ಬೆಂಗಳೂರು:ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿ ಮುಖ್ಯಮಂತ್ರಿ ಪದವಿಯನ್ನು ಡಿ.ಕೆ.ಶಿವಕುಮಾರ್ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಇಂತಹ ತಂತ್ರಗಾರಿಕೆಯಲ್ಲಿ ಪಳಗಿರುವ ಶಿವಕುಮಾರ್, ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು, ಇದೇ ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ ಕೀಳುಮಟ್ಟಕ್ಕೆ ಇಳಿಯುವುದಿಲ್ಲ
ಬಿಜೆಪಿ-ಜೆಡಿಎಸ್ ಪಕ್ಷದವರಾಗಲೀ ಅಥವಾ ನಾಯಕರಾಗಲೀ ಇಂತಹ ಕೀಳುಮಟ್ಟಕ್ಕೆ ಇಳಿಯುವುದಿಲ್ಲ, ರಾಜ್ಯದ ರಾಜಕೀಯ ಇತಿಹಾಸದಲ್ಲಿ ಈ ಎರಡು ಪಕ್ಷಗಳು ಇಂತಹ ಹೇಯ ಕೆಲಸ ಮಾಡಿರುವ ಕುರುಹು ಇದೆಯೇ ಎಂದು ಪ್ರಶ್ನಿಸಿದರು.
ಅಧಿಕಾರ ಹಂಚಿಕೆ ಸೂತ್ರದಂತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿ ತ್ಯಜಿಸಲು ನಿರಾಕರಿಸಿದ್ದರಿಂದ ಶಿವಕುಮಾರ್, ಆರು ತಿಂಗಳ ನಂತರ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದರು.
ಇದರ ಪ್ರತಿಫಲವಾಗಿ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ, ಅವರಿಗೆ ದೊರೆತ ಅಧಿಕಾರವನ್ನು ರಾಜ್ಯದ ಅಭಿವೃದ್ಧಿಗೆ ಬಳಸುವ ಬದಲು ಮತ್ತೆ ತಮ್ಮ ಅದೇ ಚಾಳಿ ಮುಂದುವರೆಸಿದ್ದಾರೆ ಎಂದರು.
ವರಿಷ್ಠರಿಗೆ ಸ್ಟಿಂಗ್ ಆಪರೇಷನ್ ವಿಡಿಯೊ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ವರಿಷ್ಠರಿಗೆ ಸ್ಟಿಂಗ್ ಆಪರೇಷನ್ ವಿಡಿಯೊ ಕೊಟ್ಟು ಅಧಿಕಾರ ಪಡೆದ ಶಿವಕುಮಾರ್, ಈಗ ಸಂಪುಟ ಸಭೆಯಲ್ಲಿ ಕೂತು, ನಮ್ಮಗಳ ಮೇಲೆ ಗೂಬೆ ಕೂರಿಸುತ್ತಿದ್ದಾರೆ.
ಸಂಪುಟದಲ್ಲಿ ಇಂತಹ ವಿಷಯಗಳನ್ನು ಯಾರಾದರು ಚರ್ಚಿಸುತ್ತಾರೆಯೇ, ʼನನಗೆ ಮಾಹಿತಿ ಬರುತ್ತಿದೆʼ ಎಂಬುದಾಗಿ ಹೇಳಿ, ಸಹೋದ್ಯೋಗಿಗಳನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಹೊರಟಿದ್ದಾರೆ.
ಮಾಜಿ ಸಚಿವ ಕೆ.ಎನ್.ರಾಜಣ್ಣ ಕಥೆ ಏನಾಯಿತು, ಇದನ್ನು ಯಾರು ಮಾಡಿಸಿದ್ದು, ಇನ್ನೂ 40 ಮಂದಿಯ ವಿರುದ್ಧದ ಸಿಡಿ ಪೆನ್‌ಡ್ರೈವ್ ಇವೆ ಎಂಬುದಾಗಿ ರಾಜಣ್ಣ ವಿಧಾನಸಭೆಯಲ್ಲೇ ಬಹಿರಂಗಪಡಿಸಿದ್ದು, ಯಾರ ವಿರುದ್ಧ ಮಿಸ್ಟರ್ ಶಿವಕುಮಾರ್.
