ಬೆಂಗಳೂರು:ಪದೇ ಪದೇ ಕಿತ್ತುಹೋಗುತ್ತಿರುವ ನಗರದ ರಸ್ತೆಗಳ ಶಾಶ್ವತ ದುರಸ್ತಿಗೆ 1,800 ಕೋಟಿ ರೂ. ವೆಚ್ಚದಲ್ಲಿ 157 ಕಿ.ಮೀ. ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
“ಬ್ರ್ಯಾಂಡ್ ಬೆಂಗಳೂರು-ಸುಗಮ ಸಂಚಾರ ಬೆಂಗಳೂರು” ಪರಿಕಲ್ಪನೆಯಡಿ ನಗರದ ಚಾಮರಾಜಪೇಟೆ, ಗಾಂಧಿನಗರ, ಮಲ್ಲೇಶ್ವರ, ಮಹಾಲಕ್ಷ್ಮೀಪುರದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 19.67 ಕಿ.ಮೀ. ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಅವರು ಚಾಲನೆ ನೀಡಿದರು.
25 ವರ್ಷ ಬಾಳಿಕೆ
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬೀಳಬಾರದೆಂಬ ಉದ್ದೇಶದಿಂದ ವೈಟ್ ಟಾಪಿಂಗ್ ಮಾಡಲಾಗುತ್ತಿದೆ, ಈ ರಸ್ತೆಗಳು ಸುಮಾರು 25 ವರ್ಷ ಬಾಳಿಕೆ ಬರಲಿವೆ ಎಂದರು.
ನಗರದ ಮೂರ್ನಾಲ್ಕು ವಾರ್ಡ್ಗಳಲ್ಲಿ ಪ್ರತಿನಿತ್ಯ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು, ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು 200 ಕಿ.ಮೀ. ನಷ್ಟು ಹೊಸ ರಸ್ತೆ ನಿರ್ಮಾಣಕ್ಕೆ ತೀರ್ಮಾನಿಸಿದ್ದು, ಉನ್ನತ ಗುಣಮಟ್ಟಕ್ಕಾಗಿ ವೈಟ್ ಟಾಪಿಂಗ್ಗೆ ಸೂಚಿಸಲಾಗಿದೆ ಎಂದರು.