ಜ್ಞಾನಾರ್ಜನೆಗೂ ಉಪಯುಕ್ತ
ಮುದ್ರೆಗಳು ದೇಹ, ಮನಸ್ಸು, ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ದೇಹದ ಶಕ್ತಿಯನ್ನು ಕಾಸ್ಮಿಕ್ ಶಕ್ತಿಯೊಂದಿಗೆ ಸಂಯೋಜನೆಗೊಳಿಸುತ್ತವೆ. ಮುದ್ರೆಗಳನ್ನು ಐದು ವಿಧಗಳಾಗಿ ವಿಂಗಡಿಸಬಹುದು. ಹಸ್ತ ಅಥವಾ ಕೈ ಮುದ್ರೆ, ಮನ ಅಥವಾ ತಲೆ ಮುದ್ರೆ, ಕಾಯ ಅಥವಾ ಭಂಗಿ ಮುದ್ರೆ, ಬಂಧ ಅಥವಾ ಬೀಗ ಮುದ್ರೆ ಮತ್ತು ಅಥಾರ ಮುದ್ರೆ. ಶಾಂಭವಿ ಎಂಬುದು ಪಾರ್ವತಿಯ ಮತ್ತೊಂದು ಹೆಸರು. ಶಿವ ಪಾರ್ವತಿಗೆ ಹೇಳಿಕೊಟ್ಟ ಮುದ್ರೆ ಇದಾಗಿದೆ.
ಇದರಲ್ಲಿ ಮನಮುದ್ರೆಯನ್ನು ಮಾಡುವಾಗ ತುಟಿಗಳು ತಲೆ, ಕಣ್ಣು, ಕಿವಿ ಮತ್ತು ನಾಲಗೆಯನ್ನು ಬಳಸಲಾಗುವುದು. ಉದಾಹರಣೆಗೆ ಶಾಂಭವಿ ಮುದ್ರೆ. ಶಾಂಭವಿ ಮುದ್ರೆಯು ಕಣ್ಣುಗಳನ್ನು ಬಳಸಿ ಮಾಡುವ ಮುದ್ರೆಯಾಗಿದೆ. ಹಾಗಾಗಿ ಇದನ್ನು ಮನಮುದ್ರೆ ಅಥವಾ ಮುಖ ಮುದ್ರೆ ಎಂತಲೂ ಕರೆಯುತ್ತಾರೆ. ಮಾನವನ ಆಧ್ಯಾತ್ಮಿಕ ಜೀವನವನ್ನು ಸುಧಾರಿಸಲು ಶಾಂಭವಿ ಮುದ್ರೆ ಅತ್ಯಂತ ಉಪಯುಕ್ತವಾಗಿದೆ.
ಶಾಂಭವಿ ಮುದ್ರೆಯನ್ನು ಭ್ರೂಮಧ್ಯ ದೃಷ್ಟಿ ಭಂಗಿ ಅಥವಾ ಹುಬ್ಬು ಕೇಂದ್ರಿತ ಭಂಗಿ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ. ಹಸ್ತಮುದ್ರೆಗಳನ್ನು ಮಾಡುವಂತಹ ಸಂದರ್ಭದಲ್ಲಿ ಕಣ್ಣನ್ನು ಮುಚ್ಚಿ ಭಂಗಿಗಳನ್ನು ಮಾಡಲಾಗುವುದು. ಆದರೆ, ಶಾಂಭವಿ ಮುದ್ರೆಯನ್ನು ತೆರದ ಕಣ್ಣುಗಳಿಂದ ಮಾಡಬೇಕು.
ಶಾಂಭವಿ ಮುದ್ರೆ ಮಾಡುವುದು ಹೇಗೆ?
