ಬೆಂಗಳೂರು:ಮುಂಬರುವ ವಿಧಾನಸಭಾ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗೆ ದೆಹಲಿ ವರಿಷ್ಠರು ಮುಂದಾಗಿದ್ದಾರೆ.
ಈ ಸಂಬಂಧ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಉದ್ದೇಶದಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ವರಿಷ್ಠರು ದೆಹಲಿಗೆ ಕರೆಸಿಕೊಂಡಿದ್ದಾರೆ.
ಪ್ರಮುಖರೊಂದಿಗೆ ಸಮಾಲೋಚನೆ
ರಾಜ್ಯ ಉಸ್ತುವಾರಿ ಹರೀಶ್ ಚಂದ್ರ ದ್ವಿವೇದಿ ಒಂದು ವಾರ ನಗರದಲ್ಲೇ ಬಿಡಾರ ಹೂಡಿ ಪಕ್ಷದ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪ್ರಮುಖರೊಂದಿಗೆ ಸಮಾಲೋಚಿಸಿ, ಸಂಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದರು.
ದ್ವಿವೇದಿ ನೀಡಿರುವ ವರದಿ ಆಧರಿಸಿ ವರಿಷ್ಠರು ರಾಜ್ಯ ನಾಯಕತ್ವದಲ್ಲಿ ಕೆಲವು ಬದಲಾವಣೆ ತೀರ್ಮಾನ ಕೈಗೊಳ್ಳಲಿದ್ದು, ಒಂದೆರಡು ದಿನದಲ್ಲೇ ಸ್ಪಷ್ಟ ಚಿತ್ರಣ ಹೊರಬೀಳಲಿದೆ.
ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ಅವಧಿ ನವೆಂಬರ್ ಮೂರನೇ ವಾರಕ್ಕೆ ಅಂತ್ಯಗೊಳ್ಳಲಿದ್ದು, ಅವರನ್ನೇ ಎರಡನೇ ಅವಧಿಗೆ ಮುಂದುವರಸುವರೇ ಅಥವಾ ಹೊಸಬರನ್ನು ಆ ಸ್ಥಾನಕ್ಕೆ ತರಬೇಕೇ ಎಂಬ ಕುರಿತು ನಿರ್ಧಾರವಾಗಲಿದೆ.
ಯಡಿಯೂರಪ್ಪ ಕಡೆಗಣನೆಗೆ ಧೈರ್ಯ ಇಲ್ಲ
ಕರ್ನಾಟಕದ ಬಿಜೆಪಿಯ ಕೆಲವು ಹಿರಿಯ ನಾಯಕರು ವಿಜಯೇಂದ್ರ ಬದಲಾವಣೆಗೆ ಒತ್ತಾಯ ತರುತ್ತಿದ್ದಾರೆ, ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿ ವಿಧಾನಸಭಾ ಚುನಾವಣೆ ಎದುರಿಸುವ ಧೈರ್ಯ ವರಿಷ್ಠರಿಗಿಲ್ಲ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಬಸವರಾಜ ಬೊಮ್ಮಾಯಿ ಅವರನ್ನು ಕೂರಿಸಿದ ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಇದನ್ನು ಮನಗಂಡ ವರಿಷ್ಠರು ವಿಜಯೇಂದ್ರ ಅವರನ್ನು ಪ್ರಮುಖ ಸ್ಥಾನದಲ್ಲಿ ಉಳಿಸಿಕೊಂಡೇ ರಾಜ್ಯ ಬಿಜೆಪಿಯನ್ನು ಬಲಿಷ್ಠಗೊಳಿಸಲು ಮುಂದಾಗಿದ್ದಾರೆ.
ಹೊಸ ಮುಖಗಳಿಗೆ ಅವಕಾಶ
ಪಕ್ಷ ಬಲಪಡಿಸುವಲ್ಲಿ ಬಿಜೆಪಿ ಪುನರ್ ರಚನೆ ವೇಳೆ ಕೆಲವರು ಅಧಿಕಾರ ಕಳೆದುಕೊಳ್ಳಲಿದ್ದು, ಹೊಸ ಮುಖಗಳಿಗೆ ಅವಕಾಶ ದೊರೆಯಲಿದೆ.
ವಿಧಾನಸಭೆಯ ಪ್ರತಿಪಕ್ಷ ನಾಯಕನ ಬದಲಾವಣೆ ಬಗ್ಗೆಯೂ ದೆಹಲಿಯ ಬಿಜೆಪಿ ಅಂಗಳದಲ್ಲಿ ಬಿರುಸಿನ ಚರ್ಚೆ ನಡೆದಿದ್ದು, ಯಾರು ಯಾವ ಸ್ಥಾನಕ್ಕೆ ಬರುತ್ತಾರೆ ಎಂಬ ಚಿತ್ರಣ ಒಂದೆರಡು ದಿನದಲ್ಲಿ ಹೊರಬೀಳಲಿದೆ.
ವಿಜಯೇಂದ್ರ ಅವರನ್ನು ಕೆಳಗಿಳಿಸಿ ಆ ಸ್ಥಾನ ಪಡೆಯುವ ರೇಸಿನಲ್ಲಿ ವಿ.ಸೋಮಣ್ಣ, ಸುನೀಲ್ ಕುಮಾರ್, ಮುರುಗೇಶ್ ನಿರಾಣಿ, ಮಹೇಶ್ ಟೆಂಗಿನಕಾಯಿ ಹೆಸರುಗಳು ಚಾಲ್ತಿಯಲ್ಲಿವೆ.


