ಬೆಂಗಳೂರು : ಸಚಿವ ಬಿ. ನಾಗೇಂದ್ರ ಅವರಷ್ಟೇ ಅಲ್ಲದೆ, ವಸತಿ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಗಣಿಧಣಿ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಅವರ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಲ್ಹೋಟ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಜ್ಯಪಾಲದ ಪತ್ರ ಸರ್ಕಾರಕ್ಕೆ ತಲುಪುತ್ತಿದ್ದಂತೆ ವರಿಷ್ಠರ ಸೂಚನೆ ಮೇರೆಗೆ ಮುಖ್ಯಮಂತ್ರಿಯವರಿಗೆ ನಾಗೇಂದ್ರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಆದರೆ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮೇಲೆ ಅಪಾಯದ ತೂಗುಗತ್ತಿ ನೇತಾಡ ತೊಡಗಿದೆ.
ರಾಜ್ಯಪಾಲರ ಪತ್ರ ಸರ್ಕಾರಕ್ಕೆ ತಲುಪುತ್ತಿದ್ದಂತೆ ಇಬ್ಬರು ಸಚಿವರ ವಿರುದ್ಧ ಯಾವ ತೀರ್ಮಾನ ಕೈಗೊಳ್ಳಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಳೆದ ಗುರುವಾರ ದೆಹಲಿಗೆ ತೆರಳಿ ಪಕ್ಷದ ಅಧಿನಾಯಕ ರಾಹುಲ್ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರನ್ನು ಭೇಟಿ ಮಾಡಿ ಸಲಹೆ ಪಡೆದಿದ್ದಾರೆ.
ವರಿಷ್ಠರನ್ನು ಭೇಟಿ ಮಾಡಿ ಮುಖ್ಯ ಮಂತ್ರಿ ಹಿಂತಿರುಗುತ್ತಿದ್ದಂತೆ ದೆಹಲಿಯಲ್ಲಿ ಬಿಡಾರ ಹೂಡಿದ್ದ ನಾಗೇಂದ್ರ ನಗರಕ್ಕೆ ಹಿಂತಿರುಗುತ್ತಿದ್ದಂತೆ ಮುಖ್ಯಮಂತ್ರಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ವಸತಿ ಸಚಿವ ಜಮೀರ್ ಅಹ್ಮದ್ಖಾನ್ ವಿಚಾರದಲ್ಲಿ ವರಿಷ್ಠರು ಯಾವ ತೀರ್ಮಾನ ಕೈಗೊಂಡಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಮುಖ್ಯಮಂತ್ರಿಯವರು ಸಣ್ಣಪ್ರಮಾಣದಲ್ಲಿ ಸಂಪುಟ ಪುನಾರಚನೆ ಮಾಡುವ ಸಂದರ್ಭದಲ್ಲಿ ಇವರನ್ನು ಕೈಬಿಡಲಿದ್ದಾರೆ ಎಂಬ ವದಂತಿ ದಟ್ಟವಾಗಿದೆ.
ಭ್ರಷ್ಟಾಚಾರ, ಆದಾಯಕ್ಕಿಂತ ಹೆಚ್ಚು ಆಸ್ತಿಪಾಸ್ತಿ ಹೊಂದಿರುವುದು ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇಡಿ ಮತ್ತು ಸಿಬಿಐ ಈಗಾಗಲೇ ಇವರ ಮೂವರ ವಿರುದ್ಧ ತನಿಖೆ ನಡೆಸಿದೆ.
ಸಿಬಿಐ, ಜಾರಿ ನಿರ್ದೇಶನಾಲಯ (ಇಡಿ) ನಾಗೇಂದ್ರ, ಜಮೀರ್ ಹಾಗೂ ಜನಾರ್ದನ್ ರೆಡ್ಡಿ ವಿರುದ್ಧ ವಿಚಾರಣೆಗಾಗಿ ಅನುಮತಿ ಕೋರಿದೆ.
