ರೈತರ ಆಕ್ರೋಶಕ್ಕೆ ಅವಕಾಶ ಮಾಡಿಕೊಡಬೇಡಿ: ಮುಖ್ಯಮಂತ್ರಿ ಶಿವಕುಮಾರ್ ಸಲಹೆ
ಬೆಂಗಳೂರು:ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಆಕ್ರೋಶಕ್ಕೆ ಅವಕಾಶ ಮಾಡಿಕೊಡದೆ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ಮಾಡಿದ್ದಾರೆ.
ಕಬ್ಬು ಬೆಳಗಾರರ ಬೇಡಿಕೆ ಈಡೇರಿಕೆ ಉದ್ದೇಶದಿಂದ ರಾಜ್ಯದ ಸಕ್ಕರೆ ಕಂಪನಿ ಮಾಲೀಕರ ಜೊತೆ ಸುದೀರ್ಘ ಸಭೆ ನಡೆಸಿದ ಮುಖ್ಯಮಂತ್ರಿ, ರೈತರ ಸಂಕಷ್ಟಗಳಿಗೆ ಸ್ಪಂದಿಸದಿದ್ದರೆ, ಅವರ ಆಕ್ರೋಶಕ್ಕೆ ಗುರಿ ಆಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಒಬ್ಬರಿಗೊಬ್ಬರು ಸಹಕರಿಸಿ
ರಾಷ್ಟ್ರ ಮತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ನೀವು ಒಬ್ಬರಿಗೊಬ್ಬರು ಸಹಕರಿಸಿದರೆ, ಇಬ್ಬರಿಗೂ ಅನುಕೂಲವಾಗಲಿದೆ.
ರೈತರು ಹಾಗೂ ಕಾರ್ಖಾನೆ ಮಾಲೀಕರ ಸಮಸ್ಯೆಗಳನ್ನು ಆಲಿಸಿದ್ದೇವೆ, ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ಪ್ರಗತಿ ಬಗ್ಗೆಯೂ ಸಂಸದರು ತಿಳಿಸಿದ್ದಾರೆ, ಎಥನಾಲ್ ಮೊಲಾಸಿಸ್ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ, ನಮ್ಮ ರಾಜ್ಯದವರೇ ಕೇಂದ್ರ ಸಚಿವರಿರುವ ಕಾರಣ ಒತ್ತಡ ಹಾಕೋಣ, ಅವರಿಗೂ ಇಲ್ಲಿನ ಪರಿಸ್ಥಿತಿಯ ಅರಿವಿದೆ.
ಒಬ್ಬರ ಮೇಲೊಬ್ಬರು ಅರೋಪ-ಪ್ರತ್ಯಾರೋಪ ಮಾಡಿವುದರಲ್ಲಿ ಅರ್ಥವಿಲ್ಲ, ರೈತರೊಂದಿಗೆ ಚರ್ಚೆ ಮಾಡೋಣ, ಕೃಷಿಕರ ಬಗ್ಗೆ ಹೃದಯ ಶ್ರೀಮಂತಿಕೆ ತೋರಿ, ಇಬ್ಬರೂ ಸೇರಿ ಒಂದು ತೀರ್ಮಾಣಕ್ಕೆ ಬರೋಣ ಎಂಬ ಸಲಹೆ ನೀಡಿದರು.
ಹೊರೆಯಾದರೂ ತೀರ್ಮಾನ ಮಾಡಿ
ಕಾರ್ಖಾನೆ ಮಾಲೀಕರು ರೈತರನ್ನು ವಿಶ್ವಾಸಕ್ಕೆ ಪಡೆಯಬೇಕು, ಈ ಕಾರ್ಯದಲ್ಲಿ ಸಫಲರಾಗಿಲ್ಲ, ರೈತರ ಆಕ್ರೋಶಕ್ಕೆ ಅವಕಾಶ ನೀಡಬಾರದು, ಸಕ್ಕರೆ ಕಂಪನಿಗಳ ಮಾಲೀಕರಿಗೆ ಹೊರೆಯಾದರೂ ಒಂದು ಪರಿಹಾರಕ್ಕೆ ಬರುವ ತೀರ್ಮಾನ ಮಾಡಿ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರ ಕೂಗಿಗೆ ಗೌರವ ನೀಡಿ ಕೆಲವು ತೀರ್ಮಾನಗಳನ್ನು ಮಾಡಿತ್ತು, ಸರ್ಕಾರ ಸ್ವಲ್ಪ ಹಣ ನೀಡುವುದು, ಉಳಿದದ್ದನ್ನು ಸಕ್ಕರೆ ಕಾರ್ಖಾನೆ ಮಾಲೀಕರು ನೀಡುವುದು ಎಂಬ ತೀರ್ಮಾನ ಈ ಹಿಂದೆ ಆಗಿತ್ತು, ಶೇ.80ರಷ್ಟು ಕಾರ್ಖಾನೆಗಳು ಇದನ್ನು ಪಾಲಿಸಿವೆ, ಕೆಲವರು ಪಾಲಿಸದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ರೈತರು, ಸಕ್ಕರೆ ಕಾರ್ಖಾನೆ ಮಾಲೀಕರ ರಕ್ಷಣೆ ಜವಾಬ್ದಾರಿ ಸರ್ಕಾರಗಳ ಮೇಲಿದೆ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಕಬ್ಬು ಬೆಳಗಾರರ ಸಮಸ್ಯೆ ಇದೆ, ಕಳೆದ 10 ವರ್ಷಗಳಿಂದ ಸಕ್ಕರೆ ಬೆಲೆ ಏರಿಕೆ ಆಗಿಲ್ಲ.
