ಮಕ್ಕಳ ಮತ್ತು ಜನಾಂಗದ ಭವಿಷ್ಯ ದೃಷ್ಟಿಯಿಂದ ಬಹುಮುಖ್ಯ
ಬೆಂಗಳೂರು:ಪ್ರತಿ ಜನಾಂಗದವರಿಗೂ ಜಾತಿಗಣತಿ ನಮ್ಮ ನಮ್ಮ ಮಕ್ಕಳ ಮತ್ತು ಜನಾಂಗದ ಭವಿಷ್ಯದ ದೃಷ್ಟಿಯಿಂದ ಬಹು ಮುಖ್ಯವಾಗಿದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನಮಠ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ತಿಳಿಸಿದ್ದಾರೆ.
ಈ ಸಂಬಂಧ ಸಂದೇಶ ನೀಡಿರುವ ಶ್ರೀಗಳು, 60 ವಿವಿಧ ವಿಷಯಗಳೊಂದಿಗೆ ಗಣತಿದಾರರು ಮನೆಗಳಿಗೆ ಬಂದಾಗ ತಪ್ಪದೇ ಇದ್ದು, ಮಾಹಿತಿಯನ್ನು ನಿಖರವಾಗಿ, ವಸ್ತುನಿಷ್ಠವಾಗಿ, ವಿಚಾರಬದ್ಧವಾಗಿ ತಿಳಿಸಿ ಎಂದಿದ್ದಾರೆ.
ಧರ್ಮದ ಕಾಲಂ 8ರಲ್ಲಿ ಹಿಂದೂ ಎಂದೂ, ಜಾತಿ ಕಾಲಂ 9ರಲ್ಲಿ ಒಕ್ಕಲಿಗ ಎಂದೂ, ಕಾಲಂ 10ರಲ್ಲಿ ಉಪಜಾತಿಯನ್ನು ಒಕ್ಕಲಿಗ ಎಂದೇ ಬರೆಸಿರಿ. ಒಕ್ಕಲಿಗ ಜನಾಂಗವನ್ನು ವ್ಯವಹಾರ ಭಾಷೆಯಲ್ಲಿ ಗೌಡ ಎಂದು ಹೇಳುತ್ತೇವೆ. ಆದರೆ ಸಮೀಕ್ಷೆ ಸಂದರ್ಭದಲ್ಲಿ ಎಲ್ಲಿಯೂ ಗೌಡ ಎಂಬುದನ್ನು ನಮೂದಿಸಬೇಡಿ, ಬರೆಸಬೇಡಿ. ನಮ್ಮ ಉಪಜಾತಿಗಳು ಕುಟುಂಬದ ಸಾಂಸ್ಕೃತಿಕ ಆಚರಣೆಗೆ ಸೀಮಿತವಾಗಿರಬೇಕೇ ಹೊರತು ದಾಖಲೆಯಲ್ಲಿ ಅಲ್ಲ. ನಾವೆಲ್ಲ ಒಂದೇ ಜಾತಿ ಅದು ಒಕ್ಕಲಿಗ. ಕೋಡ್ ನಂಬರ್ 1541 ಎಂದು ಸ್ವಾಮೀಜಿ ಹೇಳಿದ್ದಾರೆ.
ಕಳೆದ 94 ವರ್ಷಗಳ ನಂತರ ಸರ್ಕಾರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಜೊತೆಯಲ್ಲಿ ಜಾತಿಗಣತಿಯ ನಿರ್ಧಾರ ಮಾಡಿ ಸೆಪ್ಟೆಂಬರ್ 22ರಿಂದ ಕಾರ್ಯಾರಂಭ ಮಾಡಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ 4 ರಿಂದ ಪ್ರಾರಂಭಿಸಲಾಗಿದೆ.ಒಂದು ವೇಳೆ ಗಣತಿದಾರರು ಮನೆಗೆ ಬಂದಾಗ ನೀವು ಮನೆಯಲ್ಲಿ ಇಲ್ಲದಿದ್ದರೆ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವೆಬ್ ಸೈಟ್ ನಲ್ಲಿ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಿ ಅಪ್ಲೋಡ್ ಮಾಡಬಹುದು ಎಂಬ ಸಲಹೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಏನೇ ಕೆಲಸವಿದ್ದರೂ 94 ವರ್ಷಗಳ ನಂತರ ನಡೆಯುವ ಸಮೀಕ್ಷೆಯಲ್ಲಿ ತಪ್ಪದೇ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

