ಕೆಎಸ್ಆರ್ ಟಿಸಿಯಿಂದ ಸಾವಿರ ಹೆಚ್ಚುವರಿ ಬಸ್ಸು
ಬೆಂಗಳೂರು: ಕೆಎಸ್ಆರ್ ಟಿಸಿಯಿಂದ ಡಿಸೆಂಬರ್ 22, 23ರ ವಾರಾಂತ್ಯ ದಿನಗಳು ಹಾಗೂ ಡಿ.25ರಂದು ಜರುಗುವ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ಸಾವಿರ ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಿದೆ.
ದಿನಾಂಕ:22.12.2023 ರಿಂದ 24.12.2023 ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 1000 ಹೆಚ್ಚುವರಿ ಬಸ್ಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ಹಾಗೆಯೇ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಪ್ರಯಾಣಿಕರು ಮರಳಲು ಅನುಕೂಲವಾಗುವಂತೆ ದಿನಾಂಕ: 25.12.2023 ರಂದು ವಿಶೇಷ ಬಸ್ ಗಳನ್ನು ಕಾರ್ಯಾಚರಣೆ ಮಾಡಲಾಗುವುದು ಕೆಎಸ್ಆರ್ ಟಿಸಿ ಪ್ರಕಟಣೆ ತಿಳಿಸಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಈ ಹೆಚ್ಚುವರಿ ವಿಶೇಷ ಸೌಲಭ್ಯವಿರಲಿದೆ.
ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆಗೆ ಬಸ್ ಕಾರ್ಯಾಚರಣೆ ಮಾಡಲಾಗುವುದು.
ತಮಿಳುನಾಡು ಮತ್ತು ಕೇರಳ ಕಡೆಗೆ ಅಂದರೆ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರ್, ತಿರುಚಿ, ಪಾಲಕ್ಕಾಡ್, ತ್ರಿಶೂರ್, ಏರ್ನಾಕುಲಂ, ಕೋಯಿಕೋಡ್, ಕ್ಯಾಲಿಕಟ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಾಗುವುದು.
ಹೆಚ್ಚುವರಿ ಸಾರಿಗೆಗಳಿಗೂ ಮುಂಗಡ ಬುಕ್ಕಿಂಗ್ ವ್ಯವಸ್ಥೆ
ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ಅಪ್ ಪಾಯಿಂಟ್ನ ಹೆಸರನ್ನು ಗಮನಿಸುವಂತೆ ಕೋರಲಾಗಿದೆ.
ಕೋವಿಡ್ ಹೆಚ್ಚಳ: ಸಾರ್ವಜನಿಕರೇ ಎಚ್ಚರ
ಇ-ಟಿಕೇಟ್ ಬುಕಿಂಗ್ನ್ನು www.ksrtc.karnataka.gov.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ಪ್ರಯಾಣಿಕರು ಕರ್ನಾಟಕ ಹಾಗೂ ಅಂತರರಾಜ್ಯದಲ್ಲಿ ಇರುವ 691 ಗಣಕೀಕೃತ ಬುಕಿಂಗ್ ಕೌಂಟರ್ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.
ಶೇಕಡ 5 -10 ರಷ್ಟು ರಿಯಾಯಿತಿ
ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು.
ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೆರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್ಗಳು ಇದ್ದು, ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.
ಕಾರ್ಯಾಚರಣೆ ಮಾಡಲಾಗುವ ಹೆಚ್ಚುವರಿ ಸಾರಿಗೆಗಳು, ಅವುಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಂತರ್ಜಾಲ ವ್ಯವಸ್ಥೆಯಲ್ಲಿ ಹಾಗೂ ಕರಾರಸಾ ನಿಗಮದ ವೆಬ್ಸೈಟ್ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಒದಗಿಸಲಾಗಿದೆ. ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಚೀಟಿಗಳಲ್ಲೂ ಕೂಡ ವಾಹನ ಹೊರಡುವ ಸ್ಥಳದ ವಿವರ ನಮೂದಿಸಲಾಗಿದೆ.
ಅಲ್ಲದೇ, ನಿಗಮದ ಕಾರ್ಯಾಚರಣೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲ್ಲೂಕು/ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದು ಎಂದು ಕೆಎಸ್ಆರ್ ಟಿಸಿ ತಿಳಿಸಿದೆ.