ಸ್ವಿಟ್ಜರ್‌ಲ್ಯಾಂಡ್, ದಾವೋಸ್:ಅಧಿಕಾರ ಹಂಚಿಕೆ ವಿಚಾರದಲ್ಲಿ ತಮ್ಮ ನಾಯಕರು ತಮಗೆ ನಿರಾಸೆ ಮಾಡಲಾರರು ಎಂಬ ವಿಶ್ವಾಸವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಭಾಗಿಯಾಗಿರುವ ಅವರು ಖಾಸಗಿ ಸುದ್ದಿವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಎಲ್ಲ ವಿಚಾರಗಳ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಮಾಧ್ಯಮದಲ್ಲಿ ಚರ್ಚಿಸುವ ವಿಷಯ ಅಲ್ಲ
ಅಧಿಕಾರ ಹಂಚಿಕೆ ಇದು ಮಾಧ್ಯಮಗಳಲ್ಲಿ ಚರ್ಚಿಸಬೇಕಾದ ವಿಷಯ ಅಲ್ಲ, ಇದು ನಮ್ಮಲ್ಲಿಯೇ ಆಗಬೇಕಾದ ಚರ್ಚೆ, ನಾನು ಸದಾ ಧನಾತ್ಮಕವಾಗಿದ್ದು, ಆಸೆಯ ಮೇಲೆಯೇ ಬದುಕುತ್ತೇನೆ.
ಶ್ರಮಕ್ಕೆ ಯಾವಾಗಲೂ ಫಲ ಸಿಗುತ್ತದೆ ಎಂಬ ನಂಬಿಕೆ ನನಗಿದೆ, ನನ್ನ ನಾಯಕರು ಖಂಡಿತವಾಗಿಯೂ ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂಬ ಪೂರ್ಣ ವಿಶ್ವಾಸವಿದೆ.
ಸಂಖ್ಯೆಗಳ ತೀರ್ಮಾನ ಬೇಕಿಲ್ಲ
ತಮಗೆ ಶಾಸಕರ ಬೆಂಬಲ ಇಲ್ಲ ಎಂಬುದಾಗಿ ಯಾರು ಹೇಳಿದ್ದು ಕೆಪಿಸಿಸಿ ಅಧ್ಯಕ್ಷನಾದ ತನಗೆ ಪಕ್ಷದ 140 ಶಾಸಕರ ಬೆಂಬಲವೂ ಇದೆ, ಸಂಖ್ಯೆಗಳ ಬಗ್ಗೆ ತೀರ್ಮಾನ ಬೇಕಿಲ್ಲ, ನಾವು ತಂಡವಾಗಿ ಕೆಲಸ ಮಾಡುತ್ತಿದ್ದು ಸಿದ್ದರಾಮಯ್ಯ ಮತ್ತು ತನಗೆ ಇಬ್ಬರಿಗೂ ಎಲ್ಲ ಶಾಸಕರ ಬೆಂಬಲ ಇದೆ.
ನಾವು ಇಬ್ಬರೂ ಕೂತು ಚರ್ಚಿಸಿದ್ದು, ಎಲ್ಲವನ್ನೂ ಪಕ್ಷದ ನಾಯಕರ ತೀರ್ಮಾನಕ್ಕೆ ಬಿಟ್ಟಿದ್ದೇವೆ, ಸಿದ್ದರಾಮಯ್ಯ ಮತ್ತು ತಾನು ಇಬ್ಬರೂ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನ ಒಪ್ಪಿಕೊಳ್ಳುವುದಾಗಿ ಈಗಾಗಲೇ ಹೇಳಿದ್ದೇವೆ ಎಂದರು.

