ನವದೆಹಲಿ:ಮುಖ್ಯಮಂತ್ರಿ ಸಿದ್ದರಾಮಯ್ಯ 14 ನಿವೇಶನಗಳನ್ನು ವಾಪಸ್ ಮಾಡಿರುವುದು ಕಳ್ಳತನ ಮಾಡಿ ಆಮೇಲೆ ತಪ್ಪಾಯಿತು ಎಂದು ಹೇಳಿದ ಹಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅವರ ಧರ್ಮಪತ್ನಿ ನನಗೂ ಸಹೋದರಿ ಸಮಾನ, ಅವರ ಬಗ್ಗೆ ಗೌರವ ಇಟ್ಟಿಕೊಂಡೇ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.
ಇವರೇನು ಯೂ-ಟರ್ನಾ
ಸಿದ್ದರಾಮಯ್ಯ ನನ್ನ ಬಗ್ಗೆ ಯಾವಾಗಲೂ ಹಿಟ್ ಅಂಡ್ ರನ್ ಎನ್ನುತ್ತಾರೆ, ಈಗ ಇವರೇನು, ಯೂ-ಟರ್ನಾ, ನಿವೇಶನ ವಾಪಸ್ ಕೊಡುವ ತರಾತುರಿ ನಿರ್ಧಾರ ಯಾರು ಹೇಳಿಕೊಟ್ಟಿದ್ದು.
ಸೋಮವಾರ ರಾತ್ರಿ ಏಕಾಏಕಿ ಪತ್ರ ಬರೆದು ನಿವೇಶನಗಳು ಬೇಡ, ವಾಪಸ್ ಮಾಡುತ್ತಿದ್ದೇನೆ ಎಂದಿದ್ದಾರೆ, ಮನೆ, ಚಿನ್ನ, ಒಡೆವೆ ಯಾವುದರ ಮೇಲೆಯೂ ಮಮತೆ ಇಲ್ಲ, ನನ್ನ ಪತಿಯ ಮುಂದೆ ಅದೆಲ್ಲ ತೃಣಕ್ಕೆ ಸಮಾನ ಎಂದು ಹೇಳಿಕೊಂಡಿದ್ದಾರೆ.
ನಾನು ಆ ಹೆಣ್ಣಮಗಳ ಬಗ್ಗೆ ಮಾತನಾಡಲ್ಲ, ಆದರೆ ಅದೇನೋ ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿದ್ದಾರಂತೆ ಸಿದ್ದರಾಮಯ್ಯ ಅವರು.
ಸುಳ್ಳು ಎಲ್ಲಿ ಹುಟ್ಟಿದೆ
ಆ ಹೆಣ್ಣು ಮಗಳು ತಮ್ಮ ಪತಿಯ ಗಮನಕ್ಕೆ ಬಾರದೆಯೇ ನಿವೇಶನಗಳನ್ನು ವಾಪಸ್ ಕೊಟ್ಟಿದ್ದಾರಾ, ವಿನಾಕಾರಣ ನನ್ನನ್ನು ಸುಳ್ಳುಗಾರ ಎನ್ನುತ್ತಾರೆ, ಇವರ ಇಂದಿನ ಮಾತು ಕೇಳಿಸಿಕೊಂಡರೆ ಸುಳ್ಳು ಎಲ್ಲಿ ಹುಟ್ಟಿದೆ ಎನ್ನುವುದು ಗೊತ್ತಾಗುತ್ತದೆ.
ಮುಡಾ ಹಗರಣ ಮಾತ್ರ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಹಲವಾರು ಅಕ್ರಮಗಳನ್ನು ಎಸಗಿದ್ದಾರೆ, ಈ ಹಿಂದೆ ಏನೆಲ್ಲ ಮಾಡಿದ್ದಾರೆ, ವೈಟ್ನರ್ ಹಾಕಿ ಎಲ್ಲ ಮುಗಿದೊಯ್ತು ಎಂದುಕೊಂಡಿದ್ದರು.
ಮುಡಾದ 14 ಸೈಟ್ ಕಥೆ ಒಂದು ಕಡೆಯಾದರೆ, ಇದಕ್ಕಿಂತ ಹಳೆ ಕೇಸ್ ಒಂದಿದೆ, ಆ ಪ್ರಕರಣ ಕುತ್ತಿಗೆಗೆ ಬಂದಾಗ ಒಂದು ಕೋಟಿ ರೂ.ಗೆ ನಿವೇಶನ ಮಾರಾಟ ಮಾಡಿಕೊಂಡರು, ಆದರೆ, ಚುನಾವಣಾ ಸಾಲಕ್ಕಾಗಿ ಮಾರಾಟ ಮಾಡಲಾಯಿತು ಎಂದು ಕಥೆ ಕಟ್ಟಿದ್ದರು, ಆ ನಿವೇಶನ ಎಲ್ಲಿಂದ ಬಂದಿತ್ತು, ಸ್ವಲ್ಪ ಹೇಳುವಿರಾ ಎಂದು ಕೆಣಕಿದರು.
14 ಸೈಟ್ಗಿಂತ ದೊಡ್ಡ ಹಗರಣ
ಬಡವರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕಾಗಿ ಭೂಮಿಯನ್ನು ಡಿ-ನೋಟಿಫಿಕೇಷನ್ ಮಾಡಿಸಿಕೊಂಡು, ಅದನ್ನು ಸಿದ್ದರಾಮಯ್ಯ ಪಡೆದುಕೊಂಡಿದ್ದಾರೆ, ಈ ಪ್ರಕರಣದಲ್ಲೂ ಸಿದ್ದರಾಮಯ್ಯ ಮೊದಲ ಆರೋಪಿ, ಒಟ್ಟು 18 ಆರೋಪಿಗಳಿದ್ದಾರೆ, ನ್ಯಾಯಾಲಯದಿಂದ ಸಿದ್ದರಾಮಯ್ಯ ವಿರುದ್ಧ ತೀರ್ಪು ಬಂದಿದೆ, ಅದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿ ರಿಲೀಫ್ ಪಡೆದುಕೊಂಡರು, ಇದು 14 ಸೈಟ್ಗಿಂತ ದೊಡ್ಡ ಹಗರಣ.
ಊರಿಗೆ ಬುದ್ಧಿ ಹೇಳೊರು ಈ ಪ್ರಕರಣದಲ್ಲ್ಲಿ ಏನೇನು ಮಾಡಿದ್ದಿರಿ ಎಂಬ ಸತ್ಯ ಹೇಳಿ, ಈಗ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ, ಇದರ ಜೊತೆಗೆ ಇನ್ನು ಎರಡು ಪ್ರಕರಣಗಳಿವೆ ಎಂದು ಕುಮಾರಸ್ವಾಮಿ ವಿವರಿಸಿದರು.
ಸಚಿವ ಕೃಷ್ಣಬೈರೇಗೌಡರೇ, ನೀವು ಮೇಧಾವಿಯಲ್ಲವೇ, ಇವನ್ನೆಲ್ಲಾ ಒಮ್ಮೆ ಪರಿಶೀಲನೆ ಮಾಡಪ್ಪ, ನಾನು ಇಂತಹ ಕೆಲಸ ಮಾಡಿಲ್ಲ.
ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯುವುದು ಎಂದರೆ ಇದೇ, ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮನ್ನು ಮುಗಿಸಲು ಹೊರಟರು ಎಂದು ಕುಮಾರಸ್ವಾಮಿ ಕಿಡಿಕಾರಿದರು.