ಬೆಂಗಳೂರು:ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಣಕ್ಕಿಳಿಯುವ ಬಗ್ಗೆ ದೆಹಲಿಯಲ್ಲಿ ನಿರ್ಧಾರವಾಗಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆಯೇ ಎನ್ನುವುದನ್ನು ಈಗಲೇ ಏನೂ ಹೇಳಲು ಸಾಧ್ಯವಿಲ್ಲ, ದೆಹಲಿಯಲ್ಲಿ ಉಭಯ ಪಕ್ಷದ ನಾಯಕರು ನಡೆಸುವ ಚರ್ಚೆಯಲ್ಲಿ ಬರುವ ಫಲಿತಾಂಶದ ಮೇಲೆ ತೀರ್ಮಾನವಾಗಲಿದೆ ಎಂದರು.
ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ
ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಆಗುತ್ತದೆ. ಜೆಡಿಎಸ್ ಪಕ್ಷಕ್ಕೆ ಯಾವ ಯಾವ ಕ್ಷೇತ್ರ ಎನ್ನುವುದು ಮೋದಿ, ಅಮಿತ್ ಶಾ, ನಡ್ಡಾ, ಕುಮಾರಸ್ವಾಮಿ ಅವರು ಸಮಾಲೋಚನೆ ಮಾಡುತ್ತಾರೆ. ಅಲ್ಲಿ ಅವರು ಸ್ಪರ್ಧೆ ಮಾಡಬೇಕಾ, ಬೇಡವಾ ಎನ್ನುವ ಅಂಶವನ್ನು ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ನಡುವೆ ಕ್ಷೇತ್ರ ಹಂಚಿಕೆ ಅಂತಿಮ ಹಂತದಲ್ಲಿದ್ದು, ಬಹುಶಃ ಒಂದು ವಾರದೊಳಗೆ ಎಲ್ಲಾ ಪ್ರಕ್ರಿಯೆ ನಡೆಯುತ್ತದೆ ಎಂದರು.
ಸೀಟು ಹಂಚಿಕೆ ವಿಚಾರದ ಬಗ್ಗೆ ಈಗಾಗಲೇ ಬಿಜೆಪಿ ನಾಯಕರ ಜತೆ ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಬಹುಶಃ ಇನ್ನೊಮ್ಮೆ ಕೂತು ಚರ್ಚೆ ಮಾಡಿದರೆ ಅಲ್ಲಿಗೆ ಎಲ್ಲಾ ಅಂತಿಮ ಆಗುತ್ತದೆ.
ಮೈತ್ರಿ ಧರ್ಮ ಪಾಲಿಸುತ್ತೇವೆ
ಬಿಜೆಪಿ ಟಿಕೆಟ್ ವಿಚಾರವಾಗಿ ಕೆಲವು ಕ್ಷೇತ್ರಗಳ ಅಭಿಪ್ರಾಯ ಕೇಳಬಹುದು. ಆಗ ಅಭಿಪ್ರಾಯವನ್ನು ಹೇಳುತ್ತೇವೆ. ಮೈತ್ರಿ ಧರ್ಮವನ್ನು ನಾವು ಪಾಲಿಸುತ್ತೇವೆ. ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಬಿಜೆಪಿ ಜತೆ ಸೇರಿ ಕೆಲಸ ಮಾಡುತ್ತೇವೆ.
ಚುನಾವಣೆ ಅಧಿಸೂಚನೆ ಆದ ಬಳಿಕ ರಾಜ್ಯದಲ್ಲಿ ನನ್ನ ಪ್ರವಾಸದ ಬಗ್ಗೆ ನಿರ್ಧಾರ ಮಾಡಲಾಗುವುದು. ಮೋದಿ ಅವರದ್ದು ಬಹಳ ಸ್ಪೀಡ್ ಇದೆ, 10 ದಿನಗಳಲ್ಲಿ ಹಲವಾರು ರಾಜ್ಯಗಳಲ್ಲಿ ಅವರು ಪ್ರವಾಸ ಮಾಡುತ್ತಿದ್ದಾರೆ. ಆದರೆ, ನಾನು ಎಲ್ಲಿಗೆ ಕರೆದರೆ ಅಲ್ಲಿಗೆ ಹೋಗುತ್ತೇನೆ. ಯಾವ ಜಿಲ್ಲೆಗೆ ಕರೆದರೂ ಹೋಗುತ್ತೇನೆ. ಕುಮಾರಸ್ವಾಮಿ ಅವರು ಸೇರಿದಂತೆ ಜೆಡಿಎಸ್ ನಾಯಕರು ಎಲ್ಲರೂ ಪ್ರವಾಸ ಮಾಡುತ್ತಾರೆ ಎಂದರು.
ಮಾಧ್ಯಮಗಳಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಕುರಿತು ಅನಗತ್ಯವಾಗಿ ಚರ್ಚೆ ಆಗುತ್ತಿದೆ ಎಂದ ಅವರು, ಆ ಜಿಲ್ಲೆಯಲ್ಲಿ ಪಕ್ಷ ಬಲಿಷ್ಟವಾಗಿದೆ, ಸಂಘಟನೆ ಚೆನ್ನಾಗಿದೆ, ಆದಷ್ಟು ಬೇಗ ಮಂಡ್ಯದಲ್ಲಿ ಸಮಾವೇಶ ನಡೆಸಲಾಗುವುದು, ನನಗೆ ವಯಸ್ಸಾಗಿದ್ದರೂ ನಾನೇನು ಸುಮ್ಮನೆ ಕೂರಲ್ಲ ಎಂದರು.
ಒಂದಿಷ್ಟು ಜನ ಮನಸ್ಸಿಗೆ ಬಂದ ಹಾಗೆ ಹೇಳಿಕೆ ಕೊಡುತ್ತಿದ್ದಾರೆ. ಹಾಗೆ ಹೇಳಿಕೆ ಕೊಡಲು ಅವರು ಸ್ವತಂತ್ರರು, ಬಿಜೆಪಿ ವರಿಷ್ಠರು ತೆಗೆದುಕೊಳ್ಳುವ ನಿಲುವೇ ಅಂತಿಮ ಎಂದರು.