ಬೆಂಗಳೂರು:ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಹಗರಣವನ್ನು ಅಧಿಕಾರಿಗಳ ಮೇಲೆ ಎತ್ತಿ ಹಾಕುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಕೃತ್ಯಗಳಿಂದ ಸಿದ್ದರಾಮಯ್ಯ ಅವರ 40 ವರ್ಷಗಳ ಶುದ್ಧ ಹಸ್ತದ ರಾಜಕೀಯ ಮುಖವಾಡ ಕಳಚಿ ಬಿದ್ದಿದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಚ್ಚಿಹಾಕುವ ತೀರ್ಮಾನ ಕಾಂಗ್ರೆಸ್ ಮಾಡಿದೆ, ಸ್ವಯಂ ಕ್ಲೀನ್ಚಿಟ್ ಕೊಟ್ಟುಕೊಂಡಿರುವ ಸಿದ್ದರಾಮಯ್ಯ, ಎಲ್ಲ ತಪ್ಪನ್ನು ಅಧಿಕಾರಿಗಳ ಮೇಲೆ ಹಾಕಿದ್ದಾರೆ.
ಪ್ರಮುಖ ಹುದ್ದೆಯಲ್ಲಿ ತಪ್ಪು ಮಾಡಿದ ಅಧಿಕಾರಿ
ತಪ್ಪು ಅಧಿಕಾರಿಗಳಿಂದ ಆಗುವಾಗ ಮುಖ್ಯಮಂತ್ರಿ ಏನು ಮಾಡುತ್ತಿದ್ದರು, ತಪ್ಪೆಸಗಿದ ಅಧಿಕಾರಿ ಹಿಂದೆಯೂ ತಪ್ಪು ಮಾಡಿದ್ದರು ಎಂದಿರುವ ಸಿದ್ದರಾಮಯ್ಯ, ಅಂತಹ ಅಧಿಕಾರಿಯನ್ನು ಪ್ರಮುಖ ಹುದ್ದೆಯಲ್ಲಿ ಇರಲು ಏಕೆ ಬಿಟ್ಟಿದ್ದರು ಎಂದು ಪ್ರಶ್ನಿಸಿದರು.
ಜನರ ಹಣ ಕಳ್ಳ ಖಾತೆಗೆ ವರ್ಗಾಯಿಸಿದ್ದು ರಾಜ್ಯ ಸರ್ಕಾರ, ಇದರಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಪಾತ್ರ ಹೇಗೆ ಬರುತ್ತದೆ, ಬ್ಯಾಂಕ್ ಅಧಿಕಾರಿಗಳು ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದರು, ರಾಜ್ಯ ಸರ್ಕಾರ ಹಗರಣ ಮುಚ್ಚಿಹಾಕಲು ತನಿಖೆಯನ್ನು ಎಸ್ಐಟಿಗೆ ವಹಿಸಿದೆ.
ಸಿದ್ದರಾಮಯ್ಯ ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ, ಜೊತೆಗೆ, ಜಾತಿ ಬಗ್ಗೆ ಹೇಳಿದ್ದಾರೆ, ನಿರ್ದಿಷ್ಟ ಜಾತಿಯ ವಿರುದ್ಧ ಯಾವುದೇ ಆಪಾದನೆ ಮಾಡಬಾರದು ಎಂದು ಸಂವಿಧಾನದಲ್ಲೇ ತಿದ್ದುಪಡಿ ಮಾಡಲಿ, ಹಗರಣದಿಂದ ಬೆಚ್ಚಿ ಬಿದ್ದು ಹೀಗೆ ಮಾತಾಡುತ್ತಿದ್ದಾರೆ, 40ಕ್ಕೂ ಅಧಿಕ ದಾಖಲೆಗಳನ್ನು ನಾವು ಕೊಟ್ಟಿದ್ದು, ಈ ಬಗ್ಗೆ ಸ್ಪಷ್ಟೀಕರಣ ಕೊಡದೆ ಎಲ್ಲಕ್ಕೂ ಪದ್ಮನಾಭ ಕಾರಣ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ ಎಂದರು.
