ಬೆಂಗಳೂರು:ಕುಮಾರಕೃಪಾ ಇಂದಿನಿಂದ ಮುಖ್ಯಮಂತ್ರಿ ಅವರ ಅಧಿಕೃತ ಸರ್ಕಾರಿ ನಿವಾಸವಾಗಲಿದ್ದು, ಈ ಕಟ್ಟಡಕ್ಕೆ ʼಗಂಗಾʼ ಎಂಬ ನಾಮಕರಣ ಮಾಡಲಾಗಿದೆ.
ಸರ್ಕಾರಿ ಅತಿಥಿ ಗೃಹದಲ್ಲಿ ಕುಮಾರಕೃಪಾವನ್ನು ಗಂಗಾ ಎಂದು ಮರುನಾಮಕಾರಣ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ತಮ್ಮ ಕುಟುಂಬದೊಂದಿಗೆ ಗೃಹಪ್ರವೇಶ ಪೂಜೆ ನಡೆಸಿದರು.
ʼಗಂಗಾʼ ನಾಮಕರಣ
ಪೂಜಾ ಕಾರ್ಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಕುಮಾರಕೃಪಾ ʼಗಂಗಾʼ ಇನ್ನು ಮುಂದೆ ಅಧಿಕೃತ ನಿವಾಸವಾಗಿರುತ್ತದೆ ಎಂದರು.
ಕುಮಾರಕೃಪಾ ಕಟ್ಟಡದ ಪರಂಪರೆ ಉಳಿಸಿಕೊಂಡು ಶೇ.10ರಷ್ಟು ಮರುವಿನ್ಯಾಸ ಮಾಡಲಾಗಿದೆ, ಕಾಮಗಾರಿಗೆ ಹೆಚ್ಚಿನ ಹಣ ಬಳಕೆ ಮಾಡಿಲ್ಲ, ಮೊದಲಿದ್ದ ಪೀಠೋಪಕರಣಗಳನ್ನೂ ಉಳಿಸಿಕೊಂಡು, ಜೊತೆಗೆ ನಮ್ಮ ಮನೆಯ ಕೆಲವು ಪೀಠೀಪಕರಣಗಳನ್ನು ಗಂಗಾ ನಿವಾಸದಲ್ಲಿ ಬಳಸಿಕೊಳಲಾಗುತ್ತಿದೆ ಎಂದು ಸ್ಪಷ್ಪಪಡಿಸಿದರು.
ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪಾ ಅತಿಥಿ ಗೃಹ ಉಪಯೋಗ ಆಗುತ್ತಿರಲಿಲ್ಲ, ಆದ್ದರಿಂದ ಇದನ್ನೇ ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ಪರಿವರ್ತಿಸಿ ಖಾಸಗಿ ಪೂಜೆ ನೆರವೇರಿಸಲಾಗಿದೆ.
ಎಲ್ಲರ ಭೇಟಿ ಮಾಡುವೆ
ಬರುವ ಗುರುವಾರ ರಾಜ್ಯದ 224 ಶಾಸಕರು, ರಾಜ್ಯದ ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಿ, ಈ ಮನೆಯಲ್ಲಿ ಎಲ್ಲರನ್ನು ಭೇಟಿ ಮಾಡುವೆ.
ಕೆಲವರು ಇದಕ್ಕೆ ಆಗಿರುವ ಖರ್ಚಿನ ಬಗ್ಗೆ ಪ್ರಶ್ನೆ ಮಾಡಬಹುದು, ಭದ್ರತೆ ಹಾಗೂ ರಸ್ತೆ ಸೌಕರ್ಯಕ್ಕೆ ಹೆಚ್ಚು ವೆಚ್ಚವಾಗಿದೆ, ಉಳಿದಂತೆ ಶೇ.90 ಪೀಠೋಪಕರಣಗಳು ನನ್ನ ಖಾಸಗಿಯಾಗಿವೆ, ಕಡಿಮೆ ಮೌಲ್ಯದ (60-80 ರೂ.) ಗ್ರಾನೈಟ್ ಕಲ್ಲನ್ನು ಬಳಸಲಾಗಿದೆ, ವೆಚ್ಚದ ಬಗ್ಗೆ ಟೀಕೆ ಮಾಡುತ್ತಾರೆ, ಕೆಲವರು ಆರ್ಟಿಐ ಹಾಕಿದ್ದಾರೆ, ಕೆಲವರು ಟೀಕೆ ಮಾಡುತ್ತಿದ್ದಾರೆ, ಅದು ಅವರ ಕರ್ತವ್ಯ, ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸುವೆ, ಬಂದು ನೋಡಲಿ ಎಂದರು.
ಕುಮಾರಕೃಪಾದಲ್ಲಿ ಶಾಸಕರು, ಅಧಿಕಾರಿಗಳ ಭೇಟಿ, ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು, ಸಾರ್ವಜನಿಕ ಭೇಟಿ ಕೃಷ್ಣಾದಲ್ಲಿ ಇದಕ್ಕಾಗಿ ಪ್ರತ್ಯೇಕ ಸಭಾಂಗಣ ನಿರ್ಮಿಸಲಾಗುತ್ತಿದೆ, ಇದಕ್ಕೆ ಇನ್ನೂ ಒಂದೆರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ.
ಯಾರೂ ಶಾಶ್ವತವಲ್ಲ
ನಾವು ಯಾರು ಇಲ್ಲಿ ಶಾಶ್ವತವಲ್ಲ, ರಾಜ್ಯದ ಮುಖ್ಯಮಂತ್ರಿ ಆದವರಿಗೆ ಇದು ಅನುಕೂಲವಾಗಲಿದೆ, ಕುಮಾರಕೃಪಾ ಅತಿಥಿ ಗೃಹ ಜಾಗ ಉಪಯೋಗವಾಗಲಿ ವ್ಯರ್ಥವಾಗುವುದು ಬೇಡ ಎಂಬ ಕಾರಣಕ್ಕೆ ಈ ತೀರ್ಮಾನ ಮಾಡಲಾಗಿದೆ.
ಮುಖ್ಯಮಂತ್ರಿ ಅವರ ಅಧಿಕೃತ ಸರ್ಕಾರಿ ನಿವಾಸ ಕಾವೇರಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರವುಗೊಳಿಸದ ಹಿನ್ನೆಲೆಯಲ್ಲಿ ಶಿವಕುಮಾರ್, ಕುಮಾರಕೃಪಾವನ್ನೇ ಸರ್ಕಾರಿ ನಿವಾಸವಾಗಿ ಪರಿವರ್ತಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಿಂದ ನೂತನ ʼಗಂಗಾʼ ನಿವಾಸಕ್ಕೆ ಅಶೋಕ ಹೋಟೆಲ್ ಹಿಂಭಾಗದಿಂದ ಪ್ರತ್ಯೇಕ ದಾರಿ ನಿರ್ಮಿಸಲಾಗಿದ್ದು, ಈ ಮಾರ್ಗವನ್ನು ಮುಖ್ಯಮಂತ್ರಿ ಹಾಗೂ ಅವರ ಸಚಿವಾಲಯ ಸಿಬ್ಬಂದಿ ಮಾತ್ರ ಬಳಸಬಹುದಾಗಿದೆ.