ಮೊದಲಿಗೆ ಯಾವುದಾದರೊಂದು ಧ್ಯಾನಭಂಗಿಯಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ತಲೆ ಮತ್ತು ಬೆನ್ನು ನೇರವಾಗಿ ಇರಲಿ. ನಿಮ್ಮ ಮೊಣಕಾಲುಗಳ ಮೇಲೆ ಹಸ್ತ ಆಕಾಶವನ್ನು ನೋಡುವಂತೆ ಇರಿಸಿಕೊಳ್ಳಿ. ಎರಡೂ ಕೈಗಳಿಂದ ಜ್ಞಾನ ಮುದ್ರೆಯನ್ನು ರಚಿಸಿಕೊಂಡು ಇತರ ಬೆರಳುಗಳನ್ನು ನೇರವಾಗಿ ಇರಿಸಿಕೊಳ್ಳಿ. ಕಣ್ಣುಗಳನ್ನು ಮುಚ್ಚಿ ವಿಶ್ರಾಂತಿ ಪಡೆಯಿರಿ. ಮುಖದ ಸ್ನಾಯುಗಳಿಗೆ ವಿಶ್ರಾಂತಿ ನೀಡಿ. ನಿಧಾನವಾಗಿ ಕಣ್ಣುಗಳನ್ನು ತೆರೆಯಿರಿ. ಮನಸ್ಸು ಮತ್ತು ಶರೀರವನ್ನು ಶಾಂತವಾಗಿ ಇರಿಸಿಕೊಳ್ಳಿ. ನಿಮ್ಮ ದೃಷ್ಟಿಯನ್ನು ಎರಡೂ ಹುಬ್ಬುಗಳ ನಡುವೆ ಕೇಂದ್ರೀಕರಿಸಿ.
ನಿಮ್ಮ ಕಣ್ಣಿನ ದೃಷ್ಟಿಯನ್ನು ನಿಧಾನವಾಗಿ ಮೇಲಕ್ಕೆತ್ತಿ, ಉಸಿರಾಟದ ಮೇಲೆ ಗಮನವಿರಲಿ. ಹೊಟ್ಟೆಯ ಭಾಗದಿಂದ ಉಸಿರಾಟವನ್ನು ಪ್ರಾರಂಭಿಸಿ. ತಲೆಯನ್ನು ಅಲುಗಾಡಿಸದಿರಿ. ಹುಬ್ಬುಗಳ ಮಧ್ಯೆ ದೃಷ್ಟಿಯನ್ನು ಕೇಂದ್ರೀಕರಿಸಿರುವುದರಿಂದ ಹುಬ್ಬುಗಳು ಇಂಗ್ಲೀಷ್ ನ ‘ವಿ’ (v) ಆಕಾರವನ್ನು ಹೊಂದಿರುತ್ತವೆ. ಒಂದು ವೇಳೆ ವಿ ಆಕಾರ ಬಂದಿಲ್ಲವಾದಲ್ಲಿ ಕಣ್ಣುಗಳ ದೃಷ್ಟಿಯನ್ನು ಸರಿಯಾಗಿ ಕೇಂದ್ರೀಕರಿಸಿಲ್ಲವೆಂದು ತಿಳಿಯುತ್ತದೆ.
ಸ್ವಲ್ಪ ಸಮಯದವರೆಗೆ ಮಾತ್ರ ಗಮನವನ್ನು ಕೇಂದ್ರೀಕರಿಸಿ. ಹೀಗೆ ಹುಬ್ಬುಗಳ ಮಧ್ಯೆ ಗಮನವನ್ನು ಕೇಂದ್ರೀಕರಿಸುವುದರಿಂದ ಆಜ್ಞಾಚಕ್ರವನ್ನು ಅಂದರೆ ಮೂರನೇ ಕಣ್ಣನ್ನು ಜಾಗೃತಿಗೊಳಿಸಬಹುದು. ಮೂರನೇ ಕಣ್ಣಿನ ಚಕ್ರ ತೆರೆದಾಗ ನಿಮ್ಮ ಅಂತಃಪ್ರಜ್ಞೆ ಜಾಗೃತವಾಗುತ್ತದೆ. ಕಣ್ಣುಗಳನ್ನು ಮೇಲಕ್ಕೆ ಮತ್ತು ಒಳಕ್ಕೆ ತಿರುಗಿಸುವಾಗ ಹುಬ್ಬುಗಳ ಮಧ್ಯೆದಲ್ಲಿ ಗಮನ ಕೇಂದ್ರೀಕರಿಸುವುದರಿಂದ ಕಣ್ಣುಗಳು ಅರ್ಧ ತೆರೆದಿರುತ್ತವೆ ಮತ್ತು ಕಣ್ಣುಗಳು ಒಳಗೆ ಸ್ಥಿರವಾಗಿರುತ್ತವೆ.
