ಬೆಂಗಳೂರು:ಬಡ ರೈತರ ಜಮೀನುಗಳನ್ನು ಕಬಳಿಸಲು ವಕ್ಫ್ ಬೋರ್ಡ್ನಿಂದ ಲ್ಯಾಂಡ್ ಜಿಹಾದ್ ಪ್ರಯತ್ನ ನಡೆಯುತ್ತಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಸ್ಪಷ್ಟೀಕರಣ ನೀಡಬೇಕೆಂದು ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕರ್ನಾಟಕದ ಒಂದು ಸಮುದಾಯಕ್ಕೆ ಸೇರಿದ್ದು ಎಂಬಂತೆ ಆಡಳಿತ ಮಾಡುತ್ತಿದೆ, ತುಷ್ಟೀಕರಣ ರಾಜಕಾರಣದಿಂದ ಹಿಂದೂಗಳ ಮೇಲೆ ಹಲ್ಲೆ ಹೆಚ್ಚುತ್ತಿದೆ, ಗಣೇಶ ವಿಸರ್ಜನೆಗೆ ಅವಕಾಶವಿಲ್ಲ, ಹಿಂದೂಗಳು ಜೈ ಶ್ರೀರಾಮ್ ಎನ್ನುವಂತಿಲ್ಲ, ಹಿಂದೂಗಳಿಗೆ ಭದ್ರತೆ ಇಲ್ಲದಂತಾಗಿದೆ.
ಭೂಮಿ ಕಬಳಿಸಲು ವಕ್ಫ್ ಬೋರ್ಡ್ ಯೋಜನೆ
ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮದಲ್ಲಿ ಸುಮಾರು 12 ಸಾವಿರ ಹಾಗೂ ಇಡೀ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 15 ಸಾವಿರ ಎಕರೆ ಭೂಮಿ ಕಬಳಿಸಲು ವಕ್ಫ್ ಬೋರ್ಡ್ ಯೋಜನೆ ರೂಪಿಸಿದೆ, ಇದಕ್ಕಾಗಿ ಕಂದಾಯ ಇಲಾಖೆಯಿಂದ 139 ರೈತರಿಗೆ ತಿಳಿವಳಿಕೆ ನೋಟಿಸ್ ನೀಡಲಾಗಿದೆ, ಇದು ಸರ್ಕಾರದಿಂದಲೇ ನಡೆಯುತ್ತಿರುವ ಲ್ಯಾಂಡ್ ಜಿಹಾದ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಬಾಂಬ್ ಸ್ಫೋಟ ಘಟನೆ, ಪಾಕಿಸ್ತಾನ ಪರ ಜೈಕಾರ, ಲವ್ ಜಿಹಾದ್ನಿಂದ ಹಿಂದೂ ಯುವತಿಯರು ಸಾಯುತ್ತಿದ್ದು, ಈಗ ಲ್ಯಾಂಡ್ ಜಿಹಾದ್ ಆರಂಭವಾಗಿದೆ ಎಂದಿದ್ದಾರೆ.
ಕಳೆದ ತಿಂಗಳು ವಿಜಯಪುರ ಜಿಲ್ಲೆಗೆ ಬಂದಿದ್ದ ಸಚಿವ ಜಮೀರ್ ಅಹ್ಮದ್, ಗೆಜೆಟ್ ಆಗಿರುವ ಆಸ್ತಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲು ಮೌಖಿಕ ಆದೇಶ ಮಾಡಿದ್ದಾರೆ, ಈ ಮೂಲಕ ಸರ್ಕಾರದಿಂದಲೇ ಅಧಿಕೃತವಾಗಿ ಒತ್ತುವರಿ ನಡೆಯುತ್ತಿದೆ, ಈ ಹಿಂದೆ ಟಿಪ್ಪು ಸುಲ್ತಾನ್, ಔರಂಗಜೇಬ್ನಂತಹ ಮತಾಂಧರು ಹಿಂದೂಗಳ ಭೂಮಿ, ಉದ್ಯೋಗ, ಬದುಕು ಕಿತ್ತುಕೊಂಡು ಮತಾಂತರ ಮಾಡಿದ್ದರು, ಈಗ ರೈತರ ಭೂಮಿ ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಆಧುನಿಕ ಟಿಪ್ಪು ಸುಲ್ತಾನ್
ಸಚಿವ ಜಮೀರ್ ಅಹ್ಮದ್, ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ, ಈ ರೀತಿ ಬಡ ರೈತರ ಭೂಮಿ ಕಸಿದು, ಮುಖ್ಯಮಂತ್ರಿ ಆಗುವ ಯೋಜನೆ ರೂಪಿಸಲಾಗಿದೆ, ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ನಿವೇಶನ ಲೂಟಿ ಮಾಡಿದರೆ, ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬ ಸಿಎ ನಿವೇಶನ ಲೂಟಿ ಮಾಡುತ್ತಿದೆ.