ನಾಗೇಂದ್ರ ರಾಜೀನಾಮೆ ಏಕೆ ಕೊಟ್ಟರು
ಸಚಿವರ ತಪ್ಪಿಲ್ಲ ಎಂದ ಮೇಲೆ ಬಿ.ನಾಗೇಂದ್ರ ರಾಜೀನಾಮೆ ಏಕೆ ಕೊಟ್ಟರು, ಸಚಿವರನ್ನು ಅರ್ಧ ದಾರಿಯಲ್ಲೇ ಕೈ ಬಿಟ್ಟಿದ್ದಾರೆ ಎಂದರ್ಥ, ಲೋಕಸಭೆ ಚುನಾವಣೆಗಾಗಿ ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ಶ್ರಮ ವಹಿಸಿ, ಕಾಂಗ್ರೆಸ್ ಪಕ್ಷಕ್ಕಾಗಿ ಹಣ ಸಂಗ್ರಹ ಮಾಡಿ ತೆಲಂಗಾಣಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದಲ್ಲಿ ಹಗರಣಗಳ ಸರಮಾಲೆಯೇ ನಡೆದಿದೆ ಎನ್ನುವವರು ಅಧಿಕಾರಕ್ಕೆ ಬಂದು 15 ತಿಂಗಳಾದರೂ 40 ಪರ್ಸೆಂಟ್ ಆರೋಪದ ತನಿಖೆ ಇನ್ನೂ ಏಕೆ ಮಾಡಿಸಿಲ್ಲ, ಹಿಂದಿನ ಸರ್ಕಾರ ಹಗರಣ ಮಾಡಿದ್ದರೆ ತನಿಖೆ ನಡೆಸಲು ಇಷ್ಟು ಸಮಯ ಬೇಕೆ.
ರಾಜ್ಯದ ಜನರಿಗಾಗಿ ಹಾಗೂ ದಲಿತರಿಗಾಗಿ ಬಿಜೆಪಿ ಹೋರಾಟ ಮಾಡುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು, ದಲಿತರ ಹಣ ವಾಪಸ್ ತರಲೇಬೇಕು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು ಎನ್ನುವುದು ನಮ್ಮ ಪಕ್ಷದ ಸ್ಪಷ್ಟ ಉದ್ದೇಶ.
ಅಧಿಕಾರದಿಂದ ಕೆಳಗಿಳಿಯಲಿ
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಮಾಡಿರುವ 21 ಹಗರಣಗಳ ಆರೋಪ ತನಿಖೆಯನ್ನು ನಾವೇ ಮಾಡಿಸುತ್ತೇವೆ, ಇದಕ್ಕೆ ಮೊದಲು ಅವರು ಅಧಿಕಾರದಿಂದ ಕೆಳಗಿಳಿಯಲಿ ಎಂದು ಸವಾಲು ಹಾಕಿದರು.
ಬ್ರ್ಯಾಂಡ್ ಬೆಂಗಳೂರು ಆಗಬೇಕೆಂದರೆ ಎಲ್ಲ ಕ್ಷೇತ್ರಗಳು ಅಭಿವೃದ್ಧಿಯಾಗಬೇಕು, ಬೆಂಗಳೂರಿನಲ್ಲಿ ಬಿಜೆಪಿ ಶಾಸಕರೇ ಹೆಚ್ಚಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲರ ಬಳಿ ಚರ್ಚೆ ಮಾಡಿ ಅನುದಾನ ನೀಡಲಿ.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಸರ್ಕಾರ ಅನುದಾನ ನೀಡಿತ್ತು, ಅದೇ ರೀತಿ ಕಾಂಗ್ರೆಸ್ ಸಹಾ ನಡೆದುಕೊಳ್ಳಲಿ, ನಗರದಲ್ಲಿ ಕಸದ ರಾಶಿ ಹೆಚ್ಚಿದ್ದು, ವಿಲೇವಾರಿ ಮಾಡಲು ಕೂಡಲೇ ಕ್ರಮ ವಹಿಸಲಿ ಎಂದು ಆಗ್ರಹಿಸಿದರು.