ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮದ ಬಹುಕೋಟಿ ರೂ. ಹಗರಣದ ಪ್ರಮುಖ ಆರೋಪಿ ಬಿ.ನಾಗೇಂದ್ರ ಅವರನ್ನು ಮತ್ತೆ ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಿಸಿ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡಲಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಸೇರ್ಪಡೆ
ನಾಗೇಂದ್ರ ಜೊತೆಗೆ ಬೆಳಗಾವಿ ಜಿಲ್ಲೆಯ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಂಡು ಮಹಿಳಾ ಕೋಟಾ ತುಂಬಲು ನಿರ್ಧರಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಮುಂದಿನ ಹೋರಾಟ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ರಾತ್ರಿ ದೆಹಲಿಯಲ್ಲಿ ಪಕ್ಷದ ನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ಕರೆದಿದ್ದ ಚಹಾ ಕೂಟದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ, ಪಕ್ಷದ ಅಧಿನಾಯಕನ ಜೊತೆ ನಡೆಸಿದ ಮಾತುಕತೆ ವೇಳೆ ಕರ್ನಾಟಕದಲ್ಲಿ ಸ್ಟಿಂಗ್ ಆಪರೇಷನ್ ಸೇರಿದಂತೆ ಕೆಲವು ರಾಜಕೀಯ ವಿದ್ಯಮಾನಗಳನ್ನು ಗಮನಕ್ಕೆ ತಂದಿದ್ದಾರೆ.
ಅಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಮಂತ್ರಿಮಂಡಲದಲ್ಲಿ ಖಾಲಿ ಇರುವ ಎರಡು ಸ್ಥಾನ ಭರ್ತಿ ಮಾಡುವುದಾಗಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಒಪ್ಪಿಗೆ
ಮುಖ್ಯಮಂತ್ರಿ ಮಾತಿಗೆ ಒಪ್ಪಿಗೆ ಸೂಚಿಸಿದ ರಾಹುಲ್ ಗಾಂಧಿ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆ ಮಾತುಕತೆ ನಡೆಸಿ ಮುಂದುವರೆಯಲು ಹೇಳಿದ್ದಾರೆ.
ಶಿವಕುಮಾರ್ ಮುಖ್ಯಮಂತ್ರಿಯಾಗಿ ಸರ್ಕಾರ ರಚನೆ ವೇಳೆ ಹಗರಣದ ಆರೋಪ ಹೊತ್ತಿದ್ದರೂ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು.
ನಂತರ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷ ಬಿಜೆಪಿ, ಸದನದ ಒಳಗೆ ಮತ್ತು ಹೊರಗೆ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದ ಬೆನ್ನಲ್ಲೇ ಸಂಪುಟದಿಂದ ಅವರನ್ನು ಕೈಬಿಡಲಾಗಿತ್ತು.
ಕಾಂಗ್ರೆಸ್ ಸೋಲು ಹಿನ್ನೆಲೆ
ವಿಧಾನ ಪರಿಷತ್ತಿನ ತಾಲಾ ಎರಡು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರೀ ಅಂತರದ ಜಯ ಗಳಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಎಸ್ಟಿ ಮತ್ತು ಇತರ ಹಿಂದುಳಿದ ವರ್ಗಗಳು ಪಕ್ಷದಿಂದ ದೂರವಾಗುತ್ತಿವೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡ ನಾಗೇಂದ್ರ ಅವರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ಮುಖ್ಯಮಂತ್ರಿ ನಿರ್ಧರಿಸಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ಪಂಚಮಸಾಲಿ ಸಮುದಾಯಕ್ಕೆ ಸೇರಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಂತ್ರಿಮಂಡಲದಲ್ಲಿ ಅವಕಾಶ ಮಾಡಿಕೊಡುವ ಮೂಲಕ ಸಮುದಾಯವನ್ನು ಪಕ್ಷದತ್ತ ಸೆಳೆಯಲು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಒತ್ತಾಯ
ಇತ್ತೀಚೆಗೆ ರಾಹುಲ್ ಗಾಂಧಿ ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾವೇರಿಯ ನೀಲಪ್ಪ ಶಿವಣ್ಣನವರ್ ಹಾಗೂ ಬಳ್ಳಾರಿಯಿಂದ ಅನ್ನಪೂರ್ಣ ತುಕಾರಾಂ ಅವರನ್ನು ಮಂತ್ರಿ ಮಾಡುವಂತೆ ಒತ್ತಾಯಿಸಿದ್ದರು.
ಆದರೆ, ಸಿದ್ದರಾಮಯ್ಯ ಸೂಚಿಸಿದ್ದ ಎರಡೂ ಹೆಸರುಗಳನ್ನು ಬದಿಗಿಟ್ಟು ನಾಗೇಂದ್ರ ಮತ್ತು ಹೆಬ್ಬಾಳ್ಕರ್ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಶಿವಕುಮಾರ್ ನಿರ್ಧರಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಅವರು, ಮಂತ್ರಿಮಂಡಲಕ್ಕೆ ಸದ್ಯದಲ್ಲೇ ಮಹಿಳಾ ಪ್ರತಿನಿಧಿ ಸೇರ್ಪಡೆ ಆಗಲಿದ್ದಾರೆ ಎಂದಿದ್ದನ್ನು ಸ್ಮರಿಸಬಹುದು.


