ಬೆಂಗಳೂರು:ಸಚಿವ ಸ್ಥಾನ ದೊರೆಯದೆ ಅಸಮಾಧಾನಗೊಂಡ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಡಳಿತ ಪಕ್ಷದ ಎಲ್ಲಾ ಜನಪ್ರತಿನಿಧಿಗಳ ಕ್ಷೇತ್ರಗಳಿಗೆ ತಲಾ 100 ಕೋಟಿ ರೂ. ಅನುದಾನ ನೀಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ.
ಪ್ರತಿಪಕ್ಷದ ಸದಸ್ಯರಿಗೆ ಸದ್ಯಕ್ಕೆ ಕೇವಲ 25 ಕೋಟಿ ರೂ. ನೀಡಲಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮೊತ್ತ ನೀಡಲಿದ್ದಾರಂತೆ.
ವಿರೋಧಿ ಶಾಸಕರ ಮೂಗಿಗೆ ತುಪ್ಪ
ಮುಖ್ಯಮಂತ್ರಿ ಅವರ ಈ ತೀರ್ಮಾನದಿಂದ ಆಡಳಿತ ಪಕ್ಷದ ಸದಸ್ಯರ ಬಾಯಿಗೆ ಬೆಣ್ಣೆ ಹಾಕಿದರೆ, ವಿರೋಧ ಪಕ್ಷದ ಶಾಸಕರ ಮೂಗಿಗೆ ತುಪ್ಪ ಸವರಲು ಹೊರಟಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಪ್ರತೀ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡುವುದಾಗಿ ಹೇಳುತ್ತಾ ಬಂದಿದ್ದಾರಾದರೂ ಇದುವರೆಗೂ ಬಿಡುಗಡೆ ಆಗಿರಲಿಲ್ಲ.
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯುವ ಮುನ್ನ ಆಯ್ದ ಸದಸ್ಯರಿಗೆ ಮುಖ್ಯಮಂತ್ರಿ ನಿಧಿಯಿಂದ ಒಂದಷ್ಟು ಅನುದಾನ ನೀಡಿದ್ದರು.
18 ತಿಂಗಳಲ್ಲಿ ವಿಧಾನಸಭಾ ಚುನಾವಣೆ
ರಾಜ್ಯ ವಿಧಾನಸಭಾ ಚುನಾವಣೆ ಇನ್ನು 18 ತಿಂಗಳಲ್ಲಿ ಎದುರಾಗಲಿದೆ, ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಾಗಿಲ್ಲ, ಪ್ರತೀ ಕ್ಷೇತ್ರಕ್ಕೂ 100 ಕೋಟಿ ರೂ. ಅನುದಾನ ನೀಡಿ ಎಂದು ಆಡಳಿತ ಪಕ್ಷದ ಸದಸ್ಯರೇ ಒತ್ತಾಯಿಸಿದ್ದರು.
ಶಿವಕುಮಾರ್ ಮುಖ್ಯಮಂತ್ರಿಯಾಗಿ ಸಂಪುಟ ವಿಸ್ತರಣೆ ನಂತರ ಸಚಿವ ಸ್ಥಾನ ದೊರೆಯದ ಹಲವು ಸದಸ್ಯರು ಅಸಮಾಧಾನಗೊಂಡಿದ್ದಾರೆ.
ಇಂತಹವರನ್ನು ಸಮಾಧಾನ ಮಾಡುವ ಮತ್ತು ಮುಂಬರುವ ಚುನಾವಣೆ ವೇಳೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತಮ್ಮ ಶಾಸಕರಿಗೆ 100 ಕೋಟಿ ರೂ. ನೀಡುವ ಆದೇಶ ಒಂದೆರಡು ದಿನದಲ್ಲಿ ಹೊರಬೀಳಲಿದೆ.
ಮುಖ್ಯಮಂತ್ರಿ ನಿಧಿ
ನೂರು ಕೋಟಿ ರೂ. ಅನುದಾನದಲ್ಲಿ 50 ಕೋಟಿ ರೂ. ಮುಖ್ಯಮಂತ್ರಿ ನಿಧಿಯಿಂದ, ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತಲಾ 25 ಕೋಟಿ ರೂ. ಸೇರಿಸಿ ಒಟ್ಟು 100 ಕೋಟಿ ರೂ. ಬಿಡುಗಡೆ ಮಾಡಲಾಗುತ್ತಿದೆ.
ಪ್ರತಿಪಕ್ಷದ ಸದಸ್ಯರಿಗೆ ತಲಾ 25 ಕೋಟಿ ರೂ. ಮುಖ್ಯಮಂತ್ರಿಗಳ ನಿಧಿಯಿಂದ ಬಿಡೆಗಡೆ ಮಾಡಲಾಗುತ್ತದೆ.
ಈ ಅನುದಾನದಿಂದ ಶಾಸಕರು ತಮ್ಮ ಕ್ಷೇತ್ರದಲ್ಲಿ ಸ್ವ-ಇಚ್ಛೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು.
ರಸ್ತೆ, ಶಾಲೆಗಳು, ಸೇತುವೆ ಕಾಮಗಾರಿ ಸೇರಿದಂತೆ ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಕೆ ಕುರಿತು ಮಾರ್ಗಸೂಚಿ ಹೊರಡಿಸಲಾಗುತ್ತದೆ.


