ಬೆಂಗಳೂರು:ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಮಹೇಶ್ ಟೆಂಗಿನಕಾಯಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಟೆಂಗಿನಕಾಯಿ ಅವರಿಗೆ ಆರ್ಎಸ್ಎಸ್ ಪೂರ್ಣ ಬೆಂಬಲ ವ್ಯಕ್ತಪಡಿಸಿ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಇವರ ನಾಯಕತ್ವದಲ್ಲೇ ಎದುರಿಸಬೇಕೆಂಬ ನಿಲುವನ್ನು ಹೊಂದಿದೆ.
ಪಟ್ಟ ಕಟ್ಟಲು ಸಿದ್ಧತೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಿತಿನ್ ನಬೀನ್ ಆಯ್ಕೆ ಆದಂತೆ, ರಾಜ್ಯಾಧ್ಯಕ್ಷ ಸ್ಥಾನಕ್ಕೂ ಆರ್ಎಸ್ಎಸ್ ಹಿನ್ನೆಲೆ ಉಳ್ಳ ಟೆಂಗಿನಕಾಯಿ ಅವರಿಗೆ ಪಟ್ಟ ಕಟ್ಟಲು ಸಿದ್ಧತೆ ನಡೆದಿದೆ.
ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೇರಲು ಭಾರೀ ಪೈಪೋಟಿ ನಡೆದಿದೆ.
ವಿಜಯೇಂದ್ರ ಸಹಾ ಇನ್ನೊಂದು ಅವಧಿಗೆ ಮುಂದುವರೆಸುವಂತೆ ರಾಷ್ಟ್ರೀಯ ಬಿಜೆಪಿ ನಾಯಕರು ಮತ್ತು ಗೃಹ ಸಚಿವ ಅಮಿತ್ ಷಾ ಅವರಲ್ಲಿ ಮನವಿ ಮಾಡಿದ್ದಾರೆ.
ವರಿಷ್ಠರಿಗೆ ಮನವಿ
ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುತ್ತೇನೆ, ನನ್ನನ್ನೇ ಮತ್ತೊಂದು ಅವಧಿಗೆ ಮುಂದುವರೆಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಮಾಡುವುದಾಗಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.
ವಿಜಯೇಂದ್ರ ಸ್ಥಾನಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ, ಮುರುಗೇಶ್ ನಿರಾಣಿ, ಬಿ.ಶ್ರೀರಾಮುಲು, ಸುನಿಲ್ ಕುಮಾರ್ ಭಾರೀ ಕಸರತ್ತು ನಡೆಸಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹರಿಶ್ಚಂದ್ರ ದ್ವಿವೇದಿ ನೀಡಿರುವ ವರದಿ ಆಧರಿಸಿ ದೆಹಲಿ ವರಿಷ್ಠರು ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ.
ವರಿಷ್ಠರ ಸರಣಿ ಸಭೆ
ವಿಜಯೇಂದ್ರ ಅವರನ್ನು ಮುಂದುವರೆಸಬೇಕೇ ಅಥವಾ ಬೇರೆಯವರನ್ನು ತರಬೇಕೇ ಎಂಬ ಬಗ್ಗೆ ಬಿಜೆಪಿ ವರಿಷ್ಠರು ಸರಣಿ ಸಭೆಗಳನ್ನು ನಡೆಸಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಆಕಾಂಕ್ಷಿಗಳು ದೆಹಲಿ ದಂಡಯಾತ್ರೆ ನಡೆಸಿದ್ದಾರೆ.
ಇದರ ನಡುವೆ ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತರೊಬ್ಬರಿಗೆ ಈ ಬಾರಿ ಅವಕಾಶ ಮಾಡಿಕೊಡಬೇಕೆಂದು ಟೆಂಗಿನಕಾಯಿ ಹೆಸರನ್ನು ಮುನ್ನಲೆಗೆ ತಂದಿದೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಚಿನ್ಹೆಯಡಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.
ಶೆಟ್ಟರ್ ವಿರುದ್ಧ ಜಯ
ಈ ಸಂದರ್ಭದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿದ್ದ ಟೆಂಗಿನಕಾಯಿ ಅವರನ್ನು ಶೆಟ್ಟರ್ ವಿರುದ್ಧ ಬಿಜೆಪಿ ಕಣಕ್ಕಿಳಿಸಿತ್ತು, ಭಾರೀ ಅಂತರದಿಂದ ಶೆಟ್ಟರ್ ಅವರನ್ನು ಪರಾಭವಗೊಳಿಸಿ ಕ್ಷೇತ್ರವನ್ನು ಬಿಜೆಪಿಗೆ ಉಳಿಸಿಕೊಟ್ಟಿದ್ದರು.
ಇದೀಗ ಮಹೇಶ್ ಟೆಂಗಿನಕಾಯಿ ಅವರಿಗೆ ಪಕ್ಷದ ರಾಜ್ಯ ನಾಯಕತ್ವ ವಹಿಸಲು ಆರ್ಎಸ್ಎಸ್ ಮುಂದಾಗಿದೆ.


