ಬೆಂಗಳೂರು:ಎರಡು ಶಿಕ್ಷಕ ಹಾಗೂ ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯನ್ನು ಬಿಜೆಪಿ-ಜೆಡಿಎಸ್ ಒಂದಾಗಿ ಎದುರಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ತಿಳಿಸಿದ್ದಾರೆ.
ನಾಲ್ಕು ಕ್ಷೇತ್ರಗಳನ್ನೂ ನಾವು ಗೆಲ್ಲಬೇಕು, ಆ ದಿಸೆಯಲ್ಲಿ ಒಟ್ಟಾಗಿ ಹೋರಾಟ ಮಾಡಲು ತೀರ್ಮಾನಿಸಲಾಗಿದೆ, ಕ್ಷೇತ್ರವಾರು ಜವಾಬ್ದಾರಿಯನ್ನೂ ನೀಡಲಾಗಿದೆ ಎಂದರು.
4 ಸ್ಥಾನಗಳ ಚುನಾವಣೆ
ಬಿಜೆಪಿ-ಜೆಡಿಎಸ್ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ 4 ಸ್ಥಾನಗಳ ಚುನಾವಣೆ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ನ ಎಲ್ಲಾ ಮುಖಂಡರ ವಿಶೇಷ ಸಭೆ ಕರೆಯಲಾಗಿತ್ತು, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಪಕ್ಷದ ಎಲ್ಲ ನಾಯಕರು, ಜಿಲ್ಲಾ ಅಧ್ಯಕ್ಷರು ಭಾಗವಹಿಸಿದ್ದರು ಎಂದರು.
ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಮುಖ್ಯಮಂತ್ರಿಗಳ ಮೇಲೆ ಶಾಸಕರೇ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ, ಮುಖ್ಯಮಂತ್ರಿ ಅವರಿಗೆ ಆಡಳಿತದ ಮೇಲೆ ಹಿಡಿತ ಇಲ್ಲವಾಗಿದೆ.
ಬೊಕ್ಕಸದ ಸ್ಥಿತಿ ಕುರಿತು ಹಣಕಾಸು ಇಲಾಖೆ ಬರೆದ ಪತ್ರದಿಂದ ಎಲ್ಲ ರಹಸ್ಯ ಜಗಜ್ಜಾಹೀರಾಗಿದೆ, ಖಜಾನೆಯಲ್ಲಿ ಹಣವೇ ಇಲ್ಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ.
ತಂತ್ರಗಾರಿಕೆ ಚರ್ಚೆ
ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಸಂಘಟಿತ ಹೋರಾಟ ನಡೆಸಲಿವೆ, ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ತಂತ್ರಗಾರಿಕೆ ಕುರಿತು ಇಂದಿನ ಸಭೆಯಲ್ಲಿ ಎಲ್ಲಾ ನಾಯಕರು ಸೇರಿ ಚರ್ಚಿಸಿದ್ದೇವೆ.
ರಾಜ್ಯದಲ್ಲಿ ಎನ್.ಡಿ.ಎ. ಸರ್ಕಾರ ಅಧಿಕಾರಕ್ಕೆ ತರುವ ರೂಪರೇಷೆ ಕುರಿತು ಚರ್ಚೆ ಮಾಡಿದ್ದೇವೆ ಎಂದರು.

ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದಲ್ಲಿ ನಡೆದಿರುವ ಅವ್ಯಾಹತ ಅಕ್ರಮಗಳ ಬಗ್ಗೆ ಕಾಕ್ರೋಚ್ ಜನತಾ ಪಕ್ಷ ಏಕೆ ಮೌನವಾಗಿದೆ ಎಂದು ಪ್ರಶ್ನಿಸಿದರು.
ಸಿಜೆಪಿ, ಜೆನ್-ಜಿ ಎಲ್ಲಿದ್ದಾರೆ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ನವದೆಹಲಿಯಲ್ಲಿ ಗಲಾಟೆ ಎಬ್ಬಿಸಿದ ಕಾಕ್ರೋಚ್ ಜನತಾ ಪಕ್ಷ ಮತ್ತು ಜೆನ್-ಜಿಗಳು ಈಗೆಲ್ಲಿ ಹೋಗಿದ್ದಾರೆ, ಅವರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಮಿತಿಮೀರಿದ ಭ್ರಷ್ಟಾಚಾರ ಮತ್ತು ಕೆಪಿಎಸ್ಸಿಯಲ್ಲಿ ನಡೆದಿರುವ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳ ನೇಮಕಾತಿ ಅಕ್ರಮ ಹಾಗೂ ಪಶು ವೈದ್ಯರ ನೇಮಕಾತಿ ಅಕ್ರಮ ಸೇರಿದಂತೆ ಕಾಸಿಗಾಗಿ ಉದ್ಯೋಗಗಳನ್ನು ಮಾರಿಕೊಳ್ಳುತ್ತಿರುವ ಭ್ರಷ್ಟಾಚಾರ ಏಕೆ ಪ್ರಶ್ನಿಸುತ್ತಿಲ್ಲ ಎಂದರು.
