ಬೆಂಗಳೂರು:ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತೇವೆ, ಆಶಾ ಕಾರ್ಯಕರ್ತೆಯರ ಕಷ್ಟದ ಅರಿವಿದೆ, ಹೋರಾಟ ಹಿಂಪಡೆಯಿರಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ರಾಜಕಾರಣ ಮಾಡುವವರು ರಾಜಕಾರಣ ಮಾಡುತ್ತಾರೆ, ಎನ್ಡಿಎ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ, ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ, ಈ ಬಗ್ಗೆ ಧ್ವನಿ ಎತ್ತಿ ಕೇಂದ್ರದಿಂದ ಪರಿಹಾರ ಕೊಡಿಸಬೇಕು.
ಬಿಜೆಪಿ ಕೇಂದ್ರದಿಂದ ಹಣ ಕೊಡಿಸಲಿ
ಆಶಾ ಕಾರ್ಯಕರ್ತೆಯರ ಮೇಲೆ ಕನಿಕರ ಇದ್ದರೆ, ಬಿಜೆಪಿಯವರು ಕೇಂದ್ರದಿಂದ ಹಣ ಕೊಡಿಸುವ ಕೆಲಸ ಮಾಡಲಿ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ರಾಜ್ಯ ಬಿಜೆಪಿ ನಾಯಕರಿಗೆ ಮಾತನಾಡುವ ಹಕ್ಕಿಲ್ಲ, ಆಶಾ ಕಾರ್ಯಕರ್ತೆಯರ ಸಂಬಳವನ್ನು ಹೆಚ್ಚಳ ಮಾಡಿರುವುದು ನಾವು ಎಂದು ಪ್ರತಿಪಾದಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ನನ್ನ ಸಹೋದರಿಯರಿದ್ದಂತೆ, ನಮ್ಮ ಮೇಲೆ ನಮಗೆ ಭರವಸೆ ಇದೆ ಎಂಬುದಾಗಿ ಹಲವು ಆಶಾ ಕಾರ್ಯಕರ್ತೆಯರು ಸಂದೇಶ ಕಳುಸಿದ್ದಾರೆ, ಮತ್ತೆ ಕೆಲಸಕ್ಕೆ ಹೋಗಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಎಲ್ಲವನ್ನೂ ಬಹಿರಂಗ ಪಡಿಸಿ ಅವರ ಒಗ್ಗಟ್ಟು ಒಡೆಯುವುದಿಲ್ಲ, ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ದಿನೇಶ್ ಏನು ಹೇಳಿದ್ದರು ಎಂಬುದು ಗೊತ್ತಿದೆ, ನನಗೆ ಎಲ್ಲ ಅರಿವು ಇದೆ.
ಒತ್ತಡಕ್ಕೆ ಧರಣಿ ಕುಳಿತಿದ್ದಾರೆ
ಆಶಾ ಕಾರ್ಯಕರ್ತೆಯರು ಸೇವೆ ಮಾಡಲು ಬಂದವರು, ಹೋರಾಟ ಮಾಡಲು ಅಲ್ಲ, ಹೋರಾಟ ನಿಮ್ಮದಲ್ಲ, ಕೆಲವರ ಒತ್ತಡಕ್ಕೆ ಧರಣಿ ಕುಳಿತಿದ್ದಾರೆ, ಭರವಸೆ ಪತ್ರಕ್ಕೆ ಸಹಿ ಹಾಕಿ ಎನ್ನುವುದು ಸರಿಯಲ್ಲ ಎಂದರು.
ಈ ಮಧ್ಯೆ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸೋಮಶೇಖರ್ ಪ್ರತಿಕ್ರಿಯಿಸಿ, ಬೇಡಿಕೆ ಸಂಬಂಧ ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿದ್ದೇವೆ, ಹೋರಾಟ ದುರುಪಯೋಗಕ್ಕೆ ಆಸ್ಪದ ಕೊಟ್ಟಿಲ್ಲ, ಯಾವುದೇ ರಾಜಕೀಯ ಪಕ್ಷಕ್ಕೂ ನಾವು ವೇದಿಕೆ ನೀಡಿಲ್ಲ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟ ಮುಂದುವರಿಯಲಿದೆ ಎಂದರು.