ಕೇಂದ್ರ ಸಚಿವರೂ ಪ್ರಯತ್ನಿಸುತ್ತಿದ್ದಾರೆ
ಕೇಂದ್ರದಲ್ಲಿ ಇರುವ ಸಚಿವರು ನಮ್ಮ ರಾಜ್ಯದವರೇ ಆಗಿದ್ದು, ಸಮಸ್ಯೆ ಪರಿಹಾರಕ್ಕೆ ಅವರೂ ಪ್ರಯತ್ನ ಮಾಡುತ್ತಿದ್ದಾರೆ.
ರೈತರ ಬೇಡಿಕೆಗಳ ಕುರಿತು ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು ಕಿತ್ತೂರಿನಲ್ಲಿ ಭೇಟಿ ಮಾಡಿ ಅಹವಾಲು ಆಲಿಸಿದ್ದೇವೆ, ರೈತರಿಗೆ ನಷ್ಟ ಹೆಚ್ಚಾಗಿದೆ, ಪ್ರತಿ ಟನ್ ಕಬ್ಬಿಗೆ 6,000 ರೂ.ವರೆಗೂ ಬೆಲೆ ನಿಗದಿ ಮಾಡಿ ಪರಿಹಾರ ನೀಡಿ ಎಂದು ರೈತರು ಬೇಡಿಕೆ ಇಟ್ಟಿದ್ದಾರೆ.
ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಅನೇಕ ಸಮಸ್ಯೆಗಳಿವೆ, ಹಣಕಾಸು, ಬ್ಯಾಂಕ್, ಎಥನಾಲ್, ವಿದ್ಯುತ್ ಬೆಲೆ ಸೇರಿ ಅನೇಕ ವಿಚಾರಗಳಿವೆ, ನಾನೊಬ್ಬನೇ ತೀರ್ಮಾನ ಮಾಡಲು ಆಗುವುದಿಲ್ಲ, ಎಲ್ಲರ ಜತೆ ಚರ್ಚಿಸಲು ರೈತರ ಬಳಿ ಸಮಯ ಕೇಳಿದ್ದೆ.
ಸೌಹಾರ್ದತೆ ಮೂಲಕ ಪರಿಹಾರ
ಪರಿಹಾರ ನೀಡಬೇಕಿರುವುದು ಸಕ್ಕರೆ ಕಾರ್ಖಾನೆಗಳ ಮಾಲೀಕರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ, ಸಮಸ್ಯೆಗೆ ಸೌಹಾರ್ದತೆ ಮೂಲಕ ಪರಿಹಾರ ಕಂಡು ಹಿಡಿಯಬೇಕು.
ಇದು ರಾಜಕಾರಣ ಮಾಡುವ ಸಭೆಯಲ್ಲ, ಅದಕ್ಕೆ ಬೇರೆ ವೇದಿಕೆಗಳಿವೆ, ರಾಜ್ಯದಲ್ಲಿ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ.
ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ವಾರ್ಷಿಕ 20 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದು, ಈ ವರ್ಷ 32 ಸಾವಿರ ಕೋಟಿ ರೂ. ನೀಡಬೇಕಿದೆ, ಮಳೆ ಕೊರತೆ ಹಿನ್ನೆಲೆ ರೈತರು ಹೆಚ್ಚು ವಿದ್ಯುತ್ ಬಳಸುತ್ತಿದ್ದಾರೆ, ಕಬ್ಬು ಇಳುವರಿ ಕಡಿಮೆಯಾಗಿದೆ.
ಎಲ್ಲರ ರಕ್ಷಣೆ ಮಾಡಬೇಕಿದೆ
ನಾವು ಯಾರ ಪರವನ್ನೂ ವಹಿಸುತ್ತಿಲ್ಲ, ಕಾರ್ಖಾನೆ ಇಲ್ಲವಾದರೆ ರೈತರಿಗೆ ತೊಂದರೆ, ರೈತರಿಲ್ಲವಾದರೆ ಕಾರ್ಖಾನೆಗಳಿಗೆ ತೊಂದರೆ, ಎಲ್ಲರ ರಕ್ಷಣೆಯನ್ನೂ ಮಾಡಬೇಕಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದಾಗ, ಇದು ಕರ್ನಾಟಕದ ರೈತರ ವಿಚಾರ ಮಾತ್ರವಲ್ಲದೆ, ದೇಶದ ಕೃಷಿಕರ ವಿಷಯ, ರಾಷ್ಟ್ರ ಮಟ್ಟದಲ್ಲಿ ತೀರ್ಮಾನ ಮಾಡಬೇಕಿದೆ ಎಂದಿದ್ದಾರೆ.
ಸಕ್ಕರೆ ಉತ್ಪಾದನೆ ಕುಸಿದಿದೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳಿವೆ, ನಮಗೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಬದುಕು ಮುಖ್ಯ.
ಮಹಾರಾಷ್ಟ್ರ ಮುಖ್ಯಮಂತ್ರಿ ಅವರೊಂದಿಗೂ ಚರ್ಚಿಸಿದ್ದು, ಸಮಸ್ಯೆ ಪರಿಹರಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದರು.