ಕರ್ನಾಟಕದಲ್ಲಿ ಕಡುಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ದೊಡ್ಡಮಟ್ಟದ ಕೆಟ್ಟ ಹೆಸರು ಬರುತ್ತಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ, ಅವರದೇ ಸರ್ಕಾರ ಎಸುಗುತ್ತಿರುವ ಅಕ್ರಮಗಳ ಬಗ್ಗೆ ಜಾಣಮೌನ ವಹಿಸಿದ್ದಾರೆ.
ಬರ ನಿರ್ವಹಣೆ ವೈಫಲ್ಯ
ಬರ ನಿರ್ವಹಣೆಯಲ್ಲಿ ಈ ಸರ್ಕಾರ ಸಂಪೂರ್ಣ ವೈಫಲ್ಯವಾಗಿದೆ, ಒಂದು ಕಡೆ ಖಜಾನೆ ಖಾಲಿ ಮಾಡಿ, ಇನ್ನೊಂದು ಕಡೆ ಜನರಿಗೆ ಮಂಕು ಬೂದಿ ಎರಚಲು ಯೋಜನೆಗಳ ಮೇಲೆ ಯೋಜನೆಗಳನ್ನು ಘೋಷಣೆ ಮಾಡುವ ಕೆಲಸ ಮಾಡುತ್ತಿದೆ.
ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ, ಕೆಪಿಎಸ್ಸಿ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಾಗದೆ ಕಾಂಗ್ರೆಸ್ ಸರ್ಕಾರ ಕೈಚೆಲ್ಲಿದೆ.
ಕೆಪಿಎಸ್ಸಿ ಅಕ್ರಮಗಳ ತನಿಖೆಗೆ ರಾಜ್ಯ ಹೈಕೋರ್ಟ್ ಎಸ್ಐಟಿ ರಚಿಸಿ ಅಧಿಕಾರಿಗಳ ನೇಮಕ ಮಾಡಿದೆ, ಆದರೆ ಈ ಅಧಿಕಾರಿಗಳು ಬೇಡವೆಂದು ಸರ್ಕಾರ ನಾಟಕ ಆಡುತ್ತಿದೆ.
ಹೆಬ್ಬಟ್ಟು ಒತ್ತುವ ಅಧಿಕಾರಿಗಳು
ಎಸ್ಐಟಿಯಲ್ಲಿನ ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ, ಹೆಬ್ಬಟ್ಟು ಒತ್ತುವ ಅಧಿಕಾರಿಗಳು ಇವರಿಗೆ ಬೇಕಾಗಿದೆ, ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಇವರಿಗೆ ಆಗುವುದಿಲ್ಲ.
ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ಯಾವ ಪುರುಷಾರ್ಥಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ, ಚುನಾವಣಾ ಆಯೋಗ ಒಂದು ಜವಾಬ್ದಾರಿಯುತ ಸಂಸ್ಥೆ, ಕಳೆದ 78 ವರ್ಷಗಳಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದುಕೊಂಡು ಬಂದಿದ್ದರೆ ಅದು ಚುನಾವಣಾ ಆಯೋಗದ ಜವಾಬ್ದಾರಿಯಿಂದಲೇ.
ಆಯೋಗದ ಮುಖ್ಯ ಆಯುಕ್ತರು ಮತ್ತು ಇಬ್ಬರು ಸದಸ್ಯರ ನಡುವಿನ ಅಭಿಪ್ರಾಯ ಭೇದದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಇಟ್ಟುಕೊಂಡು ದೊಡ್ಡ ಅಪರಾಧದಂತೆ ಬಿಂಬಿಸಿ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ಮಾಡುತ್ತಿದೆ.
