ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ವಿಚಾರದಲ್ಲಿ ನನ್ನ ಪತ್ನಿ ಪಾರ್ವತಿ ವಿರುದ್ಧ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇ.ಡಿ.) ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿರುವ ಐತಿಹಾಸಿಕ ಆದೇಶ ಕೇಂದ್ರ ಸರ್ಕಾರದ ಕಪಾಳಕ್ಕೆ ನ್ಯಾಯದಂಡ ಬಾರಿಸಿರುವ ತಪರಾಕಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಸುಪ್ರೀಂಕೋರ್ಟ್ ಆದೇಶ ಹೊರಬರುತ್ತಿದ್ದಂತೆ ಈ ಸಂಬಂಧ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ರಾಜಕೀಯವಾಗಿ ನನ್ನನ್ನು ಎದುರಿಸಲಾಗದ ಭಾರತೀಯ ಜನತಾ ಪಕ್ಷ ಮತ್ತು ಅದರ ಸಂಗಾತಿಗಳು ಸಂವಿಧಾನಿಕ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇ.ಡಿ.ಯನ್ನು ದುರ್ಬಳಕೆ ಮಾಡಿಕೊಂಡು ನನ್ನ ಪತ್ನಿ ವಿರುದ್ಧ ಸುಳ್ಳು ಪ್ರಕರಣ ಸೃಷ್ಟಿಸಿ, ನೀಡಿರುವ ಕಿರುಕುಳ ಅತ್ಯಂತ ಹೇಯವಾದುದು, ಇದರಿಂದ ನಾನು ಮತ್ತು ನನ್ನ ಕುಟುಂಬ ಅನುಭವಿಸಿದ ಮಾನಸಿಕ ಕಿರುಕುಳವನ್ನು ನಾನೆಂದೂ ಮರೆಯಲಾರೆ ಎಂದಿದ್ದಾರೆ.
ಆದೇಶ ಸ್ವಾಗತಿಸುತ್ತೇನೆ
ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿನೋದ್‌ಚಂದ್ರನ್ ಒಳಗೊಂಡ ಪೀಠದ ಆದೇಶವನ್ನು ನಾನು ವಿನೀತನಾಗಿ ಸ್ವಾಗತಿಸುತ್ತೇನೆ, ನನ್ನ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಸದಾ ಸಂವಿಧಾನ ಮತ್ತು ನೆಲದ ಕಾನೂನಿಗೆ ತಲೆಬಾಗುತ್ತಾ ಬಂದವನು, ಈ ನಂಬಿಕೆಯನ್ನು ಸುಪ್ರೀಂಕೋರ್ಟ್ ಆದೇಶ ಉಳಿಸಿ ಕಾಪಾಡಿದೆ.
ನನ್ನ ಮನದಾಳದ ಮಾತನ್ನೇ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ, ರಾಜಕೀಯ ಸಮರಕ್ಕೆ ಮತದಾರರನ್ನು ಬಳಸಕೊಳ್ಳಬೇಕೇ ಹೊರತು, ಜಾರಿ ನಿರ್ದೇಶನಾಲಯದಂತಹ ಸಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಬಾರದು ಎಂಬ ಮಾತುಗಳು ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜ್ಞಾವಂತ ಭಾರತೀಯನ ಅಭಿಪ್ರಾಯವಾಗಿದೆ.
ಕಳೆದ 10-11 ವರ್ಷಗಳಿಂದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆದಾಯ ತೆರಿಗೆ (ಐಟಿ), ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.)ದಂತಹ ಸಂಸ್ಥೆಗಳ ದುರ್ಬಳಕೆ ಮೂಲಕ ರಾಜಕೀಯ ದ್ವೇಷಕ್ಕೆ ಬಲಿಯಾದ ಎಲ್ಲರಿಗೂ ಈ ತೀರ್ಪು ಸಮಾಧಾನ ಉಂಟು ಮಾಡಿದೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ.

ಮೋದಿ, ಷಾ ಎಚ್ಚೆತ್ತುಕೊಳ್ಳಬೇಕು
ಕಣ್ಣುತೆರೆಸುವ ಸುಪ್ರೀಂಕೋರ್ಟ್‌ನ ಆದೇಶದ ನಂತರವಾದರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಎಚ್ಚೆತ್ತುಕೊಂಡು ಐಟಿ, ಸಿಬಿಐ ಮತ್ತು ಇ.ಡಿ.ಯಂತಹ ಸಂವಿಧಾನಿಕ ಸಂಸ್ಥೆಗಳ ದುರ್ಬಳಕೆ ನಿಲ್ಲಿಸಿ ಅವುಗಳಿಗೆ ಸ್ವಾಯತ್ತತೆ ಕೊಟ್ಟು ತಮ್ಮ ಪಾಪ ತೊಳೆದುಕೊಳ್ಳಬೇಕು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಕಪೋಲಕಲ್ಪಿತ ಆರೋಪಗಳನ್ನು ಮಾಡುತ್ತಾ ಬಂದಿರುವ ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಕಿಂಚಿತ್ತಾದರೂ ಮಾನ-ಮರ್ಯಾದೆ ಎನ್ನುವುದು ಉಳಿದುಕೊಂಡಿದ್ದರೆ ಅವರೆಲ್ಲರೂ ತಕ್ಷಣ ತಮ್ಮ ತಪ್ಪಿಗಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.


