ಬೆಂಗಳೂರು:ನರೇಂದ್ರ ಮೋದಿ ಹೊಸ ಸರ್ಕಾರ ರಚನೆಗೆ ಮುಂದಾಗಿರುವ ಬೆನ್ನಲ್ಲೇ ಅವರ ಸಂಪುಟ ಸೇರ್ಪಡೆಗೆ ರಾಜ್ಯದ ಎನ್‌ಡಿಎ ಸಂಸದರು ಸಾಲುಗಟ್ಟಿ ನಿಂತಿದ್ದಾರೆ.
ಕರ್ನಾಟಕದಿಂದ ಇಬ್ಬರು ಜೆಡಿಎಸ್ ಸದಸ್ಯರು ಸೇರಿ ಎನ್‌ಡಿಎನ 19 ಸದಸ್ಯರು ಆಯ್ಕೆಗೊಂಡಿದ್ದಾರೆ.
ಇವರಲ್ಲಿ ಇಬ್ಬರು ಕೇಂದ್ರ ಸಚಿವರು, ಮೂವರು ಮಾಜಿ ಮುಖ್ಯಮಂತ್ರಿಗಳು, ಏಳನೇ ಬಾರಿಗೆ ಲೋಕಸಭೆ ಪ್ರವೇಶಿಸಿರುವ ರಮೇಶ್ ಜಿಗಜಿಣಗಿ ಹಾಗೂ ಸತತ ನಾಲ್ಕು ಭಾರಿ ಸಂಸತ್ ಪ್ರವೇಶಿಸಿದವರು ನಾಲ್ಕು ಮಂದಿ ಇದ್ದಾರೆ.
ಮತ್ತೆ ಸಚಿವರಾಗುವರೇ
ಪ್ರಲ್ಹಾದ್ ಜೋಷಿ ಮತ್ತು ಶೋಭಾ ಕರಂದ್ಲಾಜೆ ಅವರು, ಮೋದಿ ಅವರ ಹಾಲಿ ಸಂಪುಟದಲ್ಲಿ ಇದ್ದವರು, ಅವರು ಮತ್ತೆ ಸಚಿವರಾಗಿ ಮುಂದುವರೆಯಲು ಬಯಸುತ್ತಾರೆ.
ಕೇಂದ್ರದಲ್ಲಿ ಸರ್ಕಾರ ರಚನೆ ಸಂದರ್ಭದಲ್ಲಿ ಕರ್ನಾಟಕಕ್ಕೆ ಮೂರರಿಂದ ನಾಲ್ಕು ಸ್ಥಾನ ಸಿಗುತ್ತಾ ಬಂದಿದೆ.
ಆದರೆ ಈ ಬಾರಿ ಬಿಜೆಪಿ, ಕಳೆದ ಬಾರಿಗಿಂತ 60 ಸ್ಥಾನ ಕಡಿಮೆ ಇದೆ, ಅಲ್ಲದೆ, ಎನ್‌ಡಿಎ ಕೂಟಕ್ಕೆ ಎರಡು ಪ್ರಬಲ ಪಕ್ಷಗಳು ಕೈಜೋಡಿಸಿರುವುದರಿಂದ ಪ್ರಧಾನಿ ಅವರು, ಕೂಟದ ಮಿತ್ರರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ.
ಮಾಜಿ ಮುಖ್ಯಮಂತ್ರಿಗಳು
ಸಹಜವಾಗಿ ಬಿಜೆಪಿಯಿಂದ ಆಯ್ಕೆಗೊಂಡಿರುವ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮಂತ್ರಿಯಾಗಲು ಆಸಕ್ತಿ ಹೊಂದಿದ್ದಾರೆ.
ಇದರ ಜೊತೆಗೆ ತಮ್ಮ ಮಿತ್ರ ಪಕ್ಷವಾದ ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಒಂದು ಅವಕಾಶ ಕಲ್ಪಿಸಬಹುದು.
ಇದಲ್ಲದೆ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ, ಪಿ.ಸಿ.ಗದ್ದಿಗೌಡರ್, ಪಿ.ಸಿ.ಮೋಹನ್ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ.
ಜಿಗಜಿಣಗಿ ಏಳನೇ ಬಾರಿ ಆಯ್ಕೆ
ಇನ್ನು ಜಿಗಜಿಣಗಿ ಸತತವಾಗಿ ಏಳನೇ ಬಾರಿಗೆ ವಿಜಾಪುರ ಮೀಸಲು ಕ್ಷೇತ್ರದಿಂದ ಆಯ್ಕೆಗೊಂಡಿದ್ದಾರೆ.
ಡಾ.ಮಂಜುನಾಥ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಅವರಿಗೆ ಒಳ್ಳೆ ಉತ್ತಮ ಸ್ಥಾನ ನೀಡುವುದಾಗಿ ಪ್ರಧಾನಿ ಅವರೇ ಭರವಸೆ ನೀಡಿದ್ದರಂತೆ.
ಇದರ ನಡುವೆ ಪಕ್ಷದ ಹಿರಿಯ ನಾಯಕ ವಿ.ಸೋಮಣ್ಣ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ್ ಮಂತ್ರಿಯಾಗುವ ಇಚ್ಛೆ ಹೊಂದಿದ್ದಾರೆ.
ಅರ್ಹತೆ ಇರುವವರು ಮಂತ್ರಿ
ಯಾರು ಎಷ್ಟೇ ಪ್ರಯತ್ನ ಮಾಡಿದರೂ ರಾಜ್ಯ ಬಿಜೆಪಿ ಘಟಕ, ಸಂಘ ಪರಿವಾರ ಹಾಗೂ ಅವರ ಹಿನ್ನೆಲೆಯನ್ನು ಗಮನಿಸಿ, ಅರ್ಹತೆ ಇರುವವರಿಗೆ ಮಂತ್ರಿ ಮಾಡುತ್ತಾರೆ.
ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಸರ್ಕಾರ ರಚನೆಗೆ ಎನ್‌ಡಿಎ ಮೈತ್ರಿಕೂಟ ಸಭೆ ಸೇರಿ ಸಿದ್ಧತೆ ಮಾಡಿಕೊಂಡಿದೆ.
ಎನ್‌ಡಿಎ ಕೂಟದ ಸಭೆಗೂ ಮುನ್ನ ಮೋದಿ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊಸ ಸರ್ಕಾರ ರಚನೆಗೆ ಕಾರ್ಯತಂತ್ರ ನಡೆಸುತ್ತಿರುವ ಬೆನ್ನಲ್ಲೇ ಸಚಿವರಾಗಲು ರಾಜ್ಯದ ಬಿಜೆಪಿ ಸದಸ್ಯರು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ.