ಬೆಂಗಳೂರು:ಮೈಸೂರಿನ ಮುಡಾದಲ್ಲಿ ನಡೆದ ನಿವೇಶನ ಹಂಚಿಕೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವುದರಿಂದ ಸತ್ಯ ಹೊರಬರಲಿದೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಆರ್.ಅಶೋಕ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಭೂಸ್ವಾಧೀನ ಮಾಡಿಕೊಂಡು ನಂತರ ಡಿನೋಟಿಫೈ ಮಾಡಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿತು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅರ್ಜಿ ಸಲ್ಲಿಸಿದಾಗ ಮುಡಾ ಅಧ್ಯಕ್ಷ ಮತ್ತು ಆಯುಕ್ತರು 50:50ರ ಅನುಪಾತದಲ್ಲಿ ನಿವೇಶನ ನೀಡಿದ್ದು, ಇದರಿಂದ ಮುಡಾಗೆ ನಷ್ಟವಾಗಿದೆ ಎಂದರು.
ನಿವೇಶನ ಅಕ್ರಮ ಹಂಚಿಕೆ
ನಿವೇಶನಗಳನ್ನು 50:50ರ ಅನುಪಾತದಲ್ಲಿ ಹಂಚಿಕೆ ಮಾಡುವುದಾದರೆ ಸರ್ಕಾರದ ಒಪ್ಪಿಗೆ ಪಡೆಯಬೇಕು, ಆದರೆ, ಅಕ್ರಮವಾಗಿ ಅವರೇ ಹಂಚಿಕೆ ಮಾಡಿಕೊಂಡಿದ್ದಾರೆ.
ಉದಾಹರಣೆಗೆ ದಾಸರಹಳ್ಳಿಯಲ್ಲಿ ಭೂಸ್ವಾಧೀನವಾದರೆ ಎಂ.ಜಿ.ರಸ್ತೆಯ ಜಮೀನು ಕೊಟ್ಟಂತಾಗಿದೆ, ಈ ಹಗರಣದ ತನಿಖೆಯನ್ನು ಸರ್ಕಾರದ ಸಂಸ್ಥೆಗೆ ನೀಡಿದರೆ ಮುಖ್ಯಮಂತ್ರಿ ಅವರನ್ನು ಆರೋಪಿ ಮಾಡಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಸಿಬಿಐ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದರು.
ಡಿನೋಟಿಫೈ ಭೂಮಿ ಬದಲಿಗೆ ಪ್ರತಿಷ್ಠಿತ ಸ್ಥಳದಲ್ಲಿ ಜಾಗ ನೀಡಲಾಗಿದೆ, ಡಿನೋಟಿಫೈ ಜಮೀನು ಅಭಿವೃದ್ಧಿ ಮಾಡಲಾಗಿದೆ ಎನ್ನುತ್ತಿದ್ದಾರೆ, ಆದರೆ, ಭೂ ಮಾಲೀಕರು ಏಕೆ ಸುಮ್ಮನಿದ್ದರು ಎಂಬ ಅನುಮಾನ ಬರುತ್ತದೆ.
ಸಾವಿರಾರು ಕೋಟಿ ರೂ. ನಷ್ಟ
ನಾನು, ಈ ಕುರಿತು ದಾಖಲೆಗಳನ್ನು ಕೇಳಿದ್ದರೂ ಏನೂ ಸಿಕ್ಕಿಲ್ಲ, ಇಂತಹ ವಹಿವಾಟುಗಳಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ, ಮೈಸೂರು ಜಿಲ್ಲಾಧಿಕಾರಿ ಹಲವಾರು ಬಾರಿ ಮುಡಾಗೆ ಪತ್ರ ಬರೆದು ಸ್ಪಷ್ಟನೆ ಕೇಳಿದ್ದಾರೆ, ಮುಡಾದಿಂದ ಉತ್ತರ ದೊರೆತಿಲ್ಲ, ಎಲ್ಲರೂ ಸೇರಿ ಗ್ಯಾಂಗ್ ಮಾಡಿಕೊಂಡಿದ್ದಾರೆ, ಇದರ ಹಿಂದೆ ದೊಡ್ಡ ಜಾಲವಿದೆ ಎಂದರು.
ಇದು ಬಿಜೆಪಿ ಕಾಲದಲ್ಲೇ ನಡೆದಿದ್ದು ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ, ಯಾರೇ ಆಗಿದ್ದರೂ ಅವರನ್ನು ಮೊದಲು ಬಂಧಿಸಬೇಕು, ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ, ಇದರಲ್ಲಿ ಬಿಜೆಪಿ ಸರ್ಕಾರದ ಯಾವುದೇ ಪಾತ್ರವಿಲ್ಲ, ಈ ನಿವೇಶನ ಮಂಜೂರಾತಿಯನ್ನು ಮೊದಲು ರದ್ದುಪಡಿಸಬೇಕು.
ನಿವೇಶನಕ್ಕಾಗಿ 86 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರೂ ಕಾಂಗ್ರೆಸ್ ನಾಯಕರಿಗೆ ಮಾತ್ರ ನಿವೇಶನಗಳು ಸಿಕ್ಕಿದೆ, ಸರ್ಕಾರದ ಆಸ್ತಿಗಳನ್ನು ಯಾರ್ಯಾರೋ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.