ಆರ್ಥಿಕ ಇಲಾಖೆ ಸಲಹೆ ಆಧಾರದಲ್ಲಿ ತೀರ್ಮಾನ
ಬೆಂಗಳೂರು:ರಾಜ್ಯದ 7ನೇ ವೇತನ ಆಯೋಗವು ಸಲ್ಲಿಸಿರುವ ವರದಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಮೂಲವೇತನದ ಶೇಕಡ 27.5ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದ್ದು, ವರದಿ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ ರಾವ್ ಅಧ್ಯಕ್ಷತೆಯ ಏಳನೇ ವೇತನ ಆಯೋಗದ ವರದಿ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ವೇತನ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿತ್ತು, ಅವಧಿಯು ಮಾರ್ಚ್ 15ರಂದು ಮುಕ್ತಾಯಗೊಂಡಿದ್ದು, ನಿನ್ನೆ ತಾವು ಮೈಸೂರಿನಲ್ಲಿದ್ದ ಕಾರಣ ವರದಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ ಎಂದರು.
ಇಂದು ವರದಿ ಸ್ವೀಕರಿಸಲಾಗಿದೆ, ವರದಿಯಲ್ಲಿ ಕನಿಷ್ಠ ಮೂಲವೇತನವನ್ನು 17,000 ರೂ.ಗಳಿಂದ 27 ಸಾವಿರ ರೂ.ಗಳವರೆಗೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಇನ್ನೂ ಅನೇಕ ಶಿಫಾರಸುಗಳಿದ್ದು ವರದಿಯನ್ನು ಆರ್ಥಿಕ ಇಲಾಖೆಗೆ ನೀಡಲಾಗಿದೆ.
ಆರ್ಥಿಕ ಇಲಾಖೆ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ, ನೀಡುವ ಸಲಹೆಗಳ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.