ಬೆಂಗಳೂರು: ಸಂಪುಟದಲ್ಲಿ ಮಹಿಳೆಗೆ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಂತ್ರಿಮಂಡಲ ಪುನಾರಚನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠರಿಂದ ಅನುಮತಿ ಪಡೆದುಕೊಂಡಿದ್ದಾರೆ.
ಅನುಮತಿ ಉದ್ದೇಶಕ್ಕಾಗಿ ದಹೆಲಿಗೆ ತೆರಳಿದ್ದ ಮುಖ್ಯಮಂತ್ರಿಯವರು ವರಿಷ್ಠರೊಟ್ಟಿಗೆ ಸಮಾಲೋಚನೆ ನಡೆಸಿ, ಒಬ್ಬರನ್ನು ಕೈಬಿಟ್ಟು, ಖಾಲಿ ಇರುವ ಒಂದು ಸ್ಥಾನ ಸೇರಿದಂತೆ ಎರಡು ಸಚಿವ ಸ್ಥಾನ ತುಂಬಲು ವರಿಷ್ಠರಿಂದ ಹಸಿರು ನಿಶಾನೆ ಪಡೆದಿದ್ದಾರೆ.
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೇ ಮತ್ತೆ ಪುನಾರಚನೆ ಸಂದರ್ಭದಲ್ಲಿ ಮಂತ್ರಿ ಮಾಡಲು ಮುಖ್ಯಮಂತ್ರಿಯವರು ಆಸಕ್ತಿ ಹೊಂದಿದ್ದಾರೆ.
ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುನಿಸನ್ನು ಹೊಗಲಾಡಿಸಲು ಉದ್ದೇಶಿಸಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರೇ ಹೆಸರಿಸಿದ ಹಾವೇರಿ ಜಿಲ್ಲೆಯ ಕುರುಬ ಸಮುದಾಯಕ್ಕೆ ಸೇರಿದ ಶಾಸಕ ಬಸವರಾಜ ನೀಲಪ್ಪ ಶಿವಣ್ಣನವರನ್ನು ಮಂತ್ರಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಹರ್ಷಿ ಮಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆದು, ಈ ಎರಡು ಸ್ಥಾನಗಳನ್ನು ಭರ್ತಿ ಮಾಡುವ ನಿರ್ಧಾರಕ್ಕೆ ಬಂದಿದ್ದು, ವರಿಷ್ಠರ ಅನುಮೋದನೆ ಪಡೆದಿದ್ದಾರೆ ಎನ್ನಲಾಗಿದೆ.
ಪುನಾರಚನೆ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ನೀಡುವ ಮೂಲಕ ನಾಗೇಂದ್ರ ರಾಜೀನಾಮೆಯಿಂದ ಎಸ್‌ಟಿ ಸಮುದಾಯಕ್ಕೆ ಆದ ಅನ್ಯಾಯ ಸರಿಪಡಿಸಲು ಮುಂದಾಗಿದ್ದಾರೆ.
ತಮ್ಮ ರಾಜೀನಾಮೆಯಿಂದ ತೆರವಾದ ನಂತರ ಬಳ್ಳಾರಿ ಜಿಲ್ಲೆಯಲ್ಲಿ ಯಾರಿಗೂ ಮಂತ್ರಿ ಸ್ಥಾನ ನೀಡಬಾರದೆಂದು ನಾಗೇಂದ್ರ ಷರತ್ತು ವಿಧಿಸಿರುವುದರಿಂದ ಶಾಸಕಿ ಅನ್ನಪೂರ್ಣ ತುಕಾರಾಂ ಅವರಿಗೆ ಮಂತ್ರಿ ಸ್ಥಾನ ಕೈತಪ್ಪಿದೆ.
ಅನ್ನಪೂರ್ಣ ತುಕಾರಾಂ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡು ಮಹಿಳಾ ಪ್ರಾತಿನಿಧ್ಯ ಕಲ್ಪಿಸಲು ಪಕ್ಷ ನಿರ್ಧರಿಸಿತ್ತು. ಆದರೆ ನಾಗೇಂದ್ರ ಅವರ ಷರತ್ತಿನ ಹಿನ್ನೆಲೆಯಲ್ಲಿ ಅನ್ನಪೂರ್ಣ ಅವರಿಗೆ ಕೈತಪ್ಪಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ ಧಕ್ಕಲಿದೆ.
ಈ ಮಾಹಿತಿ ತಿಳಿಯುತ್ತಿದ್ದಂತೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿ, ಪಕ್ಷ ತಮಗೆ ಯಾವುದೇ ಸ್ಥಾನಮಾನ ನೀಡಿದರೂ, ಅದನ್ನು ನಿಭಾಯಿಸುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಮೂರು ವರ್ಷಗಳ ಕಾಲ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದೇನೆ. ಇದಕ್ಕೆ ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಋಣಿಯಾಗಿದ್ದೇನೆ. ಮುಂದೆ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ, ಪ್ರಾಮಾಣಿಕವಾಗಿ ಅದನ್ನು ನಿಭಾಯಿಸುತ್ತೇನೆ. ನಾನು ಪಕ್ಷದ ಶಿಸ್ತಿನ ಶಿಪಾಯಿ ಹೇಳಿದ್ದಾರೆ.


