ಹುಬ್ಬಳ್ಳಿ:ಕರ್ನಾಟಕದಲ್ಲಿ ಕೀಳುಮಟ್ಟದ ರಾಜಕಾರಣ ನಡೆಯುತ್ತಿದೆ, ಹಿರಿಯ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷಗಳ ದಮನಕ್ಕೆ ಸುಳ್ಳು ಮೊಕದ್ದಮೆ ಹಾಕಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸ್ವಜನ ಪಕ್ಷಪಾತದ ರಾಜಕೀಯ ನಡೆಯುತ್ತಿದೆ, ಅಧಿಕಾರಿಗಳಿಂದ ಕೀಳುಮಟ್ಟದ ಮಾತುಗಳು ಕೇಳಿಬರುತ್ತಿವೆ, ಇಂತಹ ಕೆಳಮಟ್ಟದ ರಾಜಕೀಯ ಹಿಂದೆಂದೂ ನಡೆದಿರಲಿಲ್ಲ ಎಂದರು.
ಬಹಳ ದಿನ ನಡೆಯದು
ತಮ್ಮ ಮೇಲೆ ಆರೋಪದ ಕಪ್ಪು ಚುಕ್ಕೆ ಬಂದರೆ, ಎಲ್ಲರಿಗೂ ಮಸಿ ಬಳಿಯುವ ಪ್ರಯತ್ನ ಆಗುತ್ತಿದೆ, ಇದು ಬಹಳಷ್ಟು ದಿನ ನಡೆಯುವುದಿಲ್ಲ, ಅಂತಿಮವಾಗಿ ಕಾನೂನು ತನ್ನ ಕೆಲಸ ಮಾಡುತ್ತದೆ.
ಮುಖ್ಯಮಂತ್ರಿ ಆಗಲು ಕೆಲವರು ಹಣ ಇಟ್ಟುಕೊಂಡು ಕಾಯುತ್ತಿದ್ದಾರೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಅವರನ್ನೇ ಕೇಳಬೇಕು, ನನಗೆ ಯಾವುದೇ ಮಾಹಿತಿ ಇಲ್ಲ, ಅವರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ, ಮುಡಾ ಹಗರಣದಲ್ಲಿ ಏನು ಆಗುತ್ತದೆ ಕಾದು ನೋಡೋಣ ಎಂದರು.