ಕಳ್ಳರೆಂದು ಭಾವಿಸಿ ಓಡಿಸಿಕೊಂಡು ಹೋದ ಹಳ್ಳಿ ಜನ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು:ಕಗ್ಗತ್ತಲ ರಾತ್ರಿಯಲ್ಲಿ ಖಾಲಿ ಜಾಗ ನೋಡಲು ಹೋದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಕಳ್ಳರು ಬಂದಿದ್ದಾರೆಂದು ಭಾವಿಸಿ ಹಳ್ಳಿ ಜನರು ಓಡಿಸಿಕೊಂಡು ಹೋದ ಸ್ಫೋಟಕ ಮಾಹಿತಿಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಬಹಿರಂಗಪಡಿಸಿದ್ದಾರೆ.
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ವ್ಯಾಪ್ತಿಗೆ ಸೇರಿದ 150 ಎಕರೆ ಭೂಮಿ ನೋಡಲು ಶಿವಕುಮಾರ್ ಖಾಸಗಿ ಕಾರಿನಲ್ಲಿ ಹೋದ ವೇಳೆ ಈ ಘಟನೆ ನಡೆದಿದೆ.
ನಿಜವೋ, ಸುಳ್ಳೋ
ಇದು ನಿಜವೋ, ಸುಳ್ಳೋ ಎಂಬುದನ್ನು ಮುಖ್ಯಮಂತ್ರಿಗಳೇ ಬಹಿರಂಗಪಡಿಸಬೇಕು, ಆದರೆ, ನಗರದ ಹೊರವಲಯದ ಸೋಂಪುರ ವ್ಯಾಪ್ತಿಯ ಗ್ರಾಮಗಳಲ್ಲಿ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಭ್ರಷ್ಟಾಚಾರದ ನಿಗ್ರಹ ಕಡೆ ಗಮನ ಹರಿಸೋಕೂ ಟೈಂ ಇಲ್ಲ, ಆದರೆ, ಖಾಲಿ ಜಾಗ ಎಲ್ಲಿದೆ, ಸರ್ಕಾರಿ ಜಾಗ ಎಲ್ಲಿದೆ ಅಂತಾ ನೋಡೋಕ್ಕೆ ಟೈಂ ಇದೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎನ್ನುತ್ತಾರೆ ಮುಖ್ಯಮಂತ್ರಿ, ಆದರೆ, ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ.
ಭ್ರಷ್ಟಾಚಾರ ಅಲ್ವಾ
ಇತ್ತೀಚೆಗೆ 20 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ರೆವಿನ್ಯೂ ಇನ್ಸ್ಪೆಕ್ಟರ್ ಒಬ್ಬರು 50,000 ರೂ. ಲಂಚ ತೆಗೆದುಕೊಂಡು ಸಸ್ಪೆಂಡ್ ಆಗಿದ್ದಾರೆ, ಅದು ಭ್ರಷ್ಟಾಚಾರ ಅಲ್ವಾ.
ಸಂಪುಟ ಸಚಿವರೊಬ್ಬರು ಅಧಿಕಾರಿಗಳ ಕೆಲಸಕ್ಕೆ ಗೌರವದಿಂದ ಧನ ಕೊಡಬೇಕು ಅಂದರಲ್ಲ, ಅದು ಭ್ರಷ್ಟಾಚಾರ ಅಲ್ಲವಾ.
ಹಲವೆಡೆ ಸರ್ಕಾರಿ ಕೆಲಸ ಮಾಡಲು ದುಡ್ಡು ತೆಗೆದುಕೊಂಡು ಅಧಿಕಾರಿಗಳು ಸಿಕ್ಕಿಬೀಳುತ್ತಿದ್ದಾರೆ, ಇದಕ್ಕೆ ನನ್ನ ಬಳಿ ಟನ್ಗಟ್ಟಲೇ ದಾಖಲೆಗಳಿವೆ.
ಸಾಕ್ಷಿಗುಡ್ಡೆ ಕೇಳುತ್ತಾರೆ
ಮುಖ್ಯಮಂತ್ರಿ ಜಪಾನ್ಗೆ ಹೋದರೂ ಕುಮಾರಸ್ವಾಮಿ, ದೇವೇಗೌಡರ ಸಾಕ್ಷಿಗುಡ್ಡೆ ಕೇಳುತ್ತಾರೆ, ಟೊಯೋಟಾ ಘಟಕ ಹರಿಯಾಣಕ್ಕೋ, ಮಹಾರಾಷ್ಟ್ರಕ್ಕೋ ಹೋಗುತ್ತಿದ್ದಾಗ, ದೇವೇಗೌಡರು ಟೊಯೋಟಾ ಕಂಪನಿಯನ್ನು ಕರ್ನಾಟಕಕ್ಕೆ ತಂದರು.
ಕಾಂಗ್ರೆಸ್ನವರು ಮರಳು, ಇಟ್ಟಿಗೆ ಪೈಪೋಟಿಗೆ ಬಿದ್ದು ದುಡ್ಡು ಮಾಡಿಕೊಂಡರು, ಅದನ್ನು ನಾವು ಮಾಡಲಿಲ್ಲ, ಟೊಯೊಟಾ ಕಂಪನಿ ತಮ್ಮ ಪ್ರಾಜೆಕ್ಟ್ ಅನ್ನು ಮಹಾರಾಷ್ಟ್ರಕ್ಕೆ ಏಕೆ ತೆಗೆದುಕೊಂಡು ಹೋದರು, ಅಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ.
ಟೊಯೋಟಾ ಮಹಾರಾಷ್ಟ್ರಕ್ಕೆ ಏಕೆ ಹೋಯಿತು, ಇದಕ್ಕೆ ಯಾರು ಕಾರಣ ಎಂಬುದನ್ನು ಮುಖ್ಯಮಂತ್ರಿ ಬಹಿರಂಗ ಪಡಿಸುವರೇ.
ಇವರು ಭ್ರಷ್ಟಾಚಾರ ನಿಗ್ರಹ ಬಗ್ಗೆ ದಿನಾ ಮಾತನಾಡಿ, ತಮ್ಮ ಮಾತಿಗೆ ಬೆಲೆಯೇ ಇಲ್ಲದಂತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕುಟುಕಿದರು.