ಎಚ್.ಡಿ.ರೇವಣ್ಣ ಮಗನದು
ಎಚ್.ಡಿ.ರೇವಣ್ಣ ಮಗನದು ಒಂದು ಹೆಣ್ಣು ಮಗಳನ್ನು ಕರೆಸಿಯೇ ಸಾಕಾಗಿದ್ದು ಎಂಬುದಾಗಿ ಹೇಳಿರುವುದು ಶಿವಕುಮಾರ್ ಅಲ್ಲವೇ.
ಈಗ ಕಾಂಗ್ರೆಸ್ ನಾಯಕರೊಬ್ಬರ ಮತ್ತೊಂದು ವಿಡಿಯೊ ಹರಿದಾಡುತ್ತಿದೆ, ಇದು ಹೊರಬರುವುದಕ್ಕೂ ಮುನ್ನ, ಆ ಪಕ್ಷದ ನಾಯಕರೊಬ್ಬರು, ನೇಪಾಳ ಮೂಲಕ ಸಿಡಿ ಬಿಡುತ್ತಿದ್ದಾರೆ ಎಂದು ಹೇಳಿದ್ದರು.
ಈಗ ಗೊತ್ತಾಯಿತಲ್ಲವೇ ಯಾವ ವಿಚಾರ ಎಂದು, ಅವರು ಮಾಡಿದ್ದನ್ನು ನಮ್ಮ ಮೇಲೆ ಹಾಕಲು ಸಂಪುಟ ಸಭೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಎಂದರು.
ಸ್ಟಿಂಗ್ ಹಿಂದೆ ಇರೋರು ಯಾರು
ಸಿದ್ದರಾಮಯ್ಯ ಅವರನ್ನು ಅಗೌರವದಿಂದ ಕಳುಹಿಸಲು ಏನೆಲ್ಲಾ ಮಾಡಿದ್ದಾರೆ ಅಂತ ಚರ್ಚೆ ನಡೆಯುತ್ತಾ ಇದೆ, ಸ್ಟಿಂಗ್ ಆಪರೇಷನ್ ಮಾಹಿತಿ ಕೊಟ್ಟು ರಾಜೀನಾಮೆ ಪಡೆದುಕೊಂಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ, ಆದರೆ, ಸ್ಟಿಂಗ್ ಆಪರೇಷನ್ ಹಿಂದೆ ಇರೋರು ಯಾರು ಎಂಬ ಚರ್ಚೆ ಆಗಬೇಕು.
ನಕಲಿ ಸಿಮ್ ಬಳಸಿ ಮುಖ್ಯಮಂತ್ರಿ ವಿರುದ್ಧ ಕುತಂತ್ರ ನಡೆಸಿದ್ದಾರೆ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆ ವಿಚಾರವನ್ನೂ ಎಸ್ಐಟಿ ಮೂಲಕ ತನಿಖೆ ಮಾಡಿಸಲಿ.
ಕುಮಾರಸ್ವಾಮಿ ಅಯೋಧ್ಯೆಗೆ ಹೋಗಿ ನೇಪಾಳದಲ್ಲಿ ನಕಲು ಮಾಡಿದ್ದಾರೆ ಎಂಬ ಬಗ್ಗೆಯೂ ತನಿಖೆ ಮಾಡಿಸಲಿ.
ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ವರ್ಸಸ್ ಕಾಂಗ್ರೆಸ್ ಎಂಬುದನ್ನು ಅರಗಿಸಿಕೊಳ್ಳಲಾರದೇ ಎಲ್ಲದಕ್ಕೂ ಕುಮಾರಸ್ವಾಮಿ ಮೇಲೆ ಹೇಳಿಕೆಗಳನ್ನು ಕೊಡುತ್ತಿದ್ದು, ಅದಕ್ಕೆಲ್ಲಾ ನಾನು ಉತ್ತರ ಕೊಡುವುದಿಲ್ಲ ಎಂದರು.


