ಬೆಂಗಳೂರು:ಬಾಯಿ ಬಿಟ್ಟರೆ ಸಂಸ್ಕಾರ, ಸಂಸ್ಕೃತಿ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಮೊದಲು ನಿಮ್ಮ ಶಾಸಕ ಮುನಿರತ್ನ ಅವರ ಕೆಟ್ಟುಹೋಗಿರುವ ಬಾಯಿಯನ್ನು ಶುದ್ಧ ಮಾಡಿ ನಂತರ ಊರಿಗೆ ಬುದ್ಧಿ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಬಿಜೆಪಿಯವರ ಹಿಂದೂ ನಾವೆಲ್ಲ ಒಂದು ಎಂಬ ಘೋಷವಾಕ್ಯ ಬರೀ ಚುನಾವಣಾ ಕಾಲಕ್ಕಷ್ಟೇ ಸೀಮಿತ, ಚುನಾವಣೆ ಮುಗಿದರೆ ಈ ನಾಡಿನ ದಲಿತರು, ಶೋಷಿತರನ್ನು ಅವರು ಹಿಂದೂವಾಗಿ, ತಮ್ಮಲ್ಲಿ ಒಬ್ಬನಾಗಿ ಕಾಣುವುದಿಲ್ಲ, ಈ ಸಮುದಾಯಗಳ ಬಗ್ಗೆ ಬಿಜೆಪಿ ನಾಯಕರ ಮನಸ್ಸಿನಲ್ಲಿ ತುಂಬಿರುವ ದ್ವೇಷ, ಅಸೂಯೆ, ಅಸಹನೆಗೆ ಮುನಿರತ್ನ ಬಾಯಿಂದ ಉದುರಿದ ಅಣಿಮುತ್ತುಗಳೇ ಸಾಕ್ಷಿ ಎಂದಿದ್ದಾರೆ.
ವೈರಲ್ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋಇಚ್ಛೆ ನಿಂದಿಸಿದ್ದಾರೆ, ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ, ಇವೆಲ್ಲವೂ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ.
ಅಲ್ಲಿಗೆ ಖಂಡಿತಾ ತಲುಪಿಸುತ್ತೇವೆ
40% ಕಮಿಷನ್ ಸರ್ಕಾರ ತೊಲಗಿದರೂ ಅದರಿಂದ ಹುಟ್ಟಿರುವ ರಕ್ತಬೀಜಾಸುರರು ಉಳಿದಿದ್ದಾರೆ, ಈಗ ನಾವು ಕೈಗೆತ್ತಿಕೊಂಡಿರುವ ಸ್ವಚ್ಛತಾ ಅಭಿಯಾನದಲ್ಲಿ ಈ ಹೊಲಸನ್ನು ಎಲ್ಲಿ ಇಡಬೇಕು ಅಲ್ಲಿಗೆ ಖಂಡಿತಾ ತಲುಪಿಸುತ್ತೇವೆ.
ಮಾಧ್ಯಮಗಳ ಮುಂದೆ ನಿಂತು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಉಪದೇಶ ಕೊಡುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ತಮ್ಮದೇ ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ಎದುರು ನಿಂತು ಮಾತನಾಡುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಈಗ ಬಿಜೆಪಿ ನಾಯಕರಿಗೆ ಉಳಿದಿರುವುದು ಎರಡೇ ದಾರಿ, ಒಂದು ಮುನಿರತ್ನ ಅವರ ಹೇಳಿಕೆಗೆ ಬೆಂಬಲ ಕೊಟ್ಟು ತಾವು ದಲಿತ ವಿರೋಧಿಗಳು ಎಂದು ಒಪ್ಪಿಕೊಳ್ಳುವುದು, ಇಲ್ಲವೇ, ನಾಡಿನ ದಲಿತ ಸಮುದಾಯದವರ ಬಳಿ ಬಹಿರಂಗ ಕ್ಷಮೆ ಕೇಳಿ, ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬುವುದು ಎಂದು ಖಾರವಾಗಿ ನುಡಿದಿದ್ದಾರೆ.