ತನಿಖಾ ಸಂಸ್ಥೆಗಳು ಇವರ ವಿರುದ್ಧ ತನಿಖೆ ನಡೆಸಲು ಅವಕಾಶ ಮಾಡಿಕೊಡುವಂತೆ ರಾಜ್ಯಪಾಲರು ಆಗಸ್ಟ್ 24 ರಂದು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ.
ರಾಜ್ಯಪಾಲರು ಪತ್ರ ಬರೆದ ನಂತರ ಸರ್ಕಾರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಮತ್ತು ಸಂಪುಟದ ಮುಂದೆಯೂ ಈ ವಿಚಾರ ಮಂಡಿಸಿಲ್ಲ.
ಸರ್ಕಾರ ತೀರ್ಮಾನ ಕೈಗೊಳ್ಳುವುದಕ್ಕೂ ಮುನ್ನ ವರಿಷ್ಠರ ಅಭಿಪ್ರಾಯ ಪಡೆಯುವ ಉದ್ದೇಶದಿಂದಲೇ ಮುಖ್ಯಮಂತ್ರಿಯವರು ಆಗಸ್ಟ್ 27 ರಂದು ದೆಹಲಿ ಪ್ರವಾಸ ಕೈಗೊಂಡು ಹಿಂತಿರುಗಿದ್ದಾರೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಾಂತರ ರೂ. ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ನಾಗೇಂದ್ರ ವಿರುದ್ಧ, ಇನ್ನು ಜಮೀರ್ ಅಹ್ಮದ್ ಖಾನ್ ವಿರುದ್ಧ ಅಕ್ರಮವಾಗಿ ಹಣ ವರ್ಗಾವಣೆ, ಆದಾಯಕ್ಕಿಂತ ಹೆಚ್ಚು ಸಂಪಾದನೆ ಮತ್ತು ಅವರು ನಡೆಸುವ ಸಂಸ್ಥೆಗಳು ವಾಣಿಜ್ಯ ಇಲಾಖೆಗೆ ಕೋಟ್ಯಾಂತರ ರೂ. ದೋಖಾ ಹಾಕಿವೆ ಎಂಬ ಆರೋಪಗಳ ಬಗ್ಗೆ ಇಡಿ ತನಿಖೆ ನಡೆಸಿದೆ.
ಇನ್ನು ಜನಾರ್ದನ ರೆಡ್ಡಿ ವಿರುದ್ಧ ಹತ್ತು ಹಲವಷ್ಟು ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನೂ ಕೆಲವು ಪ್ರಕರಣದ ಬಗ್ಗೆ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರೀಯ ತನಿಖಾ ಸಂಸ್ಥೆಗಳು ರಾಜ್ಯಪಾಲರ ಮೋರೆ ಹೋಗಿರುವೆ.
ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎರಡು ತಿಂಗಳ ಅವಧಿಯಲ್ಲೇ ತಮ್ಮ ಸಂಪುಟದ ಸಹೋದ್ಯೋಗಿಗಳ ಮೇಲೆ ಬಂದಿರುವ ಆರೋಪಗಳು ಅವರನ್ನು ಮುಜುಗರಕ್ಕೆ ಸಿಲುಕಿಸಿವೆ.
ಪಕ್ಷ ಮತ್ತು ಸರ್ಕಾರಕ್ಕಾಗುವ ಮುಜುಗರ ತಪ್ಪಿಸಲು ನಾಗೇಂದ್ರ ಅವರ ರಾಜೀನಾಮೆ ಪಡೆದಿದ್ದಾರೆ. ಇನ್ನು ಜಮೀರ್ ಅವರ ವಿಷಯದಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಂಡಿಲ್ಲ.
ಜನಾರ್ದನ ರೆಡ್ಡಿ ಬಿಜೆಪಿ ಬೆಂಬಲಿತ ಪಕ್ಷೇತರ ಶಾಸಕ. ಅವರು ವಿಷಯದಲ್ಲಿ ಮುಕ್ತವಾಗಿ ಅನುಮತಿ ನೀಡಬಹುದು. ಆದರೆ ಇವರಿಬ್ಬರನ್ನು ಬಿಟ್ಟು ಅವರೊಬ್ಬರ ವಿಷಯದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ.


