ಬೆಂಗಳೂರು:ನಿಗದಿತ ಪ್ರಮಾಣದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವ ಜವಾಬ್ದಾರಿ ನಿಭಾಯಿಸುವುದರ ಜೊತೆಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಹಕ್ಕು ಕರ್ನಾಟಕಕ್ಕೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.
ತಮಿಳುನಾಡಿನ ಕಾಂಗ್ರೆಸ್ ನಾಯಕರೇ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ರಾಜಕೀಯ ಪಕ್ಷಗಳಿಗೆ ಕರ್ನಾಟಕ ಕಾವೇರಿ ಕೊಳ್ಳದಲ್ಲಿ ಕೈಗೊಳ್ಳುವ ಯೋಜನೆಗಳಿಗೆ ವಿರೋಧ ಮಾಡುವುದೇ ರಾಜಕೀಯವಾಗಿದೆ ಎಂದರು.
ಮೇಕೆದಾಟು ಯೋಜನೆ ಅನುಷ್ಟಾನ ಶತಸಿದ್ಧ
ಯಾರು ಏನೇ ಟೀಕಿಸಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಮೇಕೆದಾಟು ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೇ ಉಪಯೋಗ ಎಂಬುದನ್ನು ಅವರೆಲ್ಲರೂ ಒಟ್ಟಿಗೆ ಬಂದರೆ ನಾನು ತಿಳಿಸಬಯಸುತ್ತೇನೆ, ಅವರು ಎಷ್ಟೇ ವಿರೋಧ ಮಾಡಿದರೂ ಯೋಜನೆ ಅನುಷ್ಟಾನ ಶತಸಿದ್ಧ.
ತಮಿಳುನಾಡಿಗೆ ನೀಡುವ ನೀರಿನ ಪಾಲನ್ನು ಹರಿಸಿದ ನಂತರ ಉಳಿದ ನೀರು ಬಳಸಿಕೊಳ್ಳುವ ಹಕ್ಕು ಕರ್ನಾಟಕಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ನಾವು ಕಾನೂನಿನ ಚೌಕಟ್ಟಿನಲ್ಲೇ ಬಹೋಪಯೋಗಿ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಮುಂದಿನ ಆರ್ಥಿಕ ವರ್ಷದಲ್ಲಿ ಚಾಲನೆ ನೀಡುವುದಾಗಿ ತಿಳಿಸಿದರು.
ಸುಪ್ರೀಂಕೋರ್ಟ್ ಆದೇಶ ಎಲ್ಲರೂ ಒಪ್ಪಬೇಕು
ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ತಮಿಳುನಾಡು 177 ಟಿಎಂಸಿ ನೀರನ್ನು ಪಡೆಯುವುದು ಅವರ ಹಕ್ಕು, ಅದನ್ನು ನಾವು ಪಾಲಿಸುತ್ತೇವೆ, ನಮ್ಮ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಅವರ ಹಕ್ಕುಗಳನ್ನೂ ಗೌರವಿಸುತ್ತೇವೆ, ಅಣೆಕಟ್ಟು ನಿರ್ಮಿಸಿ ನೀರು ಒದಗಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯ, ಕೇಂದ್ರ ಸರ್ಕಾರ ಈ ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಬದಲಿ ಜಾಗ ನೀಡಬೇಕು ಎಂಬುದಾಗಿ ತಿಳಿಸಿದ್ದು ಅದರ ಹೊರತಾಗಿ ನಮ್ಮ ಜಾಗದಲ್ಲಿ ನಿರ್ಮಾಣವಾಗುವ ಯೋಜನೆಯಾಗಿದೆ.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ, ಎಲ್ಲ ಪಕ್ಷಗಳೂ ಯೋಜನೆ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ, ಅಗತ್ಯ ದಾಖಲೆ ಸಲ್ಲಿಸುವ ಕೆಲಸ ನಡೆಯುತ್ತಿದೆ, ಅನುಮತಿ ದೊರೆತರೆ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.
ರಾಜಕಾರಣದಲ್ಲಿ ಸ್ಪರ್ಧೆ ಮಾಡೋಣ, ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡೋಣ, ನಾವೂ ರಾಜಕೀಯ ಮಾಡುತ್ತೇವೆ, ಆದರೆ, ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಸಹಕಾರ ಪಡೆಯುವುದು ನಮ್ಮ ಜವಾಬ್ದಾರಿ.
ಮೇಕೆದಾಟು ವಿರೋಧ ತಿರಸ್ಕರಿಸಿ
ತಮಿಳುನಾಡಿನ ಮೇಕೆದಾಟು ಯೋಜನೆ ವಿರೋಧವಷ್ಟೇ ಅಲ್ಲದೆ, ಕಸ್ತೂರಿರಂಗನ್ ವರದಿಯನ್ನೂ ತಿರಸ್ಕರಿಸುವಂತೆ ಕೇಂದ್ರವನ್ನು ಒತ್ತಾಯಿಸಲಾಗಿದೆ.
ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮಾನ ಪಾಲುದಾರಿಕೆ ಇರಬೇಕು, ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸಬೇಕು, ಮೆಟ್ರೋ ಸಂಪರ್ಕವನ್ನು 500 ಕಿಲೋ ಮೀಟರ್ವರೆಗೆ ವಿಸ್ತರಿಸುವ ಗುರಿ ಇದ್ದು, ಬಾಕಿ ಪ್ರಸ್ತಾವನೆಗಳಿಗೂ ತ್ವರಿತ ಅನುಮೋದನೆ ನೀಡುವಂತೆ ಕೋರಲಾಗಿದೆ.
ರೈತರ ಕೃಷಿ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಹೊರೆ ಹಿಂದೆ ಸುಮಾರು 20,000 ಕೋಟಿ ರೂ. ಇದ್ದದ್ದು, 30,000 ಕೋಟಿ ರೂ.ಗೆ ಏರಿಕೆಯಾಗಿದೆ, ಬರಗಾಲದ ಹಿನ್ನೆಲೆ ವಿದ್ಯುತ್ ಬಳಕೆ ಹೆಚ್ಚಾಗಿದೆ, ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಪೂರೈಕೆ ಸೇರಿದಂತೆ ಹಲವು ಕಾರಣಗಳಿಂದ ಬಿಲ್ ಮೊತ್ತ ಹೆಚ್ಚಾಗಿದೆ, ಎಲ್ಲ ಸಮಸ್ಯೆಗಳನ್ನು ಸರ್ಕಾರ ಸರಿಪಡಿಸಲಿದೆ ಎಂದರು.


