆನ್‌ಡ್ರೈವ್ ಪ್ರಕರಣ ಹೊರಬಂತಲ್ಲ ಆಗಲೇ ಹಿಡಿದು ಜೈಲಿಗೆ ಹಾಕಬೇಕಿತ್ತು.
ನಿಮ್ಮ ಉಸಿರೇ ಇಲ್ಲ
ನನ್ನ ಹೆಸರೇಳಲಿ ಎಂದು ಸವಾಲು ಹಾಕುತ್ತಿದ್ದರಲ್ಲ, ಡಿ.ಕೆ.ಶಿವಕುಮಾರ್ ಅವರೇ, ನಿನ್ನೆ ಆಡಿಯೊ ಬಂತಲ್ಲ, ನಂತರ ನಿಮ್ಮ ಉಸಿರೇ ಇಲ್ಲ ಎಂದು ವ್ಯಂಗ್ಯವಾಡಿದರು.
ಶಿವಕುಮಾರ್ ವಿರುದ್ಧ ಯಾರೇ ಮಾತನಾಡಿದರೂ ೩೭೬ ಸೆಕ್ಷನ್ ಹಾಕುತ್ತಾರೆ, ಅದನ್ನೇ ದೇವರಾಜೇ ಗೌಡರ ಮೇಲೂ ಮಾಡಿದ್ದಾರೆ, ಇನ್ನು ಮುಂದೆ ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಈ ಸೆಕ್ಷನ್ ಗ್ಯಾರಂಟಿ ಎಂದರು.
ಯಾರೂ ವಿಡಿಯೊ ಕತೃ ಇದ್ದಾರೆ, ಅವರನ್ನು ಕರೆತಂದು ನೇಣಿಗೆ ಹಾಕಿ ಎಂದು ಈಗಲೂ ಹೇಳುತ್ತೇನೆ.
ಸರ್ಕಾರ ಆತನನ್ನು ಹಿಡಿಯುವ ಬದಲು ನನ್ನನ್ನು ಪ್ರಕರಣಕ್ಕೆ ಅಂಟು ಹಾಕಿ ನನಗೆ ಮಸಿ ಬಳಿಯಲು ಇನ್ನಿಲ್ಲದ ಕಸರತ್ತು ನಡೆಸಿ ತಾನೇ ಸಿಕ್ಕಿಹಾಕಿಕೊಂಡಿದೆ ಎಂದರು.