ಬೆಂಗಳೂರು:ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೆಲವು ತೊಡಕುಗಳನ್ನು ಸರಿಪಡಿಸುವಂತೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿಂದು ಗಡ್ಕರಿ ಅವರನ್ನು ಭೇಟಿ ಮಾಡಿದ ಮಂಡ್ಯ ಸಂಸದರೂ ಆಗಿರುವ ಕುಮಾರಸ್ವಾಮಿ, ಹೆದ್ದಾರಿ ನಿರ್ಮಾಣದ ನಂತರ ಕೆಲವು ಭಾಗಗಳಲ್ಲಿ ಉಂಟಾಗಿರುವ ಸಮಸ್ಯೆಗಳಿಂದ ಮಳೆ ಬಂದಾಗ ನೀರು ಸರಾಗವಾಗಿ ಹರಿದು ಹೋಗದೆ ವಾಹನ ಸಂಚಾರಕ್ಕೆ ತೀವ್ರ ತೊಡಕಾಗಿದೆ.
ರಸ್ತೆ ತಿರುವುಗಳಿಂದ ಸಮಸ್ಯೆ
ರಸ್ತೆಯ ಕೆಲವು ಭಾಗಗಳಲ್ಲಿನ ತಿರುವುಗಳಿಂದ ಸಮಸ್ಯೆ ಉಂಟಾಗಿದ್ದು, ಸರ್ವೀಸ್ ರಸ್ತೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವಂತೆ ಮತ್ತು ಹಳೆ ರಸ್ತೆಗಳನ್ನೂ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಂಡ್ಯ ನಗರದ ಹೊರವರ್ತುಲ ರಸ್ತೆ ಹಾಗೂ ಹಲಗೂರು-ಕೆಎಂ ದೊಡ್ಡಿ ರಸ್ತೆಯನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವಂತೆ ಕೋರಿದ್ದಾರೆ.
ಕರ್ನಾಟಕದಲ್ಲಿ ಬಾಕಿ ಇರುವ ಸಾರಿಗೆ ಹೆದ್ದಾರಿ ಯೋಜನೆಗಳನ್ನು ಶೀಘ್ರ ಕಾರ್ಯಗತಗೊಳಿಸುವುದು, ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡಿದ ಮನವಿಗೆ ಸ್ಥಳದಲ್ಲೇ ಸ್ಪಂದಿಸಿದ ಗಡ್ಕರಿ ಅವರು, ರಸ್ತೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಲ್ಲದೆ, ಬೆಂಗಳೂರು-ಚೆನ್ನೈ ನಡುವಿನ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ಡಿಸೆಂಬರ್ನಲ್ಲಿ ರಾಷ್ಟ್ರಕ್ಕೆ ಸಮಿರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.