ವ್ಯಕ್ತಿಯು ಎಲ್ಲವನ್ನೂ ನೋಡುವಂತೆ ಕಾಣಿಸಿದರೂ ವಾಸ್ತವವಾಗಿ ಹೊರಗಿನ ಯಾವುದನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಈ ಮುದ್ರೆಯನ್ನು ಪ್ರಾರಂಭದಲ್ಲಿ ಕೇವಲ ಐದು ನಿಮಿಷಗಳ ಕಾಲ ಮಾತ್ರ ಮಾಡಬೇಕು. ಅಭ್ಯಾಸ ಹೆಚ್ಚಿದಂತೆ 21 ನಿಮಿಷಗಳ ಕಾಲ ಮಾತ್ರ ಅಭ್ಯಾಸ ಮಾಡಬೇಕು. ಆರಂಭದಲ್ಲಿ ನೋವು ಕಂಡುಬಂದಲ್ಲಿ ತಕ್ಷಣ ಮುದ್ರೆ ಮಾಡುವುದನ್ನು ನಿಲ್ಲಿಸಬೇಕು. ನಿಧಾನವಾಗಿ ಅಭ್ಯಾಸ ಮಾಡಬೇಕು. ಮುದ್ರೆ ಮಾಡಿದ ನಂತರ ಕಣ್ಣುಗಳನ್ನು ಮುಚ್ಚಿ ವಿಶ್ರಾಂತಿ ಪಡೆಯಬೇಕು. ನಿಧಾನವಾಗಿ ಮೂಲ ಸ್ಥಾನಕ್ಕೆ ಬಂದು ನಿಮ್ಮ ಕಣ್ಣುಗಳನ್ನು ತೆರೆಯಬೇಕು. ಸರಿಯಾದ ಕ್ರಮದಲ್ಲಿ ಶಾಂಭವಿ ಮುದ್ರೆಯನ್ನು ಮಾಡದಿದ್ದಲ್ಲಿ ನಿಮ್ಮ ಆರೋಗ್ಯದಲ್ಲಿನ ಸುಧಾರಣೆಗಿಂತ ಹೆಚ್ಚಿನ ಹಾನಿಯನ್ನು ಅನುಭವಿಸಬೇಕಾಗುತ್ತದೆ. ತಲೆ ನೋವಿಗೆ ಮೂಲ ಕಾರಣವಾಗಬಹುದು.
ಶಾಂಭವಿ ಮುದ್ರೆಯ ಪ್ರಯೋಜನಗಳು
ಕಣ್ಣಿನ ಸ್ನಾಯುಗಳನ್ನು ಬಲಪಡಿಸುವುದು ಮತ್ತು ಹಣೆಯ ಒತ್ತಡದ ಸ್ನಾಯುಗಳನ್ನು ವಿಶ್ರಾಂತಗೊಳಿಸುತ್ತದೆ. ಕಣ್ಣುಗಳ ಚಲನೆಯಿಂದ ಹೃದಯ, ಯಕೃತ್ ಮತ್ತು ಮೂತ್ರ ಕೋಶಕ್ಕೆ ಪ್ರಯೋಜನವನ್ನು ನೀಡುತ್ತದೆ. ಶಾಂಭವಿ ಮುದ್ರೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧರಾಗುತ್ತೀರಿ. ಸುಪ್ತಾವಸ್ಥೆಯಲ್ಲಿನ ವಿಚಾರಗಳನ್ನು ಶುದ್ದೀಕರಿಸುತ್ತದೆ. ಇತರರ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಪೀನಲ್ ಗ್ರಂಥಿಯನ್ನು ಉತ್ತೇಜಿಸುತ್ತದೆ. ನಿದ್ರೆಯ ಚಕ್ರಗಳನ್ನು ನಿಯಂತ್ರಿಸುವುದಲ್ಲದೆ, ವಾಸ್ತವ ಗ್ರಹಿಕೆಯನ್ನು ಅರ್ಥ ಮಾಡಿಸುತ್ತದೆ. ಮೆದುಳಿನಲ್ಲಿರುವ ಥೀಟಾ ಮತ್ತು ಡೆಲ್ಟಾ ಎಂಬ ಮೆದುಳಿನ ಅಲೆಗಳನ್ನು ಉತ್ತೇಜಿಸುತ್ತದೆ.