ಈಗ ಜಮೀರ್ ಅಹಮದ್ ಸಹಾ ಈ ಪಟ್ಟಿಗೆ ಸೇರಿ ಭೂಮಿ ಕೊಳ್ಳೆ ಹೊಡೆದು ವಕ್ಫ್ಗೆ ಸೇರಿಸಲು ತಂತ್ರ ಮಾಡಿದ್ದಾರೆ, ವಕ್ಫ್ ಆಸ್ತಿ ಹೆಸರಿನಲ್ಲಿ ಲ್ಯಾಂಡ್ ಜಿಹಾದ್ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯ ವಿರೋಧಿಸಿ ವಿಜಯಪುರದ ರೈತರು ಈ ವರ್ಷ ದೀಪಾವಳಿ ಆಚರಿಸದಿರಲು ನಿರ್ಧರಿಸಿದ್ದಾರೆ, ಅನ್ನ ನೀಡುವ ರೈತರ ಭೂಮಿಗೆ ಕನ್ನ ಹಾಕಿ, ರೈತರ ಮನೆ ದೀಪ ಕಸಿದುಕೊಂಡ ಕಾಂಗ್ರೆಸ್ ಸರ್ಕಾರಕ್ಕೆ ಅನ್ನದಾತರ ಶಾಪ ತಟ್ಟದೇ ಇರದು.
ಕೇಂದ್ರದ ಉದ್ದೇಶಿತ ವಕ್ಫ್ ಕಾಯ್ದೆ ತಿದ್ದುಪಡಿ ಪ್ರಸ್ತಾವಕ್ಕೆ ರಾಜ್ಯ ವಕ್ಫ್ ಬೋರ್ಡ್ ವಿರೋಧ ವ್ಯಕ್ತಪಡಿಸಿದೆ, ವಕ್ಫ್ ಬೋರ್ಡ್ ಆಡಳಿತ ಮಂಡಳಿ ಸಭೆಯಲ್ಲಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ, ಕೇಂದ್ರ ಸರ್ಕಾರ ಜಂಟಿ ಸಂಸದೀಯ ಸಮಿತಿ ರಚಿಸಿ, ಎಲ್ಲ ವಕ್ಫ್ ಬೋರ್ಡ್ಗಳಿಂದ ಮಾಹಿತಿ ಕೇಳಿದೆ, ಆದರೆ ಕರ್ನಾಟಕದ ವಕ್ಫ್ ಬೋರ್ಡ್ ಇದನ್ನು ವಿರೋಧಿಸಿದೆ, ನಾವು ಮಾಹಿತಿ ಕೊಡಲ್ಲ, ನಮ್ಮದು ಸ್ವಾಯತ್ತ ಸಂಸ್ಥೆ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಭೂಮಿ ಕಬಳಿಕೆ
ವಕ್ಫ್ ಬೋರ್ಡ್ನ ಹಳೆಯ ಎಲ್ಲ ನಿಯಮ, ಕಾನೂನುಗಳಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದಲಾವಣೆ ತರಲು ಮುಂದಾಗಿದೆ, ಇದಕ್ಕೂ ಮುನ್ನ ಆದಷ್ಟು ಪ್ರಮಾಣದಲ್ಲಿ ಕರ್ನಾಟಕದಲ್ಲಿ ಭೂಮಿ ಕಬಳಿಸಬೇಕೆಂಬ ಉದ್ದೇಶದಿಂದ ಲ್ಯಾಂಡ್ ಜಿಹಾದ್ ನಡೆಸಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರ ಮುಸ್ಲೀಮರಿಗೆ ಭೂಮಿ ಕಬಳಿಕೆ ಮಾಡಿಕೊಡುವ ಬದಲು, ಕೇಂದ್ರ ಸರ್ಕಾರದ ಜಂಟಿ ಸಲಹಾ ಸಮಿತಿ ಜೊತೆ ಚರ್ಚೆ ಮಾಡಲಿ, ಸ್ವತಂತ್ರವಾಗಿ ಕ್ರಮ ಕೈಗೊಳ್ಳುವ ಅಧಿಕಾರ ಯಾರಿಗೂ ಇಲ್ಲ, ವಿಜಯಪುರ ಜಿಲ್ಲೆಯಲ್ಲಿ ದೇವಸ್ಥಾನ, ಗುಡಿಗಳು ಇವೆ, ಎಷ್ಟು ದೇವಾಲಯಗಳಿಗೆ ನೋಟಿಸ್ ನೀಡಲಾಗಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಕುರಿತು ಸ್ಪಷ್ಟನೆ ನೀಡಬೇಕು, ಇದು ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯಲ್ಲಿ ಇತ್ತೇ ಎಂಬುದನ್ನು ತಿಳಿಸಬೇಕು, ರೈತರು ಕಂಗಾಲಾಗಿದ್ದಾರೆ, ಹಿಂದೂಗಳಿಗೆ ಭಯ ಶುರುವಾಗಿದೆ, ಈ ಸಮಯದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಂಡು ಜನರಿಗೆ ಸೂಕ್ತ ಮಾಹಿತಿ ಹಾಗೂ ಸ್ಪಷ್ಟೀಕರಣ ನೀಡಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದ್ದಾರೆ.