ಬೆಂಗಳೂರು:ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರುತ್ತೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ, ಹಿರಿಯ ಮುತ್ಸದ್ಧಿ ರಾಜಕಾರಣಿ ಎಚ್.ಡಿ.ದೇವೇಗೌಡ ರಾಷ್ಟ್ರದ ಅಭಿವೃದ್ಧಿ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.
ಪಕ್ಷದ ವರಿಷ್ಠರ ನಿರ್ಧಾರ ಅಂತಿಮ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಗೊಂದಲ ಇಲ್ಲ, ಅವರು ಎನ್‌ಡಿಎ ಭಾಗವಾಗಿದ್ದಾರೆ, ದೇವೇಗೌಡ ಅವರು ನೀಡಿರುವ ಹೇಳಿಕೆ ಗಮನಿಸಿದ್ದೇನೆ, ಆದರೆ, ಈ ವಿಷಯದಲ್ಲಿ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದರು.
ಲೋಕಸಭಾ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಜೊತೆ ಮೈತ್ರಿ ಎಂದಿದ್ದ ದೇವೇಗೌಡ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪ್ರತ್ಯೇಕ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದರು.
ಸೀಟು ಹಂಚಿಕೆ ವಿಚಾರ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಾತನಾಡುವುದು ಸಣ್ಣ ವಿಷಯವಾಗುತ್ತದೆ.
ಸ್ಥಳೀಯ ಮಟ್ಟದಲ್ಲಿ ನಾವು ಮತ್ತು ಬಿಜೆಪಿ ಸೌಹಾರ್ದಯುತ ಸ್ಪರ್ಧೆ ನಡೆಸುತ್ತೇವೆ ಎಂದು ಶುಕ್ರವಾರ ತಿಳಿಸಿದ್ದರು.