ಆಧ್ಯಾತ್ಮಿಕ ಶಕ್ತಿಗೆ ಹತ್ತಿರವಾಗಲು ಬಯಸುವವರು ಮಾತ್ರ ಈ ಮುದ್ರೆಯನ್ನು ಮಾಡಬೇಕು. ನಿಮ್ಮ ದೇಹ ಮತ್ತು ಮನಸ್ಸಿನ ಕಂಪನವನ್ನು ಸುಧಾರಿಸುವುದರ ಜೊತೆಗೆ ಶಾಂತಗೊಳಿಸುತ್ತದೆ. ಇದರಿಂದಾಗಿ ಒಟ್ಟು ಆಲೋಚನೆಗಳಿಂದ ಮುಕ್ತರಾಗುತ್ತೀರಿ. ಹುಬ್ಬುಗಳ ಮಧ್ಯೆ ದೃಷ್ಟಿಯನ್ನು ಕೇಂದ್ರೀಕರಿಸುವುದರಿಂದ ಹೃದಯವು ಹಗುರವಾಗಿ ಹೃದಯದ ಭಾಗದಿಂದ ಬ್ರಹ್ಮಾಂಡ ತೆರೆದುಕೊಂಡಂತೆ ಭಾಸವಾಗುವುದು.
ಈ ಮುದ್ರೆಯು ಐದು ಜ್ಞಾನೇಂದ್ರೀಯಗಳು, ಐದು ಕರ್ಮೇಂದ್ರೀಯಗಳು ಮತ್ತು ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರವೆಂಬ ನಾಲ್ಕು ರೀತಿಯ ಮನಸ್ಸಿನ ಏಜೆಂಟ್ ಗಳನ್ನು ಆಳುತ್ತದೆ. ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ತೃಪ್ತಿದಾಯಕ ಮನಸ್ಥಿತಿ ಹೊಂದುವುದಲ್ಲದೆ, ಉತ್ತಮ ನಿದ್ರೆಯನ್ನು ಅನುಭವಿಸಬಹುದು. ಇಹ ಲೋಕದ ಪ್ರಚೋದನೆಗಳಿಗೆ ಒಳಗಾಗುವುದಿಲ್ಲ.
ಪ್ರತಿನಿತ್ಯ ಈ ಮುದ್ರೆ ಅಭ್ಯಾಸ ಮಾಡುವುದರಿಂದ ಒಂದೇ ಸಮಯದಲ್ಲಿ ಮೂರರಿಂದ ನಾಲ್ಕು ಕೆಲಸಗಳನ್ನು ಪೂರ್ಣಗೊಳಿಸುವ ಸಾಮರ್ಥ್ಯ ವೃದ್ಧಿಯಾಗುವುದು. ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಮಕ್ಕಳು ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಬಹುದು.
ಶಾಂಭವಿ ಮುದ್ರೆಯ ಅಡ್ಡಪರಿಣಾಮಗಳು
ದೇಹದ ಸೂಕ್ಷ್ಮ ಭಾಗವಾದ ಕಣ್ಣುಗಳಿಗೆ ಸಂಬಂಧಿಸಿದ್ದರಿಂದ ಕಣ್ಣು ಅಥವಾ ತಲೆನೋವಿನ ಸಮಸ್ಯೆ ಉಂಟಾಗಬಹುದು. ಗ್ಲುಕೋಮಾ ಮತ್ತು ಡಯಾಬಿಟಿಕ್ ರೆಟಿನೋಪತಿ ಇರುವವರು ಶಾಂಭವಿ ಮುದ್ರೆ ಮಾಡದಿರುವುದು ಉತ್ತಮ. ಕಣ್ಣಿನ ಶಸ್ತ್ರಚಿಕಿತ್ಸೆ, ಲೆನ್ಸ್ ಇನ್ ಪ್ಲಾಂಟ್ ಮಾಡಿಸಿಕೊಂಡಿರುವವರು ಈ ಮುದ್ರೆಯಿಂದ ದೂರ ಉಳಿಯುವುದು ಒಳ್ಳೆಯದು.
ಒಟ್ಟಿನಲ್ಲಿ ಭಯ, ಹತಾಶೆ ಮತ್ತು ಚಿಂತನೆಯಂತಹ ನಕಾರಾತ್ಮಕ ಭಾವನೆಗಳು ಕಡಿಮೆಯಾಗುತ್ತವೆ. ಮಾನಸಿಕ ಶಾಂತಿ ವೃದ್ಧಿಸುತ್ತದೆ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಕಷ್ಟಕರ ಸಂದರ್ಭಗಳನ್ನು ಜಯಿಸಲು ಸಿದ್ಧರಾಗುತ್ತೀರಿ. ಜ್ಞಾಪಕಶಕ್ತಿ, ಆತ್ಮವಿಶ್ವಾಸ, ಮಾನಸಿಕ ಸ್ಪಷ್ಟತೆ, ಇಚ್ಛಾಶಕ್ತಿಯನ್ನು ಹೆಚ್ಚು ಮಾಡುವುದು.