ಬೆಂಗಳೂರು:ಪಿಎಸ್ಐ ನೇಮಕಾತಿ ಪರೀಕ್ಷೆ ನಿಗದಿಯಾಗಿರುವ ದಿನದಂದೇ (ಸೆಪ್ಟೆಂಬರ್ 22) ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆ ನಡೆಯುತ್ತಿದ್ದು, ದಿನಾಂಕ ಬದಲಾವಣೆ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದು ನಿರ್ಧರಿಸಲಾಗುವುದು ಎಂದು ಗೃಹ ಸಚಿವ ಡಾ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎಸ್ಸಿಗಿಂತ ಮೊದಲೇ ನಾವು ಪಿಎಸ್ಐ ಪರೀಕ್ಷಾ ದಿನಾಂಕ ಪ್ರಕಟಿಸಿದ್ದು, ಮುಂದೂಡುವ ಸಾಧ್ಯತೆ ಇದ್ದರೆ, ಹೆಚ್ಚಿನ ಮನವಿಗಳು ಬಂದಿದ್ದರೆ ಪರಿಗಣಿಸಬಹುದಾಗಿದೆ, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ನ್ಯಾಯಾಲಯದ ಮೊರೆ
ಈಗಾಗಲೇ ಪಿಎಸ್ಐ ನೇಮಕಾತಿ ಬಹಳ ವಿಳಂಬವಾಗಿದೆ, ಈ ಹಿಂದೆ ಗೃಹ ಸಚಿವನಾಗಿದ್ದಾಗ ಯಾವುದೇ ಅಡೆತಡೆಗಳಿಲ್ಲದೇ ಸಾವಿರಾರು ಹುದ್ದೆಗಳ ನೇಮಕಾತಿ ಸರಳವಾಗಿ ನಡೆದಿದೆ, ಪಿಎಸ್ಐ ಹಗರಣದ ಬಳಿಕ ವಿಳಂಬವಾಗುತ್ತಿದೆ, ಫಲಿತಾಂಶ ಪ್ರಕಟಿಸುವಂತೆಯೂ ಕೋರಿ ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ, ಫಲಿತಾಂಶ ಪ್ರಕಟಿಸುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ,ಮಾಜಿ ಸಚಿವರಾದ ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧದ ಅಕ್ರಮ ಕುರಿತು ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿ ವರ್ಷ ಕಳೆದರೂ ಅವಕಾಶ ಕೊಟ್ಟಿಲ್ಲ ಎಂಬುದನ್ನು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದ ಮುಂದೆ ಪ್ರಸ್ತಾಪ ಮಂಡಿಸಿದ್ದಾರೆ.
ಪ್ರಾಸಿಕ್ಯೂಷನ್ ಅನುಮತಿ ಕುರಿತು ರಾಜ್ಯಪಾಲರು ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂಬ ಅಂಶವನ್ನು ಕೋರ್ಟ್ ಗಮನಕ್ಕೆ ತಂದಿದ್ದಾರೆ, ರಾಷ್ಟ್ರಪತಿ ಭೇಟಿ ಸಂದರ್ಭದಲ್ಲೂ ವಿಚಾರ ಪ್ರಸ್ತಾಪಿಸಲಾಗುವುದು ಎಂದರು.