ಫಿಲಡೆಲ್ಫಿಯಾ(ಅಮೆರಿಕ):ಪ್ರಸಕ್ತ ಸಾಲಿನ ಸೆಪ್ಟೆಂಬರ್ 4 ರಿಂದ 6 ರವರೆಗೆ ಅಮೆರಿಕದ ಫಿಲಡೆಲ್ಫಿಯಾ ನಗರದಲ್ಲಿ ಅಕ್ಕ ಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅಮೆರಿಕ ಕನ್ನಡಿಗರ ಅತೀ ದೊಡ್ಡ ಸಂಘಟನೆ ’ಅಕ್ಕ’ ಕಳೆದ 25 ವರ್ಷಗಳಿಂದ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಕನ್ನಡ ಸೇವೆ ಉತ್ತೇಜಿಸುವ ಮಹತ್ವದ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ವಿಶ್ವಾದ್ಯಂತ ಕನ್ನಡಾಭಿಮಾನಿಗಳು
ಬೆಳ್ಳಿ ಹಬ್ಬ ಸಂಭ್ರಮ ಆಚರಣೆ ವಿಶ್ವಾದ್ಯಂತ ಕನ್ನಡಿಗರ ಏಕತೆಯ ಪ್ರತೀಕವಾಗಿದ್ದು, ಕರ್ನಾಟಕ ಹಾಗೂ ಅಮೆರಿಕದ ವಿವಿಧ ರಾಜ್ಯಗಳಿಂದ ಕನ್ನಡಾಭಿಮಾನಿಗಳು ಭಾಗವಹಿಸಲಿದ್ದಾರೆ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಾಣಿಜ್ಯ ಹಾಗೂ ಉದ್ಯಮಿಗಳ ಸಮ್ಮೇಳನ, ವಿಶೇಷ ಪ್ರದರ್ಶನ ಮಳಿಗೆಗಳು, ಕನ್ನಡ ಸಿನಿಮಾಗಳು, ನಾಟಕಗಳ ಪ್ರದರ್ಶನ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕನ್ನಡಿಗರ ಏಕತೆಯ ಸಂಭ್ರಮ
ಅಕ್ಕ ರಜತ ಮಹೋತ್ಸವ ಕಾರ್ಯಕ್ರಮ ಒಂದು ಉತ್ಸವ ಮಾತ್ರವಲ್ಲ, ಇದು 25 ವರ್ಷಗಳ ಸಾಧನೆ, ಸಮರ್ಪಣೆ ಮತ್ತು ಕನ್ನಡಿಗರ ಏಕತೆಯ ಸಂಭ್ರಮವಾಗಿದೆ, ಐತಿಹಾಸಿಕ ಸಮಾರಂಭಕ್ಕೆ ಎಲ್ಲರನ್ನು ಆತ್ಮೀಯವಾಗಿ ಆಹ್ವಾನಿಸುವುದಾಗಿ ಸಂಸ್ಥೆ ತಿಳಿಸಿದೆ.
ಕೆಲವೇ ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ನೋಂದಣಿ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಅಕ್ಕ ಸಂಸ್ಥೆ ಅಧ್ಯಕ್ಷ ಮುಧು ರಂಗಯ್ಯ ತಿಳಿಸಿದ್ದಾರೆ.

