ಬೆಂಗಳೂರು:ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಪ್ರಭಾವ ಕಡಿಮೆ ಆಯಿತೇ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.
ಸೋಮವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರಿಗೆ ನೀಡಲಾದ ಆಸನ ವ್ಯವಸ್ಥೆಯೇ ಈ ಎಲ್ಲಾ ಚರ್ಚೆಗೆ ಗ್ರಾಸ ಒದಗಿಸಿದೆ.
ಆರನೇ ಸಾಲಿನಲ್ಲಿ ಆಸನ
ಸಮಾರಂಭಕ್ಕೆ ಇಂಡಿಯಾ ಒಕ್ಕೂಟದ ಆಯ್ದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು, ಸಿದ್ದರಾಮಯ್ಯ ಅವರಿಗೆ ಆರನೇ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು.
ಮೊದಲ ಸಾಲಿನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಲೇಶ್ ಯಾದವ್, ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಎರಡನೇ ಸಾಲಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಬರ್ಟ್ ವಾದ್ರಾ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ ಸೇರಿದಂತೆ ಹಲವು ನಾಯಕರಿಗೆ ಆಸನ ಕಲ್ಪಿಸಲಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ
ನಂತರದ ಸಾಲುಗಳಲ್ಲಿ ವಿಶೇಷ ಆಹ್ವಾನಿತರಿಗೆ ಸ್ಥಾನಗಳನ್ನು ನೀಡಲಾಗಿತ್ತು, ಸಿದ್ದರಾಮಯ್ಯ ಅವರಿಗೂ ಇವರ ನಡುವೆ ಆಸನ ವ್ಯವಸ್ಥೆ ಕಲ್ಪಿಸಿದ್ದುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸ ಮಾಡಿದೆ.
ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದು ಕೇವಲ ಐದು ತಿಂಗಳಷ್ಟೇ ಕಳೆದಿದೆ, ಮುಖ್ಯಮಂತ್ರಿ ಆಗಿದ್ದಾಗ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಎಡ ಅಥವಾ ಬಲ ಭಾಗದಲ್ಲಿ ಆಸೀನರಾಗಿರುತ್ತಿದ್ದರು.
ಇದೀಗ ಅವರು ಹಿಂದಿನ ಸಾಲಿಗೆ ತಳ್ಳಲ್ಪಟ್ಟಿರುವುದು ಎಐಸಿಸಿ ನಾಯಕರ ದೃಷ್ಟಿಯಲ್ಲಿ ಕಡೆಗಾಣಿಸಲ್ಪಟ್ಟಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಅಸಮಾಧಾನ ತೋರ್ಪಡಿಸಿಕೊಳ್ಳಲಿಲ್ಲ
ಸಮಾರಂಭದಲ್ಲಿನ ತಮಗೆ ಕಲ್ಪಿಸಲಾದ ಆಸನ ವ್ಯವಸ್ಥೆ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಅಸಮಾಧಾನ ಇದ್ದರೂ, ಅವರು ಅದನ್ನು ತೋರ್ಪಡಿಸಿಕೊಳ್ಳಲಿಲ್ಲ.
ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ನಂತರ ಏರ್ಪಡಿಸಿದ್ದ ಚಹಾ ಕೂಟದಲ್ಲಿ ಹೆಸರಿಗೆ ಮಾತ್ರ (ನಾಮ್ ಕಾ ವಾಸ್ತೆ) ಎಂಬಂತೆ ಪಾಲ್ಗೊಂಡು ಏನನ್ನೂ ಸ್ವೀಕರಿಸದೆ, ಕರ್ನಾಟಕ ಭವನಕ್ಕೆ ಹಿಂತಿರುಗಿದರು.
ಈ ಎಲ್ಲ ಬೆಳವಣಿಗೆ ನಡುವೆ ದೆಹಲಿಯಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು, ಅದರಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದೇನೆ ಎಂದರು.
ಕರ್ನಾಟಕ ರಾಜಕೀಯಕ್ಕೆ ಸಂಬಂಧಿಸಿದ ಚರ್ಚೆ ಏನಾದರೂ ನಡೆಯಿತೇ ಎಂಬ ಪ್ರಶ್ನೆಗೆ ಅಂತಹ ಯಾವುದೇ ಮಾತುಕತೆ ಆಗಿಲ್ಲ ಎಂದಿಷ್ಟೇ ಉತ್ತರಿಸಿದರು.