ಸತ್ಯಾಸತ್ಯತೆ ತಿಳಿಸಲಿ
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನೇನು ಮಾಡಿದೆ ಎಂಬ ಚರ್ಚೆ ಮಾಡುವುದಿಲ್ಲ, ಆದರೆ, ಭಿನ್ನಾಭಿಪ್ರಾಯ ಯಾವ ಕಾರಣಕ್ಕೆ ಬಂದಿದೆ, ಸತ್ಯಾಸತ್ಯತೆ ಏನು ಎಂಬುದನ್ನು ಆಯೋಗವೇ ದೇಶದ ಜನತೆ ಮುಂದೆ ಹೇಳಬೇಕು ಮತ್ತು ತನ್ನ ಸಂಸ್ಥೆ ಗೌರವ ಕಾಪಾಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ನಿರಂತರವಾಗಿ ರಾಷ್ಟ್ರದ ಸಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಲೇ ಇದೆ, ಅವುಗಳ ಚಾರಿತ್ಯವಧೆ ಮಾಡುವುದಲ್ಲದೆ ತನ್ನ ವೈಫಲ್ಯಗಳನ್ನು ಸಂಸ್ಥೆಗಳ ಮೇಲೆ ಹೇರುವ ಪ್ರಯತ್ನ ಮಾಡಿಕೊಂಡೆ ಬರುತ್ತಿದೆ.
ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ನಡೆಸುತ್ತಿರುವ ದಾಳಿ ಇದೇ ಮೊದಲಲ್ಲ, ರಾಹುಲ್ ಗಾಂಧಿ ಜನತೆ ದಿಕ್ಕು ತಪ್ಪಿಸಲು ಆಗಾಗ ಇಂತ ಕೆಲಸಗಳಿಗೆ ಕುಮ್ಮಕ್ಕು ಕೊಡುತ್ತಾರೆ ಎಂದರು.
ಕಾಫಿ-ಟೀ ಕುಡಿಯಲು 200 ಕೋಟಿ ರೂ.
ರಾಜ್ಯ ಸರ್ಕಾರ ಘೋಷಿಸಿರುವ ರೈತರಿಗೆ ತಲಾ 2500 ರೂ. ಬರ ಪರಿಹಾರದ ಇವರ ಯೋಗ್ಯತೆ ತೋರಿಸುತ್ತದೆ, ಹಿಂದಿನ ಮುಖ್ಯಮಂತ್ರಿ ಕಚೇರಿಯಲ್ಲಿ ಕಾಫಿ-ಟೀ ಕುಡಿಯಲು 200 ಕೋಟಿ ರೂ. ಖರ್ಚು ಮಾಡಿದ್ದರು, ನಿಮ್ಮ ಯೋಗ್ಯತೆಗೆ ರೈತರಿಗೆ 2500 ರೂ. ಕೊಟ್ಟಿದ್ದೀರಲ್ಲ, ನಿಮಗೆ ಮಾನ ಮರ್ಯಾದೆ ಇದೆಯಾ.
ರೈತ ಏನು ಭಿಕ್ಷುಕನಾ, ರೈತರನ್ನು ಈ ಮಟ್ಟಕ್ಕೆ ಇಳಿಸಿದ್ದೀರಲ್ಲಾ, ತಮ್ಮನ್ನು ತಾವು ರೈತನ ಮಗ ಎಂಬುದಾಗಿ ಹೇಳಿಕೊಳ್ಳುತ್ತಾರೆ ಈ ಮುಖ್ಯಮಂತ್ರಿ, ರೈತನ ಮಗನಾದರೆ ಈ ರೀತಿ ಮಾಡುತ್ತಾರಾ, ಯಾವ ರೈತ ಕೆಲಸ ಮಾಡಿದ್ದಾರೆ ನನಗೆ ಗೊತ್ತಿಲ್ಲ.
ಕೆಲವು ಶಾಸಕರು ಎರಡು ಮದುವೆಯಾಗಿದ್ದಾರೆ ಎಂಬ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸಿದ ಕುಮಾರಸ್ವಾಮಿ, ಸದನದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಮಾತನಾಡುತ್ತಾರಾ, ಇಂತಹ ಮುಖ್ಯಮಂತ್ರಿಯನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ದೇವರೇ ಕಾಪಾಡಬೇಕು, ಈ ಹೇಳಿಕೆ ಖಂಡಿಸಿ 224 ಶಾಸಕರೂ ಪ್ರತಿಭಟನೆ ಮಾಡಬೇಕಿತ್ತು, ಕಾಂಗ್ರೆಸ್ನವರೇ ಪ್ರತಿಭಟಿಸಬೇಕಿತ್ತು ಎಂದರು.
ಕೆಆರ್ಐಡಿಎಲ್ನ ಎಇಇ ನಾಪತ್ತೆ ಪ್ರಕರಣದಂತಹ ಘಟನೆ ಒಂದಲ್ಲ, ಇನ್ನು ಮುಂದೆ ಇಂತಹ ಘಟನೆಗಳು ಪ್ರತಿದಿನ ಪ್ರಾರಂಭವಾಗುತ್ತವೆ ಎಂದು ಎಚ್ಚರಿಸಿದರು.


