ಬೆಂಗಳೂರು:ಆರ್ಬಿಐ ಮತ್ತು ನಬಾರ್ಡ್ ಸಂಸ್ಥೆಗಳಿಗೆ ಸೂಚನೆ ನೀಡಿ ಕರ್ನಟಕದ ರೈತರಿಗೆ ಆಗಿರುವ ಸಾಲದ ಹೊರೆ ಸರಿಪಡಿಸಿ ಅನ್ಯಾಯ ಸರಿದೂಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರೈತರಿಗೆ ಸಹಕಾರ ಬ್ಯಾಂಕ್ಗಳ ಮೂಲಕ ಸಾಲ ನೀಡಲು ನಬಾರ್ಡ್ ನೀಡುತ್ತಿದ್ದ ಆರ್ಥಿಕ ನೆರವಿನ ಪ್ರಮಾಣ ಕಡಿಮೆ ಮಾಡಿದ್ದು, ಇದರಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಕಳೆದ ವರ್ಷ ನಬಾರ್ಡ್ ಕರ್ನಾಟಕಕ್ಕೆ5,600 ಕೋಟಿ ರೂ. ಆರ್ಥಿಕ ನೆರವು ನೀಡಿತ್ತು, ಈ ಬಾರಿ ಅದನ್ನು 2,340 ಕೋಟಿ ರೂ.ಗಳಿಗೆ ಇಳಿಕೆ ಮಾಡಿದೆ, ಇದರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮನವಿಪತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿಪತ್ರ ಸಲ್ಲಿಸಿ, ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸುವಂತೆ ಎಂದು ಮನವಿ ಮಾಡಿದರು.
2024-25ನೇ ಸಾಲಿನಲ್ಲಿ 9,162 ಕೋಟಿ ರೂ. ರಿಯಾಯಿತಿ ಸಾಲ ಮಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಆದರೆ, ನಬಾರ್ಡ್ 2,340 ಕೋಟಿ ರೂ.ಗಳಿಗೆ ಮಾತ್ರ ಅನುಮೋದನೆ ನೀಡಿದೆ, ಇದು ಕಳೆದ ವರ್ಷಕ್ಕಿಂತಲೂ ಶೇ.58 ರಷ್ಟು ಕಡಿಮೆಯಾಗಿದೆ.
ಆರ್ಬಿಐ ಸಾಮಾನ್ಯ ಸಾಲ ನೀತಿ ಕಡಿಮೆ ಮಾಡಿರುವುದರಿಂದಾಗಿ ಪ್ರಸಕ್ತ ವರ್ಷದ ರಿಯಾಯಿತಿ ದರ ಸಾಲ ಮಿತಿಯನ್ನೂ ಕಡಿತ ಮಾಡಬೇಕಿದೆ ಎಂಬುದಾಗಿ ನಬಾರ್ಡ್ ತಿಳಿಸಿದೆ, ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಮುಂಗಾರು ಚಟುವಟಿಕೆಗಳು ಚುರುಕುಗೊಂಡಿವೆ, ಹೀಗಾಗಿ ಅಲ್ಪಾವಧಿ ಕೃಷಿ ಸಾಲ ಬೇಡಿಕೆ ಹೆಚ್ಚಿದೆ ಎಂದು ವಿವರಿಸಿದ್ದಾರೆ.
ಪೂರ್ಣ ವಿವರ ಸಲ್ಲಿಕೆ
2019-20ನೇ ಸಾಲಿನಲ್ಲಿ 4,200 ಕೋಟಿ ರೂ. ಕೃಷಿ ಸಾಲಕ್ಕೆ ಮಂಜೂರಾಗಿತ್ತು, ನಂತರ ಹೆಚ್ಚುವರಿಯಾಗಿ 700 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದು, ಶೇ.15ರಷ್ಟು ಹೆಚ್ಚಿಸಲಾಗಿತ್ತು, 2020-21ರಲ್ಲಿ 5,500 ಕೋಟಿ ರೂ.ಗೆ ಅನುಮೋದನೆ ನೀಡಿ 1,300 ಕೋಟಿ ರೂ.ಗಳ ಹೆಚ್ಚುವರಿಯೊಂದಿಗೆ ಶೇ.27ರಷ್ಟು, 2022-23ರಲ್ಲಿ 5,550 ಕೋಟಿ ರೂ. ಜೊತೆಗೆ 66 ಕೋಟಿ ರೂ.ಗಳ ಹೆಚ್ಚುವರಿಯೊಂದಿಗೆ ಶೇ.1ರಷ್ಟು, 2023-24ರಲ್ಲಿ 5,600 ಕೋಟಿ ರೂ. ಜೊತೆಗೆ 55 ಕೋಟಿ ರೂ. ಹೆಚ್ಚುವರಿಯೊಂದಿಗೆ ಶೇ.1ರಷ್ಟು ಸಾಲ ಪ್ರಮಾಣ ಹೆಚ್ಚಿಸಲಾಗಿತ್ತು.
2021-22ನೇ ಸಾಲಿನಲ್ಲಿ 5,483 ಕೋಟಿ ರೂ.ಗಳ ಮಂಜೂರಾತಿ ನೀಡಿದ್ದು, 16 ಕೋಟಿ ರೂ.ಗಳನ್ನು ಕಡಿತ ಮಾಡಿ ಶೇ.1 ರಷ್ಟು ತಗ್ಗಿಸಲಾಗಿತ್ತು. ಈ ವರ್ಷ 2,340 ಕೋಟಿ ರೂ.ಗಳಿಗೆ ಮಾತ್ರ ಮಂಜೂರಾತಿ ನೀಡಿ 3,260 ಕೋಟಿ ರೂ.ಗಳನ್ನು ಕಡಿತ ಮಾಡುವ ಮೂಲಕ ಶೇ.58 ರಷ್ಟು ಸಾಲದ ಮೊತ್ತವನ್ನು ಕಡಿಮೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.