ಬೆಂಗಳೂರು:ಭಾರೀ ಮಳೆಯಿಂದಾಗಿ ಸಂಭವಿಸಿರುವ ಭೂಕುಸಿತದಿಂತ ತತ್ತರಿಸಿರುವ ಕೇರಳದ ಪ್ರವಾಹ ಪೀಡಿತ ವಯನಾಡು ಪ್ರದೇಶಕ್ಕೆ ಕರ್ನಾಟಕದಿಂದ ಅಗತ್ಯ ನೆರವು ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಸಂತೋಷ್ ಲಾಡ್ ಆ ರಾಜ್ಯಕ್ಕೆ ತೆರಳಿದ್ದಾರೆ.
ಪ್ರವಾಹ ಹಾಗೂ ಭೂಕುಸಿತ ದುರಂತದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಹಾಗೂ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳು, ಸಂತ್ರಸ್ಥರ ರಕ್ಷಣೆ ಸೇರಿದಂತೆ ಎಲ್ಲಾ ಅಗತ್ಯ ನೆರವು ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ತುರ್ತು ಕ್ರಮಗಳ ಭರವಸೆ
ಕೇರಳ ಸರ್ಕಾರದ ಜೊತೆ ಕೈಜೋಡಿಸಿ ಜನರ ಜೀವ, ಆರೋಗ್ಯ ರಕ್ಷಣೆಗೆ ನೆರವಾಗುವಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದರು.
ಪರಿಹಾರ ಕಾರ್ಯದಲ್ಲಿ ಕರ್ನಾಟಕ ಸರ್ಕಾರ ನಿಮ್ಮೊಂದಿಗೆ ಕೈ ಜೋಡಿಸಲಿದೆ, ಅಗತ್ಯ ನೆರವು ಒದಗಿಸಲು ಸಿದ್ಧವಾಗಿದೆ, ರಕ್ಷಣಾ ತಂಡಗಳು ಮತ್ತು ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಚಿವ ಸಂತೋಷ್ ಲಾಡ್ಗೆ ಸೂಚನೆ
ನಂತರ ಸಚಿವ ಸಂತೋಷ್ ಲಾಡ್ ಅವರಿಗೆ ದೂರವಾಣಿ ಕರೆ ಮಾಡಿದ ಮುಖ್ಯಮಂತ್ರಿ, ಕೂಡಲೇ ಕೇರಳಕ್ಕೆ ತೆರಳಿ ಅಲ್ಲಿನ ಸರ್ಕಾರದ ಸಹಕಾರದೊಂದಿಗೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಮುಖ್ಯಮಂತ್ರಿಗಳಿಂದ ಆದೇಶ ಬರುತ್ತಿದ್ದಂತೆ ಸಚಿವ ಸೋತೋಷ್ ಲಾಡ್ ಕೇರಳದ ಪ್ರವಾಹ ಪೀಡಿತ ವಯನಾಡಿಗೆ ತೆರಳಿದ್ದು, ಆ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶದಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.