ಬೆಂಗಳೂರು:ಸಚಿವ ಡಿ.ಸುಧಾಕರ್ ನಿಧನದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಎನ್‌ಡಿಎ ಸರ್ವಸಮ್ಮತ ಅಭ್ಯರ್ಥಿಯಾಗಿ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ಕಣಕ್ಕಿಳಿಯಲಿದ್ದಾರೆ.
ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿರುವ ರಾಜಣ್ಣ ಅವರನ್ನು ಜೆಡಿಎಸ್ ಚಿನ್ಹೆಯಡಿ ಕಣಕ್ಕಿಳಿಸಲು ಎನ್‌ಡಿಎ ಮೈತ್ರಿಕೂಟದ ಎರಡೂ ಪಕ್ಷಗಳು ಸಮ್ಮತಿಸಿವೆ.
ಬಿಜೆಪಿ ವರಿಷ್ಠರ ತೀರ್ಮಾನ
ಕ್ಷೇತ್ರದಲ್ಲಿನ ಜಾತಿವಾರು ಲೆಕ್ಕಾಚಾರ ಆಧಾರವಾಗಿ ಇಟ್ಟುಕೊಂಡು ಬಿಜೆಪಿ ವರಿಷ್ಠರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ರಾಜಣ್ಣ ಅವರನ್ನು ಬಿಜೆಪಿ ಚಿನ್ಹೆಯಡಿ ಕಣಕ್ಕಿಳಿಸಿದರೆ ಕ್ಷೇತ್ರದಲ್ಲಿ ಪ್ರಬಲವಾಗಿರುವ ಕುಂಚಟಿಗ ಒಕ್ಕಲಿಗ ಮತಗಳು ಕಾಂಗ್ರೆಸ್ ಕಡೆ ವಾಲಬಹುದು ಎಂಬ ನೀರೀಕ್ಷೆಯಿಂದ ಈ ತೀರ್ಮಾನಕ್ಕೆ ಬರಲಾಗಿದೆ.
ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಿರುವುದರಿಂದ ಕಾಂಗ್ರೆಸ್‌ಗೆ ಮತ ಚಲಾಯಿಸೋಣ ಎಂಬ ಭಾವನೆ ಮೂಡಬಹುದು.
ಎನ್‌ಡಿಎ ಪರ ಮತ
ಜೆಡಿಎಸ್‌ನಿಂದ ಕಣಕ್ಕಿಳಿದರೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಒಕ್ಕಲಿಗ ಮತಗಳು ಎನ್‌ಡಿಎ ಕೂಟದ ಪರವಾಗಿ ಚಲಾಯಿತವಾಗಬಹುದು.
ಇದರೊಂದಿಗೆ ಒಕ್ಕಲಿಗ ಸಮುದಾಯದ ಜನಸಂಖ್ಯೆ ನಂತರ ಹೆಚ್ಚು ಮತಗಳಿರುವ ಕಾಡುಗೊಲ್ಲರು, ತಮ್ಮ ಸಮುದಾಯದ ನಾಯಕನಿಗೆ ಮತ ಚಲಾಯಿಸುವರೆಂಬ ಲೆಕ್ಕಾಚಾರದ ಮೇಲೆ ಬಿಜೆಪಿ ವರಿಷ್ಠರು ಈ ತೀರ್ಮಾನ ಕೈಗೊಂಡಿದ್ದಾರೆ.
ಇದರ ನಡುವೆ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಆಗಿ ನಿವೃತ್ತರಾಗಿರುವ ಸಣ್ಣ ಚಿತ್ತಯ್ಯ ಅವರನ್ನು ಅಭ್ಯರ್ಥಿ ಮಾಡೋಣ ಎಂಬುದಾಗಿ ಕುಮಾರಸ್ವಾಮಿ ಬಿಜೆಪಿ ನಾಯಕರ ಬಳಿ ಪ್ರಸ್ತಾಪ ಇಟ್ಟಿದ್ದಾರೆ.
ಸಣ್ಣ ಚಿತ್ತಯ್ಯ ಪ್ರಭಾವಿ ವ್ಯಕ್ತಿ
ಸಣ್ಣ ಚಿತ್ತಯ್ಯ ಸಹಾ ಕಾಡುಗೊಲ್ಲ ಸಮುದಾಯದವರಾಗಿದ್ದು, ಆ ಭಾಗದಲ್ಲಿ ಸಮುದಾಯದ ಪ್ರಭಾವೀ ವ್ಯಕ್ತಿ ಆಗಿದ್ದಾರೆ.
ಸಣ್ಣ ಚಿತ್ತಯ್ಯ ಅವರನ್ನು ಅಭ್ಯರ್ಥಿ ಮಾಡಲು ರಾಜ್ಯ ಬಿಜೆಪಿ ನಾಯಕರು ಒಮ್ಮತ ವ್ಯಕ್ತಪಡಿಸದೆ, ನಮ್ಮ ಪಕ್ಷದ ಕಾರ್ಯಕರ್ತರನ್ನೇ ಜೆಡಿಎಸ್ ಚಿನ್ನೆಯಡಿ ಕಣಕ್ಕಿಳಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿಧಾನಸಭಾ ಉಪಚುನಾವಣಾ ದಿನಾಂಕ ಪ್ರಕಟಗೊಂಡ ನಂತರ ಎನ್‌ಡಿಎ ಅಭ್ಯರ್ಥಿ ಹೆಸರು ಘೋಷಿಸಲಿದ್ದಾರೆ.


