ಬೆಂಗಳೂರು:ರಾಜ್ಯದ 9 ವೈದ್ಯಕೀಯ ಕಾಲೇಜುಗಳಲ್ಲಿ ಹೊಸದಾಗಿ 450 ಸೀಟುಗಳನ್ನು ಹೆಚ್ಚುವರಿಯಾಗಿ ಕೇಂದ್ರ ಸರ್ಕಾರ ಮಂಜೂರು ಮಾಡಿದೆ.
ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ಕಲಬುರಗಿ, ರಾಯಚೂರು, ವಿಜಯನಗರ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲದೆ, ಬೆಂಗಳೂರಿನ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೆಚ್ಚುವರಿಯಾಗಿ ತಲಾ 50 ಸೀಟುಗಳನ್ನು ನೀಡಿದೆ.
1,000 ಸೀಟಿಗೆ ಮನವಿ
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನೀಡುವಂತೆ 1,000 ಸೀಟುಗಳನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ಕೇಂದ್ರದ ಎನ್‌ಎಂಸಿ ಅಧ್ಯಕ್ಷ ಅಭಿಜಿತ್ ಚಂದ್ರಕಾಂತ್ ಸೇಠ್ ಅವರಿಗೆ ಮನವಿ ಮಾಡಿದ್ದರು.
ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿದ ಎನ್‌ಎಂಸಿ ಹೆಚ್ಚುವರಿಯಾಗಿ 450 ಸೀಟುಗಳ ಪ್ರವೇಶಾವಕಾಶ ಕಲ್ಪಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ.ಶರಣಪ್ರಕಾಶ್ ಪಾಟೀಲ್, ನೀಟ್ ಫಲಿತಾಂಶದ ನಂತರ ಪ್ರಕಟಿಸಿದ ಮೊದಲ ಸುತ್ತಿನ ಸೀಟಿನ ಹಂಚಿಕೆಯಲ್ಲಿ ರಾಜ್ಯಕ್ಕೆ 9,263 ಸೀಟುಗಳು ಲಭ್ಯವಿದ್ದವು.
ತಲಾ 50 ಸೀಟುಗಳ ಹೆಚ್ಚಳ
ರಾಜ್ಯದ 8 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಸೀಟುಗಳ ಹೆಚ್ಚಳಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ ನೀಡಿರುವುದರಿಂದ ಪ್ರಸ್ತುತ ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ 9,663ಕ್ಕೆ ಏರಿಕೆ ಆಗಲಿದೆ ಎಂದರು.
ರಾಷ್ಟ್ರಾದ್ಯಂತ 8,000 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಎನ್‌ಎಂಸಿ ಪ್ರಕಟಿಸಿತ್ತು.
ಈ ಘೋಷಣೆ ಬೆನ್ನಲ್ಲೇ ನಮ್ಮ 15 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ 1,000 ಸೀಟುಗಳನ್ನು ಮಂಜೂರು ಮಾಡುವಂತೆ ಮಾಡಿದ ಪ್ರಸ್ತಾವನೆಗೆ ನಮಗೆ 450 ಸೀಟುಗಳು ಲಭ್ಯವಾಗಿವೆ.
250 ಸೀಟು ಪರಿಶೀಲನೆಯಲ್ಲಿ
ರಾಮನಗರ ಮತ್ತು ಕನಕಪುರದಲ್ಲಿ ಹೊಸದಾಗಿ ಸ್ಥಾಪಿಸಲಾದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ತಲಾ 250 ಸೀಟುಗಳ ಪ್ರಸ್ತಾವನೆ ಇನ್ನೂ ಪರಿಶೀಲನೆಯಲ್ಲಿದೆ ಎಂದರು.
ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಮುಂದುವರೆದ ರಾಜ್ಯವಾಗಿದ್ದು, ಪ್ರತಿ ವರ್ಷ ಸಾವಿರಾರು ವೈದ್ಯಕೀಯ ಪದವಿ ಆಕಾಂಕ್ಷಿಗಳು ಪ್ರವೇಶ ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ನಮಗೆ ಹೆಚ್ಚುವರಿ ಸೀಟುಗಳ ಪ್ರವೇಶಕ್ಕೆ ಅವಕಾಶ ನೀಡಿದರೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದರ ಲಾಭ ದೊರೆಯಲಿದೆ ಎಂಬುದಾಗಿ ಕೋರಿದ್ದೆವು ಎಂದರು.

