ಮಾದಕ ವಸ್ತುಗಳು ಇಡೀ ಸಮಾಜವನ್ನೇ ನಾಶ ಮಾಡುತ್ತಿದೆ
ಬೆಂಗಳೂರು:ಮಾದಕ ದ್ರವ್ಯ ದಂಧೆಯಲ್ಲಿ ತೊಡಗುವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಾಬಸ್ಪೇಟೆಯಲ್ಲಿ ಮಾದಕ ವಸ್ತುಗಳ ನಾಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಜಾಬ್ನಲ್ಲಿ ಹೆಚ್ಚು ಯುವಜನರು ಮಾದಕ ವ್ಯಸನಕ್ಕೆ ಬಲಿಯಾಗಿದ್ದಾರೆ, ಮಾದಕವಸ್ತು ಬೆರೆಸಿದ ಚಾಕೋಲೆಟ್ ಮಾರುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬಂದಿವೆ, ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಡ್ರಗ್ಸ್ ವ್ಯಸನಕ್ಕೆ ಅಂಟಿಸುವುದು ದಂಧೆಕೋರರ ಉದ್ದೇಶವಿರಬಹುದು, ಇದಕ್ಕೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು, ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದರು.
ಡ್ರಗ್ಸ್ ದಂಧೆ ಜನ ಸಮುದಾಯದಲ್ಲಿ ಆತಂಕ ಮೂಡಿಸಿದೆ, ಮಾದಕ ವಸ್ತುಗಳು ಇಡೀ ಸಮಾಜವನ್ನು ನಾಶ ಮಾಡುತ್ತಿದೆ, ವಿಶೇಷವಾಗಿ ಯುವಜನರ ಜೀವನ ಹಾಳು ಮಾಡುತ್ತಿವೆ, ಒಳ್ಳೆಯ ಸಮಾಜ ನಿರ್ಮಾಣ ಮಾಡುವಲ್ಲಿ ದೊಡ್ಡ ಸವಾಲಾಗಿ ನಿಂತಿದೆ ಎಂದರು.
ವಿಶ್ವಕ್ಕೆ ಸವಾಲಾಗಿರುವ ಡ್ರಗ್ಸ್ ದಂಧೆ
ವಿಶ್ವಕ್ಕೆ ಸವಾಲಾಗಿರುವ ಡ್ರಗ್ಸ್ ದಂಧೆ ಹತ್ತಿಕ್ಕುವಲ್ಲಿ ಕೆಲವು ರಾಷ್ಟ್ರಗಳು ಸೋತು ಕೈಚೆಲ್ಲಿವೆ, ಹಾಲೆಂಡ್, ಸ್ವಿಟ್ಜರ್ಲೆಂಡ್ ಸೇರಿದಂತೆ ಇನ್ನು ಕೆಲವು ದೇಶಗಳು ಡ್ರಗ್ಸ್ ದಂಧೆಗೆ ಮಟ್ಟ ಹಾಕುವುದನ್ನು ನಿಲ್ಲಿಸಿ, ಸೋಲನ್ನು ಒಪ್ಪಿಕೊಂಡಿವೆ. ಇಂತಹ ದುಸ್ಥಿತಿ ನಮ್ಮ ದೇಶಕ್ಕೆ ಬರಬಾರದು, ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಯಾವುದೇ ಕಾರಣಕ್ಕೂ ಮಾದಕ ವಸ್ತುಗಳು ಯುವಜನರ ಕೈಗೆ ಸಿಗಬಾರದು, ಈಗಾಗಲೇ ಮಂಡ್ಯ, ಮೈಸೂರು, ಗದಗ ಜಿಲ್ಲೆಗಳು ಡ್ರಗ್ಸ್ ದಂಧೆ ನಿಯಂತ್ರಿಸುವಲ್ಲಿ ಮುಂದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸವಾಲಾಗಿ ಸ್ವೀಕರಿಸಿ ಜಿಲ್ಲಾ ಮಟ್ಟದಿಂದಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇದೊಂದು ಗಂಭೀರ ವಿಚಾರವಾಗಿದ್ದು. ಡ್ರಗ್ಸ್ ಸೇವಿಸುವರು ಮಾನಸಿಕ ತೊಂದರೆ ಜೊತೆಗೆ ಪ್ರಾಣವನ್ನೇ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾರೆ. ಇದನ್ನು ನಿರ್ಲಕ್ಷಿಸಿದರೆ ಸಮಾಜ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತದೆ. ವಿದೇಶದಿಂದ ಬರುವ ವಿದ್ಯಾರ್ಥಿಗಳು ಡ್ರಗ್ಸ್ ದಂಧೆಯಲ್ಲಿ ತೊಡಗುತ್ತಿದ್ದಾರೆ. ಆಫ್ರಿಕಾದವರು ಹೆಚ್ಚಾಗಿ ಅಕ್ರಮ ಚಟುವಟಿಕೆಯಲ್ಲಿ ತೊಡಗುತ್ತಿದ್ದು, ಇದನ್ನು ಮಟ್ಟ ಹಾಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಘೋಷಿಸಲಾಗಿದೆ. ಡ್ರಗ್ಸ್ ಪರೀಕ್ಷಿಸುವ ಕಿಟ್, ಪೊಲೀಸರಿಗೆ ವಿಶೇಷ ತರಬೇತಿ, ಕಾನೂನು ಭದ್ರಪಡಿಸುವ ಕೆಲಸ ಮಾಡಲಾಗುತ್ತಿದೆ. ಇಲಾಖೆಯ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಕಳೆದ ಒಂದು ವರ್ಷದ ಅಂಕಿ-ಅಂಶದಿಂದ ಗೊತ್ತಾಗುತ್ತದೆ. ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಬೇಕು ಎಂದರು.