ಬೆಂಗಳೂರು:ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿಯನ್ನು ಮುಗಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಗುರುತರ ಆರೋಪ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, ರಾಹುಲ್ ಅವರನ್ನು ರಾಜಕೀಯವಾಗಿಯೂ ಮುಗಿಸುವ ಜೊತೆಗೆ ಪ್ರಾಣಭಯ ಹುಟ್ಟಿಸುವ ಬಿಜೆಪಿ ಷಡ್ಯಂತ್ರ ಆತಂಕಕಾರಿಯಾದುದು ಎಂದಿದ್ದಾರೆ.
ಕ್ರಿಮಿನಲ್ ಪ್ರಕರಣ ದಾಖಲಿಸಿ
ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಹಾಕಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ತ್ಯಾಗ, ಬಲಿದಾನ, ಹುತಾತ್ಮರ ಕುಟುಂಬದಿಂದ ಬಂದ ರಾಹುಲ್ ಅವರು ಇದಕ್ಕೆಲ್ಲಾ ಹೆದರುವುದಿಲ್ಲ.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ, ಇಂತಹ ಉನ್ನತ ತ್ಯಾಗ, ಬಲಿದಾನದ ಕುಟುಂಬದಿಂದ ಬಂದ ರಾಹುಲ್ ಅವರು ದೇಶಕ್ಕಾಗಿ ಅವಿರತ ಹೋರಾಟ ನಡೆಸುತ್ತಿದ್ದಾರೆ.
ರೈಲ್ವೆ ಖಾತೆ ರಾಜ್ಯ ಸಚಿವರ ಬೆದರಿಕೆ
ಅಜ್ಜಿ ಇಂದಿರಾ ಗಾಂಧಿ ಅವರಿಗಾದ ಗತಿಯೇ ನಿಮಗೂ ಆಗುತ್ತದೆ ಎಂದು ರಾಹುಲ್ ಅವರಿಗೆ ಬಿಜೆಪಿ ಬೆದರಿಕೆ ಹಾಕಿದೆ, ಅಷ್ಟೇ ಅಲ್ಲ, ರೈಲ್ವೆ ಖಾತೆ ರಾಜ್ಯ ಸಚಿವರು ರಾಹುಲ್ ಅವರಿಗೆ ಬೆದರಿಕೆ ಹಾಕಿದ್ದಾರೆ.
ಈ ರೀತಿ ಜೀವ ಬೆದರಿಕೆಗಳ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆಯುತ್ತಿದೆ.
ರಾಹುಲ್ ಗಾಂಧಿ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ ಕೊಡುವುದಾಗಿ ಶಿವಸೇನೆಯ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್ ಅವರು ರಾಹುಲ್ ಗಾಂಧಿ ನಾಲಗೆ ಕತ್ತರಿಸಲು ಕರೆ ನೀಡಿದ್ದಾರೆ, ಇದೂ ಕೂಡ ಕೊಲೆ ಬೆದರಿಕೆಯೇ ಆಗಿದೆ.
ಸಂಜಯ್ ಗಾಯಕ್ವಾಡ್ರನ್ನು ಜೈಲಿಗೆ ಹಾಕಿ
ಆದ್ದರಿಂದ ಈ ಕೂಡಲೇ ಸಂಜಯ್ ಗಾಯಕ್ವಾಡ್ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ಹಾಕಬೇಕೆಂದು ಮುಖ್ಯಮಂತ್ರಿ ಆಗ್ರಹಿಸಿದರು.
ಉತ್ತರ ಪ್ರದೇಶದ ಸಚಿವರೊಬ್ಬರು ರಾಹುಲ್ ಗಾಂಧಿ ಈ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದಾರೆ, ಆದರೆ ಇವತ್ತಿನವರೆಗೂ ಬಿಜೆಪಿ ಪಕ್ಷವಾಗಲಿ, ಬಿಜೆಪಿ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಕಠಿಣ ಕ್ರಮ ತೆಗೆದುಕೊಂಡಿಲ್ಲ, ಕಾಟಾಚಾರಕ್ಕೆ ಕೇಸು ದಾಖಲಿಸಿ ಕೈ ಚೆಲ್ಲಿದ್ದಾರೆ.
ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಹೂತು ಹಾಕುವುದಾಗಿ ಸಂಜಯ್ ಗಾಯಕ್ವಾಡ್ ಮತ್ತೆ ಬೆದರಿಕೆ ಹಾಕಿದ್ದಾರೆ ಎಂದರು.
ಮೋದಿ ಐದು ವರ್ಷ ಪೂರೈಸಲ್ಲ
ನರೇಂದ್ರ ಮೋದಿ ಈ ಬಾರಿ ಐದು ವರ್ಷ ಪೂರೈಸಲ್ಲ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.
ದೇಶದಲ್ಲಿ ಆಗುತ್ತಿರುವ ರಾಜಕಾರಣದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೋದಿ ಅವರು ಈ ಬಾರಿ ಪೂರ್ಣಾವಧಿ ಮುಗಿಸೋದು ಡೌಟು, ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಹೆಚ್ಚು ದಿನ ಕೇಂದ್ರ ಸರ್ಕಾರದ ಜೊತೆ ಇರುವುದಿಲ್ಲ ಎನ್ನಿಸುತ್ತಿದೆ ಎಂದರು.